ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಾಖ್ಯಾನ' ಲೇಖನವು ಬಹುಶಃ ಅವರು ಯೋಜಿಸಿದ್ದ ಸಂಗೀತ ರತ್ನಾಕರದ ಸಮಗ್ರ ವ್ಯಾಖ್ಯಾನದ ಒಂದು ಭಾಗವಾಗಿದ್ದು, ಶಾಸ್ತ್ರಗ್ರಂಥ ವ್ಯಾಖ್ಯಾನಕ್ಕೆ ಮಾದರಿಯಾಗಿದೆ. 'ಎರಡು ವಿಮರ್ಶೆಗಳು' ಎಂಬ ಕಿರು ಲೇಖನಗಳು, ಅವರ ವಿಮರ್ಶೆಯ ಕ್ರಮಕ್ಕೆ, ಸಂಕ್ಷೇಪವಾಗಿ ವಿಶ್ಲೇಷಿಸುವ ಸಾಮರ್ಥ್ಯಕ್ಕೆ ಸಾಕ್ಷಿಗಳಾಗಿವೆ. 'ಬೆದಂಡೆ ಚತ್ತಾಣ' 'ದೇಶೀಯ ಛಂದಸ್ಸುಗಳ ಮೂಲ - ಏಲೆ' ಮತ್ತು 'ಸೂಡ - ಸೂಳಾದಿ - ಸಾಲಗ' ಎಂಬ ಲೇಖನಗಳು ಒಂದು ಶಾಸ್ತ್ರೀಯ ಪರಿಕಲ್ಪನೆ, ಒಂದು ಪದ್ಯಜಾತಿ, ಒಂದು ಛಂದೋ ಬಂಧವನ್ನು ಕುರಿತು ಎಷ್ಟೊಂದು ಆಳವಾಗಿ ವಿಚಾರಮಾಡಬಹುದು, ಎಷ್ಟು ಹೊಸ ವಿಷಯಗಳನ್ನು ಹೊರಗೆಡಹಬಹುದು ಎಂಬುದನ್ನು ತೋರಿಸುತ್ತವೆ. ಸಂಗೀತ ಮತ್ತು ಛಂದಸ್ಸಿನ ಶಾಸ್ತ್ರೀಯ ಸಂಗತಿಗಳ ಮೌಲಿಕ (basic, fundamental) ವಿವೇಚನೆ ಯಲ್ಲಿ ಭಟ್ಟರು ಅದೆಂತಹ ಪರಿಣತರಾಗಿದ್ದರೆಂಬುದಕ್ಕೆ ಈ ಲೇಖನಗಳು ನಿದರ್ಶನಗಳು.

ಕುಕ್ಕಿಲರ ಎರಡು ಗ್ರಂಥಗಳಾದ 'ಭಾರತೀಯ ಸಂಗೀತಶಾಸ್ತ್ರ' ಮತ್ತು 'ಛಂದೋಂಬುಧಿ'ಗಳಿಂದ ಎರಡು ಉದ್ಧರಣಗಳನ್ನು ತೆಗೆದುಕೊಂಡಿದೆ. ಅವರು ಗ್ರಂಥವೊಂದನ್ನು ಬರೆಯುವಾಗ, ಅವರ ಬರಹದ ವ್ಯವಸ್ಥೆ ಮತ್ತು ರೀತಿಗಳು ಬಿಡಿಬರಹಕ್ಕಿಂತ ಭಿನ್ನವಾಗಿ ಹೇಗಿರುತ್ತವೆ ಎಂಬುದರ ಪರಿಚಯಕ್ಕಾಗಿ ಅವನ್ನು ನೀಡಿರುವುದಾಗಿದೆ.

ಈ ಸಂಕಲನದ ಉಳಿದೆಲ್ಲ ಲೇಖನಗಳಿಗಿಂತ ವಿಭಿನ್ನವಾದುದು ಅವರ ನಿಕಟ ಬಂಧುಗಳಾದ ಬಡೆಕ್ಕಿಲ ವೆಂಕಟರಮಣ ಭಟ್ಟರ ವ್ಯಕ್ತಿಚಿತ್ರ. ಈ ರೀತಿಯ ಬರಹ ಅವರು ಬರೆದಿರುವುದು ಪ್ರಾಯಃ ಇದೊಂದೇ. ಶಾಸ್ತ್ರೀಯ ವಿಚಾರಗಳ ಕುರಿತು 'ಗಂಭೀರ'ವಾದ ಸಂಶೋಧನಾತ್ಮಕ ಲೇಖನಗಳನ್ನು ಬರೆದ ಕುಕ್ಕಿಲರು, ಈ ರೀತಿಯ ಬರಹವನ್ನು ಅದೆಷ್ಟು ಸರಸವಾಗಿ, ಆತ್ಮೀಯ ಚಿತ್ರಣವಾಗಿ ಬರೆಯಬಲ್ಲರೆಂಬುದನ್ನು ತೋರಿಸಿ ನಮ್ಮನ್ನು ಬೆರಗುಗೊಳಿಸುತ್ತಾರೆ. ಒಟ್ಟಿನಲ್ಲಿ ಕುಕ್ಕಿಲ ಕೃಷ್ಣ ಭಟ್ಟರು ಕನ್ನಡದ ವಿರಳ ಪಂಕ್ತಿಯ ಓರ್ವ ಸಮರ್ಥ ವಿದ್ವಾಂಸ ಲೇಖಕರು. ಕೆಲವರೇ ಪ್ರವೇಶಿಸುವ, ಬಹಳಷ್ಟು ಪಾಂಡಿತ್ಯ, ಪರಿಶ್ರಮಗಳನ್ನು ಬಯಸುವ ಕ್ಷೇತ್ರಗಳಲ್ಲಿ ಅವರು ಕೈ ಆಡಿಸಿದವರು. ಛಂದಸ್ಸು, ಯಕ್ಷಗಾನ, ಸಂಗೀತ, ನಾಟ್ಯಶಾಸ್ತ್ರ ಕ್ಷೇತ್ರಗಳಲ್ಲಿ ದೇಶದ ಉನ್ನತ ವಿದ್ವಾಂಸರೊಂದಿಗೆ ಹೋಲಿಸಬಹುದಾದ ಯೋಗ್ಯತೆ ಅವರದು. ಶಾಸ್ತ್ರೀಯ ಸಂಗೀತ, ಯಕ್ಷಗಾನ, ಛಂದಸ್ಸು- ಇವುಗಳಲ್ಲಿ ಸಮಾನ ಪರಿಶ್ರಮವಿದ್ದ ಮೂವರು ವಿದ್ವಾಂಸರಲ್ಲಿ (ಇನ್ನಿಬ್ಬರು ದಿ। ಭೀಮರಾವ್ ಚಿಟಗುಪ್ಪಿ ಮತ್ತು ಇತ್ತೀಚೆಗೆ ನಿಧನರಾದ ಪ್ರೊ। ಎಂ. ರಾಜಗೋಪಾಲಾಚಾರರು) ಇವರೊಬ್ಬರು. ಪದವಿ-ಉದ್ಯೋಗಗಳ ಒತ್ತಡಗಳಿಲ್ಲದೆ, ಸ್ವಂತ ಆಸಕ್ತಿ, ಅಭಿರುಚಿಗಳಿಗಾಗಿ ಶಾಸ್ತ್ರಗಳನ್ನು ಓದಿದವರು, ಅವುಗಳಲ್ಲಿ ಮುಳುಗೆದ್ದು ಈಸಿದವರು, ಆ ಕುರಿತು ಬರೆದವರು. ಕುಕ್ಕಿಲರು ನೈಜ ಶಾಸ್ತ್ರಪ್ರೇಮಿ, ಸಂಶೋಧಕ.

ಕುಕ್ಕಿಲರ ಶೈಲಿ ಕ್ರಮವಾದ 'ಪಠ್ಯರೀತಿ'ಯ ಮಂಡನೆಯದಲ್ಲದ, ತುಸು ಜಿಗುಟಾದ ಶೈಲಿ, ಬರವಣಿಗೆ ಖಚಿತ, ನಿರ್ದುಷ್ಟ, ಕೆಲವೆಡೆ ತೀರ ಸಂಕ್ಷಿಪ್ತವಾದುದರಿಂದ, ಅವರ ಅಭಿಪ್ರಾಯವನ್ನು ತಿಳಿಯಲು ಎರಡೆರಡು ಬಾರಿ ಓದಬೇಕಾಗುತ್ತದೆ. ಈ ಸಮಸ್ಯೆಯ ಅರಿವು ಅವರಿಗಿತ್ತು ಎಂಬುದೂ, ಅವರ ಕೆಲವು ಲೇಖನಗಳಲ್ಲಿ, ಅವರು ವಿಷಯವನ್ನು ಮರಳಿ ವಿವರಿಸುವ ಕ್ರಮದಿಂದ ಗೊತ್ತಾಗುತ್ತದೆ. ತನ್ನ ಬರಹಗಳಿಂದ ಕೆಲವು ತಪ್ಪುಕಲ್ಪನೆ ಉಂಟಾಗಿವೆ ಎಂಬುದನ್ನರಿತ ಅವರು “ನಾನು ಹೇಳಿದ್ದೇನು?' ಎಂಬ