ಈ ಪುಟವನ್ನು ಪ್ರಕಟಿಸಲಾಗಿದೆ

ಪುಸ್ತಕವೊಂದನ್ನು ಬರೆಯಲಿದ್ದೇನೆ ಎನ್ನುತ್ತಿದ್ದರು! ಈಗಾಗಲೇ 'ತೀರ್ಮಾನವಾದ ವಿಷಯಗಳಲ್ಲೂ ಸ್ಥಾಪಿತ ಅಭಿಪ್ರಾಯಗಳ ಹೊಯ್ಲಿಗೆ ಸಿಕ್ಕದೆ ಸ್ವತಂತ್ರವಾಗಿ, ಸರಿಯಾಗಿ ಪರಿಶೀಲಿಸಿ, ಯೋಚಿಸಿ ನಿರ್ಣಯಿಸುವುದು ಅವರ ವಿಧಾನ.

ಶಾಸ್ತ್ರೀಯ ಸಂಶೋಧನಾ ರಂಗಕ್ಕೆ ಅವರ ಕೊಡುಗೆ ದೊಡ್ಡದು. ಭಾರತೀಯ ಸಂಸ್ಕೃತಿ, ಶಾಸ್ತ್ರಗಳ ವಿಷಯದಲ್ಲಿ ದೇಶೀಯ ವಿಶ್ಲೇಷಣೆಯ ವಿಧಾನವೊಂದರ ರೂಪೀಕರಣದಲ್ಲಿ ಕುಕ್ಕಿಲರ ದಾರಿಯು ನಮಗೆ ಮಾರ್ಗದರ್ಶಕ.

ಕುಕ್ಕಿಲ ಪ್ರಶಸ್ತಿ

ಕುಕ್ಕಿಲ ಕೃಷ್ಣ ಭಟ್ಟರ ಲೇಖನಗಳೊಂದಿಗೆಯೆ ಅವರ ಸಂಸ್ಮರಣ ಸಂಪುಟವೂ ಇರಬೇಕೆಂಬ ಅಭಿಪ್ರಾಯದಿಂದ, ಈ ವಿಭಾಗವನ್ನು ಸಂಯೋಜಿಸಿದೆ. ಪ್ರತ್ಯೇಕವಾದ ಸಂಸ್ಮರಣ ಗ್ರಂಥಕ್ಕಿಂತ, ಈ ರೀತಿಯ ಸಂಯೋಜನೆಯು ಹೆಚ್ಚು ಸೂಕ್ತ ಮತ್ತು ಅನುಕೂಲಕರ ಎಂದು ಭಾವಿಸಿ ಈ ವಿಭಾಗವನ್ನು ಇಲ್ಲಿ ಸೇರಿಸಿ, 'ಕುಕ್ಕಿಲ ಪ್ರಶಸ್ತಿ' ಎಂದು ಹೆಸರಿಸಿದೆ. ಇದರಲ್ಲಿ ಕೃಷ್ಣ ಭಟ್ಟರನ್ನು ಹತ್ತಿರದಿಂದ ಬಲ್ಲ ಏಳುಜನ ಹಿರಿ-ಕಿರಿಯರ ಬರಹಗಳಿದ್ದು, ಅವರ ಜೀವನ, ಸಾಧನೆ, ವ್ಯಕ್ತಿತ್ವಗಳ ಒಂದು ಒಳ್ಳೆಯ ಚಿತ್ರವನ್ನು ಈ ಲೇಖನಗಳು ನೀಡುತ್ತವೆ ಎಂದು ಭಾವಿಸಿದ್ದೇನೆ.

ಸಂಪುಟದ ಸಂಪಾದನ

ಕುಕ್ಕಿಲರ ನಿಧನ ವರ್ಷ (೧೯೮೮)ದಲ್ಲಿ ಈ ಸಂಕಲನದ ಸಂಕಲ್ಪವಾಗಿತ್ತು. ಮೊದಲ ಭಾಗದ ಹೆಚ್ಚಿನ ಲೇಖನಗಳನ್ನು ಅವರ ಹಿರಿಯ ಪುತ್ರ ಶ್ರೀ ಕುಕ್ಕಿಲ ನಾರಾಯಣ ಭಟ್ಟರು ಓರಣವಾಗಿ ಸಂಗ್ರಹಿಸಿ, ನನ್ನ ಕೆಲಸವನ್ನು ಸುಲಭಮಾಡಿಕೊಟ್ಟಿದ್ದಾರೆ. ಈ ಲೇಖನಗಳನ್ನು ಮತ್ತು ಅನಂತರ ದೊರಕಿದ ಕೆಲವನ್ನು ಒಂದು ಕ್ರಮದಿಂದ ಜೋಡಿಸಿದೆ. ಯಕ್ಷಗಾನದಿಂದ ಆರಂಭಿಸಿ, ಅನಂತರ ಅದರಲ್ಲಿ ಪಾರ್ತಿಸುಬ್ಬನ ಸಮಸ್ಯೆಯ ವಿಚಾರ, ಆ ಬಳಿಕ ನಾಟ್ಯಶಾಸ್ತ್ರ, ಆಮೇಲೆ ಸಂಗೀತ ಶಾಸ್ತ್ರ, ಛಂದಶ್ಯಾಸ್ತ್ರ, ಕೊನೆಗೆ ವ್ಯಕ್ತಿಚಿತ್ರಣಪರವಾದ ಒಂದು ಲೇಖನ ಈ ಅನುಕ್ರಮವನ್ನು ಮಾಡಿದೆ. ಪಾರ್ತಿಸುಬ್ಬನ ವಿಚಾರವಾದ ಲೇಖನಗಳಿಗೆ ಹಿನ್ನೆಲೆಯಾಗಿ ಸುಬ್ಬನ ಸಮಸ್ಯೆಯ ಕುರಿತ ಪರಿಚಯಕ್ಕಾಗಿ ಸಂಪಾದಕನ ಚಿಕ್ಕ ಟಿಪ್ಪಣಿ ಇದೆ. ಬಿಡಿ ಬರಹಗಳಲ್ಲದೆ, ಕುಕ್ಕಿಲರ ಕೃತಿಗಳ ಭಾಗವಾದ, ಎರಡು ಅಂಶಗಳನ್ನು ಇಲ್ಲಿ ಸೇರಿಸಿದೆ. ಒಂದು “ಭಾರತೀಯ ಸಂಗೀತ ಶಾಸ್ತ್ರ'ದ ಕೆಲವು ಪುಟಗಳು, ಎರಡು ಅವರು ಸಂಪಾದಿಸಿದ 'ಛಂದೋಂಬುಧಿ'ಯ ಪೀಠಿಕೆಯ ಒಂದು ಭಾಗ. ಇವು ಅವರ ಪಾಂಡಿತ್ಯಕ್ಕೂ, ಒಂದು ವಿಷಯದ ಮೇಲೆ ಪ್ರತ್ಯೇಕ ಗ್ರಂಥವನ್ನು ರಚಿಸುವಾಗಿನ ಬರಹದ ರೀತಿಗೂ ಸೂಚಕಗಳಾಗಿ ಇಲ್ಲಿ ಸೇರಿವೆ. ಅದೇ ರೀತಿ ಪಾರ್ತಿಸುಬ್ಬನ ಕಾಲದ ಕುರಿತು ಅವರ ಕೊನೆಯ ಪರಿಷ್ಕೃತ ಅಭಿಪ್ರಾಯವನ್ನು ತಿಳಿಯುವುದಕ್ಕಾಗಿ, “ಪಾರ್ತಿ ಸುಬ್ಬನ ಯಕ್ಷಗಾನಗಳು' ಗ್ರಂಥದ ಪೀಠಿಕೆಯ ಒಂದು ಅಂಶವನ್ನು ಕೊಟ್ಟುದಾಗಿದೆ. ಕುಕ್ಕಿಲರ ಸಾಹಿತ್ಯ ವಿವರ, ಕೌಟುಂಬಿಕ ವಿವರಗಳನ್ನು ಅನುಬಂಧದಲ್ಲಿ ನೀಡಿದೆ.

ಯಕ್ಷಗಾನದ ಶಾಸ್ತ್ರೀಯತೆಯ ಕುರಿತ ಅವರ ಬರಹಗಳ ಪೈಕಿ ಒಂದು ಲೇಖನವನ್ನು ಪುನರಾವರ್ತನೆಯಾಗುತ್ತದೆ ಎಂಬುದಕ್ಕಾಗಿ ಬಿಟ್ಟಿದೆ. ಪಾರ್ತಿಸುಬ್ಬನಿಗೆ ಸಂಬಂಧಿಸಿದ ಚರ್ಚೆಯಲ್ಲಿ, ಅವರು ಡಾ। ಕಾರಂತರ ಯಕ್ಷಗಾನ ಹಸ್ತಪ್ರತಿಗಳ ಕಾಲ ನಿರ್ಣಯದ