ಈ ಪುಟವನ್ನು ಪ್ರಕಟಿಸಲಾಗಿದೆ

೯೬ / ಕುಕ್ಕಿಲ ಸಂಪುಟ

ತಪ್ಪದೆ ರಚಿಸುವುದನ್ನು ಕಾಣಬಹುದು. ಮಧ್ಯೆ ಮಧ್ಯೆ ಸಹ ಮಂಗಳಾರತಿ ಹಾಡು ಬರುವುದು; ಅಲ್ಲದೆ ಪ್ರತಿಯೊಂದು ಕೃತಿಯೂ ಒಂದೊಂದು ದೇವಸ್ಥಾನದ ದೇವರ ಅಂಕಿತದಲ್ಲಿ ರಚಿಸಲ್ಪಟ್ಟಿದೆ. ಮೇಳವು ದೇವಸ್ಥಾನದಿಂದ ಹೊರಟು ಹೊರ ಸಂಚಾರಕ್ಕೆ ಹೋಗುವಾಗ ಸಹ ಆಯಾ ದೇವಳದ ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡು ಹೋಗುವುದಲ್ಲದೆ, ಆಟ ಸುರುಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ನಡೆದುಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತೆಂದೂ ತಿಳಿಯುವುದು.

ಹಿಂದೆ ಹೇಳಿದ ಶ್ರೀನಾಥಕವಿಯ ಆಂಧ್ರ ಭೀಮೇಶ್ವರ ಪುರಾಣದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವದೇವಾಲಯದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವು ದಾಗಿದೆ-

ಕೀರ್ತಿಂತುರೆದ್ದಾನಿ ಕೀರ್ತಿಗಂಧರ್ವಲು
ಗಾಂಧರ್ವಮುನ ಯಕ್ಷಗಾನ ಸರಣಿ |

ಇದು ಅನ್ಯ ಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ-

ಕೀರ್ತಿಯಂತಿ ಸ್ಮ ಮಾಹಾತ್ಮಂ ಗಂಧರ್ವಾದಿವೌಕಸಃ ǁ
ಗಾಂಧರ್ವ ವಿದ್ಯಾ ನಿಪುಣಾ ಗಾಂಧರ್ವೇಣ ಗರೀಯಸಾ ǁ

'ಗಾಂಧರ್ವೇಣ ಗರಿಯಸಾ'- ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯಪ್ರಬಂಧ ವೆಂದು ನಾಟ್ಯಶಾಸ್ತ್ರದಲ್ಲೇ ಹೇಳಿದೆ. ಸಂಗೀತರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧರ್ವೇಣ' ಎಂದರೆ ದೇವ ಸುತ್ಯರ್ಥವಾದ ಮಹಾಪ್ರಬ೦ಧದಿಂದ, 'ಮಹಾತ್ಮಂ ಕೀರ್ತಯಂತಿ ಸ್ಮ' ಎಂದಿರುವುದರಿಂದ, ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ 'ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾ ಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ' ಎಂದರೆ 'ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ, 'ಪೂಜಾ ಪ್ರಬಂಧ'ವೇ 'ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ, ಪೂಜಾ ಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ, ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣ ದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು.

ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನೆಯೇ. ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ. ಅದಕ್ಕೆ ದಶರೂಪಕಗಳಲ್ಲಿ ಒಂದಾದ