'ವೀಥಿ' ಎಂಬ ಅರ್ಥವಲ್ಲ, ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರ ಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆಯೊಳಗೆ (Stage, Theatre) ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದುಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ ನಾಟ್ಯಮಂದಿರಗಳಿದ್ದುವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನೂ ನಾಟ್ಯಶಾಸ್ತ್ರದಲ್ಲಿ ಭರತಮುನಿಯೇ ಹೇಳು ತಾನೆ. ಅವುಗಳಲ್ಲಿ ಬಾಹ್ಯ ಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ- (ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸುಲಕ್ಷಣ ವಾಗಿಯೂ, ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ).
ಏತೇ ಪ್ರಯೋಕೃಭಿರ್ಜೇಯಾ ಮಾರ್ಗಾಹ್ಯಭಿನಯೇ ಸ್ಮೃತಾಃ
ಯದೀದೃಶಂ ಭವೇನ್ನಾಟ್ಯಂ ಜೈಯಮಾಭ್ಯಂತರಂ ತು ತತ್ |
ಲಕ್ಷಣಾಭ್ಯಂತರತ್ವಾದಿ ತದಾಭ್ಯಂತರಮಿಪ್ಯತೇ ǁ
ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಜ್ಜಿತಂ |
ಅನೇನ ಲಕ್ಷ್ಯತೇ ಯಸ್ಮಾತ್ ಪ್ರಯೋಗಃ ಕರ್ಮ ಚೈವಹಿ ǁ
(ತಸ್ಮಾಲ್ಲ ಕ್ಷಣಮೇತದ್ದಿ ನಾಟ್ಯ ಸಮ್ಯಜ್‌ಯೋಜಿತಂ |
ಅನಾಚಾರ್ಯೋದಿತಾ ಯೇ ಚ ಶಾಸ್ತ್ರ ಬಹಿಃ ಸೃತಾಃ ǁ
ಬಾಹ್ಯಂ ತೇ ತು ಪ್ರಯೋಕ್ಷ್ಯಂ ತೇ ಕ್ರಿಯಾಕಿ: (ಮಾತ್ರೆ) ಪ್ರಯೋಜಿತಾ: ǁ
ತಾತ್ಪರ್ಯವೇನೆಂದರೆ- ಶಾಸ್ತ್ರ ನಿರ್ದಿಷ್ಟವಾದ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟ ನಾಟ್ಯ ಪ್ರಯೋಗವು 'ಅಭ್ಯಂತರ'ವೆಂದೂ, ನಾಟ್ಯಾಚಾರ್ಯನ ನಿರ್ದೇಶವಿಲ್ಲದೆ ಆಡಲ್ಪಡು ವಂಥವು ಮತ್ತು ಶಾಸ್ತ್ರದಲ್ಲಿ ಹೇಳುವ ಲಕ್ಷಣಕ್ಕಿಂತ ಹೊರಗೆ ಕಾಲಿಟ್ಟ ಪ್ರಯೋಗಗಳು 'ಬಾಹ್ಯ' ಪ್ರಯೋಗಗಳೆಂದೂ ಕರೆಯಲ್ಪಡುತ್ತವೆ.
ಇಂತಹ ಕೃತಿಗಳೇ ಪ್ರಾಯಶಃ ಉತ್ತರಕಾಲದ ಲಕ್ಷಣಗಳಲ್ಲಿ ಉಪರೂಪಕಗಳೆಂದು ಕರೆಯಲ್ಪಟ್ಟ ಗೇಯ ಕಾವ್ಯಗಳೆಂದು ನ್ಯಾಯವಾಗಿ ಊಹಿಸಬಹುದು. ಭರತನು ಉಪರೂಪಕಗಳನ್ನು ಹೇಳಲಿಲ್ಲವಾದರೂ 'ದಶರೂಪಕ ಲಕ್ಷಣ'ದ ಕೊನೆಗೆ ಅಲ್ಲಿ ಹೇಳಲ್ಪಡದವು ಬೇರೆ ಇರುತ್ತವೆ ಎಂಬ ಸೂಚನೆ ಕಂಡುಬರುತ್ತದೆ.
೧.ಕ್ರಿಯಾಕ ಕ್ರಿಯಾ ಎಂಬುದು ನಾಟಕಾದಿ ದೃಶ್ಯಕಾವ್ಯಗಳಿಗೆ ನಾಟ್ಯಶಾಸ್ತ್ರದಲ್ಲಿ
ಕೊಟ್ಟಿರುವ ಪಾರಿಭಾಷಿಕ ಸಂಜ್ಞೆ, ಕಾಳಿದಾಸಾದಿ ಕವಿಗಳ ಕೃತಿಗಳಲ್ಲಿಯು ಆ
ವ್ಯವಹಾರವನ್ನು ಕಾಣಬಹುದು (ಕ್ರಿಯಾಮಿಮಾಂ ಕಾಳಿದಾಸಸ್ಯ, ಆಧುನಿಕ ಕವೇ
ಕ್ರಿಯಾಯಾಂ ಕುತೋಭಿಮಾನಃ ಇತ್ಯಾದಿ) 'ಕಲ್ಪ' ಎಂದರೆ ಸ್ವಲ್ಪ ಕೀಳ್ಕೊಟ್ಟದ್ದು
ಎಂದರ್ಥ. (Denoting similarity with a degree of inferiority)