ಈ ಪುಟವನ್ನು ಪ್ರಕಟಿಸಲಾಗಿದೆ

"ಎಕ್ಕಲಗಾಣ" -?

ಇತ್ತೀಚೆಗೆ ಯಕ್ಷಗಾನದ ಕುರಿತು ಬರೆಯುವ ಹಲವರು ವಿದ್ವಾಂಸರು, ಹಳೆಗನ್ನಡ ಕಾವ್ಯಗಳಲ್ಲಿ ಕಾಣಸಿಗುವ 'ಎಕ್ಕಲಗಾಣ' ಎಂಬುದಕ್ಕೆ 'ಯಕ್ಷಗಾನ' ಎಂಬುದೇ ಅರ್ಥ ವೆಂದೂ, ಎಕ್ಕಲಗಾಣ ಎಂಬ ಶಬ್ದವು ಯಕ್ಷಗಾನ ಎಂಬುದರ ತದ್ಭವವೆಂದೂ ವ್ಯವಹರಿಸುತ್ತಿದ್ದಾರೆ. ದಿವಂಗತ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು 'ಪಾರ್ತಿಸುಬ್ಬ' ಎಂಬ ತಮ್ಮ ಪುಸ್ತಕದಲ್ಲಿ ಮೊತ್ತಮೊದಲಾಗಿ ಈ ಅಭಿಪ್ರಾಯವನ್ನು ಪ್ರಕಾಶಪಡಿಸಿದರು. ಅನಂತರ ಯಕ್ಷಗಾನದ ಕುರಿತಾಗಿ ಬರೆದ ಲೇಖಕರೆಲ್ಲ ಈ ಅಭಿಪ್ರಾಯವನ್ನು ಒಪ್ಪಿಕೊಂಡಂತೆ ಕಾಣುತ್ತದೆ.
'ಪಾರ್ತಿಸುಬ್ಬ' ಪುಸ್ತಕದ ೩೦-೩೧ನೆಯ ಪುಟಗಳಲ್ಲಿ ಹೀಗಿದೆ :
“ಕನ್ನಡ ಸಾಹಿತ್ಯದೊಳಗೆ 'ಉತ್ತಮ ಸಂಗೀತಗಾರ' ಎಂಬ ಅರ್ಥವನ್ನು ಸೂಚಿಸುವ 'ಎಕ್ಕಲಗಾಣ' ಎಂಬ ಒಂದು ಪುರಾತನ ಪದವಿದೆ. 'ಗಾಣ' ಪದವು 'ಗಾನ' ಪದದ ತದ್ಭವರೂಪವು. ಆದರೆ ಹಿಂದಣ 'ಎಕ್ಕಲ' ಪದವು ರೂಢವಾಗಿ 'ಕಾಡುಹಂದಿ' ಎಂಬ ಅರ್ಥಸೂಚಕವಾಗಿದೆ. ಹಾಗಿರುವಲ್ಲಿ. ಆ ಎರಡು ಪದಗಳ ಕೂಟವಾದ 'ಎಕ್ಕಲಗಾಣ'ಕ್ಕೆ ಮೇಲೆ ಹೇಳಿದ ಅರ್ಥ ಹೇಗೊದಗಬೇಕು? ಅಗ್ಗಳನ ಚಂದ್ರಪ್ರಭ ಪುರಾಣದೊಳಗೆ ಅಜಿತಸೇನ ಚಕ್ರಧರನು ಉದ್ಯಾನದ ವಸಂತಗೃಹದಲ್ಲಿ ಶಶಿಪ್ರಭಾ ಮಹಾದೇವಿಯೊಡನೆ ವಿಹರಿಸುವ ಸಂದರ್ಭದ ಪದ್ಯವೊಂದನ್ನು ಭಾವಿಸಿರಿ :

ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುಬ್ಬರಕ್ಕಣಂ
ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯೆನಿಪ್ಪ ಠಾಯೆಯಿಂ
ದಾಣತಿ ಮಾಡಿ ಸಾಳಗದ ದೇಸಿಯ ಗೀತಮನಂದು ಪಾಡುವಿಂ
ಪಾಣನನುರ್ವರಾಧಿಪತಿ ಲೀಲೆಯಿನೆಕ್ಕಲಗಾಣನೊರ್ವನಂ- ಕೇಳುತ್ತುಮಿರ್ದ೦

(೭, ೯೬) 'ಇಲ್ಲಿ (ಈ ಹಾಡುಗಾರಿಕೆಯಲ್ಲಿ) ಧ್ರುವಾದಿತಾಳ (ಗಂಧರ್ವಗಾನ ಗ್ರಂಥಗಳಲ್ಲಿ ಕಾಣುವವು)ಗಳೆಲ್ಲ ಸರಿಗೊಳ್ಳವು; ಪಂಚಮ (ಶ್ರುತಿಯ)ದ ನುಣುಪಾದ ಸ್ವರಕ್ಕೆ ಸ್ವಲ್ಪವೂ ಕೂಟವಿಲ್ಲ; ವೀಣಾನಾದವೂ ಇಲ್ಲಿ ಎಡೆಗೊಳ್ಳದು ಎಂಬ ಅದೊಂದು 'ಠಾಯ' (ಸ್ಥಾಯಿ= ಸರಿಗಮಾದಿ ಸ್ವರರಚನೆ)ಯಿಂದ ಆಲಾಪನೆವೆಸಗಿ (ಆಣತಿ ಮಾಡಿ) ದೇಸಿಯಾದ ಸಾಳಗ ರಾಗದ ಗೀತವೊಂದನ್ನು ಹಾಡುತ್ತಿದ್ದ 'ಇಂಪಾಣ'ನಾದ 'ಎಕ್ಕಲಗಾಣ'ನ ಸಂಗೀತವನ್ನು ಆ ರಾಜನು ಆನಂದದಿಂದ ಕೇಳುತ್ತಿದ್ದನು.'
ಗಂಧರ್ವಶಾಸ್ತ್ರದ ಎಲ್ಲ ತಾಳಗಳು ನೇರ್ಪಡದುದೇ ಮೊದಲಾದ ವಿಲಕ್ಷಣತೆಯಿಂದ ಕೂಡಿದ ದೇಸಿಯ ಗೀತವನ್ನು ಇಂಪಾಗಿ ಹಾಡುವವನೇ 'ಎಕ್ಕಲಗಾಣ' ಎಂದು ಸೂಚಿಸಿ ದಂತಾಯಿತು. ಇಲ್ಲಿ 'ಯಕ್ಷಗಾನ' ಎಂಬುದೂ ಒಂದು ಬಗೆಯ 'ದೇಸಿಯಾದ ಗಾನ ಅಲ್ಲವೆ 'ಗೀತ' ಎಂಬುದನ್ನು ಮರೆಯಲಾಗದು. ಮಾತ್ರವಲ್ಲ; ಹಿಂದೆ ಹೇಳಿದ ಗಂಧರ್ವ ಗಾನಕ್ಕೊಪ್ಪುವ “ಸರ್ವತಾಳ ಬದ್ಧವಾಗುವ ಪಂಚಮ ಸ್ವರಕ್ಕನುಕೂಲವಾಗುವ, ವೀಣಾ ನಾದಕ್ಕೊಪ್ಪುವ ಲಕ್ಷಣವೂ ಯಕ್ಷಗಾನದಲ್ಲಿಲ್ಲ. ಅದರಿಂದ 'ಎಕ್ಕಲ' ಎಂದರೆ 'ಯಕ್ಷ' ಎಂಬುದೇ ಅಪಭ್ರಂಶವಾಗಿ ಮಾರ್ಪಟ್ಟ ಪುರಾತನ ಕಾಲದ ಪದವೆಂದು ನನ್ನೆಣಿಕೆ.”