ಈ ಪುಟವನ್ನು ಪ್ರಕಟಿಸಲಾಗಿದೆ

೧೦೦ / ಕುಕ್ಕಿಲ ಸಂಪುಟ

ಮುಂದೆ ಅದೇ ಪುಟದಲ್ಲಿ ಅವರು ಅಭಿನವ ಪಂಪನ ಮಲ್ಲಿನಾಥ ಪುರಾಣದಿಂದಲೂ ಒಂದು ಉದಾಹರಣೆಯನ್ನು ಕೊಟ್ಟಿದ್ದಾರೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ಅದರ ಭಾಗ :

...ನುಣ್ಣರದಿನಾಣತಿ ಮಾಡಿದುದುನ್ಮದಾಳಿ ತಾ-
ವರೆಯೊಳಗಿರ್ದ ಲಕ್ಷ್ಮಿಯ ಮನಂಬಡೆವಕ್ಕಲಗಾಣನಂದದಿಂ

ಶ್ರೀ ಶಿವರಾಮ ಕಾರಂತರೂ ತಮ್ಮ 'ಯಕ್ಷಗಾನ ಬಯಲಾಟ'ವೆಂಬ ಬಹುಮಾನಿತ ವಾದ ಬೃಹತ್ ಪುಸ್ತಕದಲ್ಲಿ, ಯಕ್ಷಗಾನವು ಅತಿ ಪುರಾತನ ಕಾಲದಿಂದಲೇ ಕನ್ನಡದ ವಿಶಿಷ್ಟವಾದ ಸೊತ್ತಾಗಿದೆ ಎಂಬ ಪ್ರತಿಪಾದನೆಗೆ, ದಿ| ತಿಮ್ಮಪ್ಪಯ್ಯನವರು ಉದಾಹರಿಸಿದ ಪದ್ಯಗಳನ್ನೇ ಎತ್ತಿಕೊಂಡು, ಎಕ್ಕಲಗಾಣ ಎಂದರೆ ಯಕ್ಷಗಾನವೆಂದು ಹೇಳಿದ್ದಾರೆ. ಆ ಸಂದರ್ಭದ ಅವರ ಮಾತುಗಳಿವು :

“...ಅಜಿತಸೇನ ಮಹಾರಾಜನ ಇದಿರಿನಲ್ಲಿ ಯಕ್ಷಗಾನವನ್ನು ಹಾಡಿದುದಾಗಿ ಮೊದಲ ಪದ್ಯದಿಂದ ತಿಳಿದುಬರುತ್ತದೆ... ಉದಾಹರಿಸಿದ ಬಣ್ಣನೆಯ ಮಾತು ಒಬ್ಬ ಪುಸ್ತಕ ಪಂಡಿತನ ಮಾತು; ದೇಸಿಯನ್ನು ಕುರಿತು ಸಾಂಪ್ರದಾಯಿಕವಾಗಿ ಬಂದ ತಾತ್ಸಾರ ವನ್ನು ಅದು ಸೂಚಿಸುತ್ತದೆ. ಆದರೆ ತಾಳಕ್ಕೂ ಸಮಗೊಳ್ಳದ, ಪಂಚಮ ಶ್ರುತಿಗೆ ಸರಿಬಾರದ, ಹೊಂದಿಕೆಯಿಲ್ಲದ, ವೀಣೆಗಂತೂ ಮೇಳವನ್ನೇ ಕೊಡದೆನ್ನುವ ಈ ಬಣ್ಣನೆಯು ಯಕ್ಷಗಾನದ ಲಕ್ಷಣವನ್ನು ಹೇಳುವುದಾದರೆ ಅದು ಹೊಗಳಿಕೆಯಲ್ಲ; ಅದನ್ನು ಕುರಿತಾದ ನಿಂದೆಯೇ ಸರಿ. ಆದರೂ ಶ್ರುತಿಹೀನವಾದ ಆ ಸಂಗೀತವನ್ನು ಹಾಡುವ ನಾಯಕನನ್ನು ಈ ಕವಿಯು 'ಇಂಪಾಣನು!' ಎಂದು ಕರೆದಿದ್ದಾನೆ. ಅರಸು ಆನಂದದಿಂದ ಇಂಪಾಣನನ್ನು ಕೇಳಿದನಂತೆ! ಸಂಗೀತದ ದೃಷ್ಟಿಯಿಂದ ಇಂತಹ ಮಾತಿನ ವ್ಯಾಪ್ತಿ ಏನಾಗುತ್ತದೆಂದು ತಿಳಿಯದೆಯೆ, ಪರಂಪರೆಯಿಂದ ಕೇಳಿ ಬಂದುದನ್ನು ವಿವೇಚಿಸದೆಯೆ, ಬರೆದ ಮಹಾನುಭಾವರು ಕೆಲವರಿದ್ದಾರೆ.” (ಪುಟ ೬೬, ೬೭)

ಅದೇ ಪುಸ್ತಕದ ೯ನೆಯ ಪುಟದಲ್ಲಿ ಯಕ್ಷಗಾನದ ಕುರಿತು, “ಹಳೆಗನ್ನಡ ಕವಿಗಳು ಎಕ್ಕಲಗಾಣ ಎಂದುದು ಇದನ್ನೇ” ಎಂದು ಹೇಳಿ, ಅದರ ಅಡಿಟಿಪ್ಪಣಿಯಲ್ಲಿ ಹೀಗೆನ್ನು ತಾರೆ : “ಎಕ್ಕಲ ಎಂಬ ಮಾತಿಗೆ 'ಒಂದು' ಎಂಬ ಅರ್ಥ ಕಲ್ಪಿಸಿ, ಒಬ್ಬಂಟಿಗನ ಹಾಡು ಎಂದು ಅರ್ಥಮಾಡಲು ಅವಕಾಶವಿದೆ. ಆದರೆ 'ಎಕ್ಕಲಗಾಣ' ಪದ್ಧತಿಯನ್ನು ಕುರಿತು ಟೀಕೆಗಳು ಸಾಹಿತ್ಯದಲ್ಲಿ ಬರುತ್ತವೆ. ಆದುದರಿಂದ ನಾವು 'ಒಂದು' ಎಂಬುದಕ್ಕಿಂತ 'ಗಾಣ' ಎಂಬುದಕ್ಕೆ ಪ್ರಾಧಾನ್ಯ ಕೊಡಬೇಕಾಗುತ್ತದೆ. ಎಕ್ಕಲ ಯಕ್ಷಗಾನವಾಗುತ್ತದೆ.”

ಈ ಮಹನೀಯರಿಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿದರೆ, ಮೊದಲಿನವರದು- 'ತಾಳಮನಿತ್ತು...' ಎಂಬೀ ಪದ್ಯದಲ್ಲಿ ಹೇಳಿದ, ತಾಳಕ್ಕೆ ಸರಿ ಹೋಗದ ಪಂಚಮ ಶ್ರುತಿಗೆ ಸೇರದ ವೀಣೆಗೆ ಹೊಂದಿಕೆಯಾಗದ ಲಕ್ಷಣವು ಯಕ್ಷಗಾನಕ್ಕೆ ಒಪ್ಪಿದ್ದು, ಅದೊಂದು ದೇಸಿಯಾದ ಗಾನ, 'ಎಕ್ಕಲಗಾಣ' ಎಂಬುದು 'ಯಕ್ಷಗಾನ' ಎಂಬುದರ ತದ್ಭವ ಎಂದೂ, ಎರಡನೆಯವರದು- ಚಂದ್ರಪ್ರಭ ಪುರಾಣದ ಕವಿಯು 'ದೇಸಿ'ಯಾದ ಯಕ್ಷಗಾನದಲ್ಲಿ ತನಗಿದ್ದ ತಾತ್ಸಾರದಿಂದ, ಯಕ್ಷಗಾನವನ್ನು ಉದ್ದೇಶಪೂರ್ವಕ ನಿಂದಿಸಿದುದಾಗಿದೆ; ಎಕ್ಕಲಗಾಣ ಎಂದರೆ ಯಕ್ಷಗಾನವೇ ಸರಿ- ಎಂದೂ ತಾತ್ಪರ್ಯವಾಗುತ್ತದೆ.

'ಎಕ್ಕಲಗಾಣ' ಎಂಬ ಶಬ್ದವು 'ಯಕ್ಷಗಾನ' ಎಂಬುದರ ಅಪಭ್ರಂಶ (ತದ್ಭವ)ವೆಂದು ಹೇಳುವುದು ಸರಿಯೆ? ಯಕ್ಷಗಾನವೆಂದರೆ ಒಂದು ಸಂಗೀತ ಪದ್ಧತಿ ಎಂದೇ ಎಲ್ಲರಿಗೂ