ಈ ಪುಟವನ್ನು ಪ್ರಕಟಿಸಲಾಗಿದೆ
“ಎಕ್ಕಲಗಾಣ'-?

ಅರ್ಥವಾಗುತ್ತದೆ. ಮೇಲೆ ನಿರ್ದೇಶಿಸಿದ ಅಗ್ಗಳನ ಹಾಗೂ ಅಭಿನವ ಪಂಪನ ಪದ್ಯಗಳಲ್ಲಿ ಕಾಣುವ 'ಎಕ್ಕಲಗಾಣ' ಎಂಬ ಶಬ್ದವು, ಎಲ್ಲರೂ ಒಪ್ಪಿರುವಂತೆ, ಒಬ್ಬ ಗಾಯಕನನ್ನು ಹೆಸರಿಸುತ್ತದೆ. ಯಕ್ಷಗಾನ ಗಾಯಕನನ್ನು ಯಾರೂ ಯಕ್ಷಗಾನನೆಂದು ಕರೆಯಲಾರರೆಂಬುದು ಸ್ಪಷ್ಟ. ಆದುದರಿಂದ ಎಕ್ಕಲಗಾಣ ಯಕ್ಷಗಾನ ಎಂಬ ಶಬ್ದ ಗಳೊಳಗೆ ನೇರವಾದ ಅರ್ಥ ಸಂಬಂಧವಿಲ್ಲ. ಆದರೂ ಕೆಲವು ಬಾರಿ ಅಪಭ್ರಂಶ ಶಬ್ದ ಗಳಲ್ಲಿ ಅರ್ಥ ವ್ಯತ್ಯಾಸವಾಗುವುದುಂಟೆಂದು ಒಪ್ಪಿಕೊಂಡರೂ, 'ಯಕ್ಷ' ಎಂಬುದು 'ಎಕ್ಕಲ' ಎಂಬ ರೂಪವನ್ನು ಪಡೆಯುವುದು ಹೇಗೆ? ತದ್ಭವ ನಿಯಮಗಳನ್ನು ಅವಲೋಕಿಸಿದರೆ, 'ಯಕ್ಷ' ಎಂಬುದರ ಅಪಭ್ರಂಶ ರೂಪವು ಸಹಜವಾಗಿ 'ಜಕ್ಕ' ಎಂದೇ ಆಗಬೇಕು. ಒಂದು ವೇಳೆ, 'ಯಕ್ಕ'ವೆಂದಾಗಿ ಮತ್ತೆ 'ಎಕ್ಕ' ಎಂದೇ ಆಗಿರಬಹುದೆಂದು ಹೇಳಿದರೂ, ಅಲ್ಲಿ ತೋರುವ 'ಲ'ಕಾರವೆಲ್ಲಿಂದ ಬಂತು? ಮೊದಲೊಮ್ಮೆ ಪಂಡಿತ ತಿಮ್ಮಪ್ಪಯ್ಯನವರು ಯಕ್ಷಗಾನದ ಕುರಿತು ಬರೆದೊಂದು ಲೇಖನದಲ್ಲಿ 'ಯಕ್ಷಗಾನ'ದ ತದ್ಭವವು 'ಜಕ್ಕಗಾನ'ವೋ, 'ಜಕ್ಕಗಾನ'ವೋ, 'ಎಕ್ಕಗಾನ'ವೋ 'ಎಕ್ಕಗಾನ'ವೋ ಆಗಿದ್ದಿರಬೇಕೆಂದು ತರ್ಕಿಸಿದ್ದರು. (ಪಂಚಕಜ್ಜಾಯ, ಪುಟ - ೧೨೫) ಆದರೆ ಮತ್ತೆ, 'ಪಾರ್ತಿಸುಬ್ಬ'ದಲ್ಲಿ ಎಕ್ಕಲಗಾಣವು ಯಕ್ಷಗಾನದ ಅಪಭ್ರಂಶವೆಂದು ಹೇಳುವಾಗ, ಈ 'ಲ'ಕಾರದ ಗೊಡವೆಯನ್ನೇ ಏಕೆ ಬಿಟ್ಟರೋ ತಿಳಿಯುವುದಿಲ್ಲ.
'ಎಕ್ಕಲಗಾಣ' ಎಂದರೆ 'ಯಕ್ಷಗಾನ' ಎಂಬ, ಈಗೀಗ ರೂಢವಾಗಿರುವ ಪೂರ್ವಗ್ರಹ ವನ್ನು ಬಿಟ್ಟು, ಅದರ ಅರ್ಥವೇನಿರಬಹುದೆಂದು ವಿಚಾರಿಸೋಣ.
ಮೇಲೆ ಎತ್ತಿಕೊಂಡ ಪದ್ಯದಲ್ಲಿ, ಠಾಯ, ಸಾಳಗ, ದೇಸಿ ಇತ್ಯಾದಿ ಶಬ್ದಗಳು ಬಂದಿವೆ. ಇವೆಲ್ಲ ಸಂಗೀತ ಶಾಸ್ತ್ರದ ಪಾರಿಭಾಷಿಕ ಶಬ್ದಗಳಾದುದರಿಂದ, 'ಎಕ್ಕಲಗಾಣ' ಎಂಬುದೂ ಅಂತಹ ಒಂದು ಪಾರಿಭಾಷಿಕವೋ ಎಂಬುದನ್ನು ವಿಚಾರಿಸುವುದು ವಿಹಿತ.
ನಮ್ಮ ಸಂಗೀತಕ್ಕೆ ಪ್ರಮಾಣ ಗ್ರಂಥವಾದ ಶಾರ್ಙ್ಗದೇವನ 'ಸಂಗೀತ ರತ್ನಾಕರ' ದಲ್ಲಿ, ರಾಗ ವಿವೇಕಾಧ್ಯಾಯದ ದ್ವಿತೀಯ ಪ್ರಕರಣದಲ್ಲಿ, ಬೇರೆ ಬೇರೆ ವಿಧದ ಗಾಯಕರ ಲಕ್ಷಣವನ್ನು ಹೇಳುವ ಸಂದರ್ಭದಲ್ಲಿ ಹೀಗಿದೆ :
ಏಕಲೋ ಯಮಲೋ ವೃಂದಗಾಯನಶ್ಚೇತಿ ತೇ ತ್ರಿಧಾ|
ಏಕ ಏವ ತು ಯೋ ಗಾಯೇದಸಾವೇಕಲಗಾಯನ: ||
ಸದ್ವಿತೀಯೋ ಯಮಲಕೋ ಸವೃಂದೋ ವೃಂದಗಾಯನ: |
-ಇದರ ಅರ್ಥ ಹೀಗಿದೆ : “ಏಕಲ (ಗಾಯನ), ಯಮಲ (ಗಾಯನ), ವೃಂದ ಗಾಯನ ಎಂದು ಗಾಯಕರಲ್ಲಿ ಮೂರು ಭೇದಗಳು; ಯಾವ ಗಾಯಕನು ಒಂಟಿಯಾಗಿ ಒಬ್ಬನೇ ಹಾಡುತ್ತಾನೋ ಅವನು ಏಕಲಗಾಯನನು; ಎರಡನೆಯವನನ್ನು ಕೂಡಿಕೊಂಡು ಹಾಡುವವನು ಯಮಲ ಗಾಯನನು; (ವಾದ್ಯಗಾರರ ಮತ್ತು ಹಾಡುಗಾರರ) ವೃಂದ ದೊಡನೆ ಹಾಡುವವನು ವೃಂದಗಾಯನನನ್ನಿಸುತ್ತಾನೆ.
ಗೋವಿಂದ ದೀಕ್ಷಿತನಿಂದ ರಚಿತವಾದ 'ಸಂಗೀತ ಸುಧೆ'ಯಲ್ಲಿಯೂ
ನಿರೂಪಿತೇ ಗಾಯಕಲಕ್ಷಣೇಸ್ಮಿನ್‌ ಸಂಖ್ಯಾ ವಿಶೇಷಂ ಕಥಯಾಮಿ ತೇಷಾಮ್ |
ಏಕೋ ಭವೇದೇಕಲ ನಾಮಧೇಯೋ ದ್ವಿತೀಯಯುಕ್ತೊ ಯಮಲಾಭಿಧಾನ: ||
ತತೋಧಿಕೈ : ಸಮ್ಮಿಲಿತೋ ಯದಿ ಸ್ಯಾತ್ ವೃಂದಾಭಿಧಾನ: ಸ ತು ಗಾಯನೋಸೌ |

(ಸಂಗೀತ ಸುಧಾ-ಪುಟ ೨೫೬)