ಈ ಪುಟವನ್ನು ಪ್ರಕಟಿಸಲಾಗಿದೆ

೧೧೨ | ಕುಕ್ಕಿಲ ಸಂಪುಟ

ತಾಳವಿಲ್ಲದ ರಾಗಾಲಾಪ, ಮತ್ತೆ ತಾಳಬದ್ಧವಾದ ಕೃತಿ- ಹೀಗೆಯೇ ಇದೆಯಲ್ಲವೆ? ಹಾಗಾದರೆ ಅವನು ಹಾಡಿದುದು ಶಾಸ್ತ್ರಸಂಮತವಾದ 'ಗಾನ', ಸಾವಯವವಾದ ಒಂದು ದೇಶೀ ಗೀತ, 'ದೇಸಿಯ ಗೀತ' ಎಂದರೆ ದೇಶೀಯ ರಾಗದಲ್ಲಿ, ದೇಶೀಯ ತಾಳದಲ್ಲಿ ಹಾಡುವ ಹಾಡು. 'ದೇಸಿ' ಎಂದರೆ ರಾಗ ತಪ್ಪಿ, ತಾಳ ತಪ್ಪಿ ಯದ್ವಾತದ್ವಾ ಹಾಡುವ ಪದ್ಧತಿಯೆಂದು ಮೊದಲಿನವರು ಯಾರೂ ಹೇಳಿದ್ದಿಲ್ಲ. ಈಗ ಮಾತ್ರ ಕೆಲವರು ಹಾಗೆ ಭಾವಿಸಿದಂತೆ ಕಂಡುಬರುತ್ತದೆ.

ಮತ್ತೆ ಕೆಲವರು- ದೇಶೀಗಾನಕ್ಕೆ ಪಂಚಮವಿಲ್ಲವೆಂದೂ, 'ಸಂಗೀತ ದರ್ಪಣ'ಕಾರ ನಾದ ದಾಮೋದರ ಪಂಡಿತನು ಹಾಗೆ ಹೇಳಿದ್ದಾನೆಂದೂ ಆರೋಪಿಸತೊಡಗಿದ್ದಾರೆ! ಈ ಆರೋಪಣೆಯ ಸತ್ಯಾಂಶವೇನೆಂಬುದನ್ನು ಆ ಗ್ರಂಥ ಸಂದರ್ಭದಲ್ಲಿ ನೋಡಿ ವಿಚಾರಿಸುವ ಗೊಡವೆಯನ್ನೇ ಬಿಟ್ಟು, ಶ್ರೀ ಕಾರಂತರು ದಾಮೋದರ ಪಂಡಿತನನ್ನು ಸುಮ್ಮನೆ, ಅನ್ಯಾಯವಾಗಿ ದೂಷಿಸಿದ್ದಾರೆ! (ಯಕ್ಷಗಾನ ಬಯಲಾಟ- ಪುಟ ೬೭-೬೮), ಇದು ಶೋಚನೀಯವೆಂದು ಹೇಳುವುದಕ್ಕೂ ವ್ಯಸನವಾಗುತ್ತದೆ. ನಮ್ಮ ಬಹುಮಾನ್ಯ ಗ್ರಂಥ ಲೇಖಕರಲ್ಲಿಯೂ ಹೀಗೆ ಕಂಡುಬರುವ, ಸತ್ಯಾಂಶ ಸಂಗ್ರಹ ಪ್ರಯತ್ನದ ಹಾಗೂ ತಾಳ್ಮೆಯ ಅಭಾವಕ್ಕಾಗಿ ಎಷ್ಟು ಮರುಗಿದರೂ ಕಡಮೆ.
ದಾಮೋದರ ಪಂಡಿತನು ಹೇಳಿದುದಾಗಿ ಶ್ರೀ ಕಾರಂತರ ಪುಸ್ತಕದಲ್ಲಿ ಉದ್ಭತವಾದ ಅರ್ಧ ಶ್ಲೋಕ ಹೀಗಿದೆ: 'ದೇಶೀ ಪಂಚಮ ಹೀನಾ ಚ ರಾಗಾಂಗಾದಿಷಭತ್ರಯಾ' (ಇಲ್ಲಿರುವ 'ರಾಗಾಂಗಾದಿಷಭತ್ರಯಾ ಎಂಬುದು ಅಪಪಾಠ, ಅದಕ್ಕೆ ಅರ್ಥವಾಗು ವಂತಿಲ್ಲ. ಅದು, 'ರಾಗಾಂಗಾ ಋಷಭತ್ರಯಾ' ಎಂದಿದ್ದಿರಲೂಬಹುದು. ಹೇಗೂ ಇರಲಿ; ಪ್ರಸ್ತುತ ವಿಷಯವು 'ದೇಶೀ ಪಂಚಮ ಹೀನಾ' ಎಂಬ ಅಂಶ ಮಾತ್ರ) ಈ ಮಾತನ್ನು ದಾಮೋದರ ಪಂಡಿತನು ಎಲ್ಲಿ ಹೇಳಿರುವನೆಂಬುದನ್ನು ವಿಚಾರಿಸಿ, ಮತ್ತೆ ಅವನು ದಂಡನೀಯನೆಂದು ಕಂಡರೆ ದಂಡಿಸೋಣ.

ಅವನ 'ಸಂಗೀತ ದರ್ಪಣ'ದಲ್ಲಿ - ರಾಗರಾಗಿಣಿಗಳ ಉದಾಹರಣ ಪ್ರಕರಣದಲ್ಲಿ ಭೈರವ, ಮಧ್ಯಮಾದಿ, ಭೈರವಿ, ಬಂಗಾಳಿ ಇತ್ಯಾದಿ ರಾಗ ಲಕ್ಷಣಗಳನ್ನು ಹೇಳಿದ ಮೇಲೆ, ಕರ್ಣಾಟಕೀ ರಾಗಿಣಿಯ ಲಕ್ಷಣವನ್ನೂ ವಿವರಿಸಿ, ಮತ್ತೆ, ದೇಶೀ ರಾಗಿಣಿಯ ಲಕ್ಷಣವನ್ನು :

ದೇಶೀ ಪಂಚಮಹೀನಾ ಸ್ಯಾತ್ ಋಷಭತ್ರಯ ಸಂಯುತಾ |
ಕಲೋಪನತಿಕಾ ಜೇಯಾ ಮೂರ್ಛನಾ ವಿಕೃತರ್ಷಭಾ ||

-ಎಂದು ವಿವರಿಸಿ, ಆ ರಾಗಿಣಿಯ ಸ್ವರಪ್ರಸ್ತಾರವನ್ನು ಕೊಟ್ಟಿದ್ದಾನೆ. ತದನಂತರ ಕಾಮೋದೀ ಎಂಬ ಇನ್ನೊಂದು ರಾಗ ಲಕ್ಷಣವನ್ನೆತ್ತಿಕೊಳ್ಳುತ್ತಾನೆ : ಸಂದರ್ಭ ಹೀಗಿದೆ. ಅವನು ಇಲ್ಲಿ ಹೇಳಿದ್ದು ಪಂಚಮ ವರ್ಜ್ಯವಾದ ಒಂದು ರಾಗದ ಲಕ್ಷಣವನ್ನು ದೇಶೀಗೀತ ಪದ್ಧತಿಯ ಲಕ್ಷಣವನ್ನು ಅಲ್ಲವೇ ಅಲ್ಲ! ನಮ್ಮ ಬಡ ಪಂಡಿತನ ದೌರ್ಭಾಗ್ಯದಿಂದ ಆ ರಾಗದ ಹೆಸರು 'ದೇಶೀ' ಎಂದಾಗಿದೆ! ಅಷ್ಟೆ, ಪಂಚಮ ಹೀನವಾದ ರಾಗ ಇದೊಂದೇ ಅಲ್ಲ; ಹಿಂದೋಳ, ವಸಂತ, ಶ್ರೀರಂಜನಿ ಇತ್ಯಾದಿಗಳಲ್ಲಿಯೂ ಪಂಚಮವಿಲ್ಲ. ಆ 'ದೇಶೀ' ರಾಗವನ್ನಾದರೂ ದರ್ಪಣಕಾರನು ನಮ್ಮ ಕಲಾವಿಮರ್ಶಕ ರನ್ನು ಹಾದಿ ತಪ್ಪಿಸಲಿಕ್ಕಾಗಿ ನಿರ್ಮಿಸಿದ್ದೂ ಅಲ್ಲ. ಅವನಿಗಿಂತ ಮೊದಲಿನ ಸಂಗೀತ ಗ್ರಂಥಗಳಲ್ಲಿಯೂ ಇದು ಕಂಡುಬರುತ್ತದೆ. ಶಾರ್ಙ್ಗದೇವನ 'ಸಂಗೀತ ರತ್ನಾಕರ' ದಲ್ಲಿಯೂ ಇದು ನಮ್ಮ ಸಂಗೀತಕ್ಕೆ ಪ್ರಮಾಣ ಗ್ರಂಥ- ಈ 'ದೇಶೀ' 'ರಾಗಿಣಿ'ಯ