ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - 'ತಾಳಮದ್ದಳೆ' / ೧೧೯

ಇಂಥ 'ಹಾಡುಗಳು ಕೂಡಿದ್ದ ದೊಡ್ಡ ರಚನೆಯೇ 'ಹಾಡುಗಬ್ಬ', ಅದೇ 'ಮಾಡು', ಎಂದರೆ ಮಹಾಪ್ರಬಂಧವೆಂದೂ, ರೂಢಿಯಲ್ಲಿ ಅದಕ್ಕೆ 'ಬೆದಂಡೆ'ಯೆಂಬ ಹೆಸರಿರುವುದೆಂದೂ ಮುಂದಿನ ಲಕ್ಷಣಪದ್ಯದಲ್ಲಿ ಹೇಳುತ್ತಾನೆ :

ಪಾಡುಗಳಿಂದಂ ತರಿಸಲೆ
ಮಾಡಿದುದಂ ಪಾಡುಗಬ್ಬವೆಂದು ಬುಧರ್ ಕೊಂ |
ಡಾಡುವರದರಿಂ ದಲ್ ಮೇಲ್
ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ ǁǁ ೯೫೪ ǁ

ವಸ್ತುತಃ ಇಂತಹ ಹಾಡುಗಬ್ಬವೇ 'ಯಕ್ಷಗಾನ'. ಈ ಪ್ರಬಂಧ ರಚನೆಯು ನಮ್ಮಲ್ಲಿ ಮೊದಲೂ ಇದ್ದುದೇ ದೇವಸ್ಥಾನಗಳ ಪೂಜಾರ್ಥವಾಗಿ, ದೇವರ ಮಾಹಾತ್ಮಗಳ ಕಥೆಗಳಲ್ಲಿ ಮತ್ತೆ ರಚನೆಗೆ ಬಂದು 'ಯಕ್ಷಗಾನ'ವೆಂಬ ಅನ್ವರ್ಥನಾಮವನ್ನು ಪಡೆಯಿ ತಂಬುದು ಸರ್ವಸಮಂಜಸ.

ಈ 'ಯಕ್ಷಗಾನ'ವು ಶಾಸ್ತ್ರೀಯ ಸಂಗೀತದಲ್ಲೇ ಹಾಡಲ್ಪಡತಕ್ಕ ವಸ್ತುವೆಂಬುದು ಪದ್ಯಗಳ ರಾಗತಾಳ ನಿರ್ದೇಶದಿಂದಲೇ ವ್ಯಕ್ತವಾಗುವುದು, ಸಂಪ್ರದಾಯವೂ ಅದೇ ಇದ್ದಿತ್ತೆಂಬುದಕ್ಕೆ ನ್ಯಾಯವಾದ ಆಧಾರವೂ ದೊರೆಯುವುದು. ಸುಮಾರು ಮುನ್ನೂರು ವರ್ಷಕ್ಕೆ ಹಿಂದೆ, ಆಂಧ್ರದ ಪ್ರಸಿದ್ಧ ಯಕ್ಷಗಾನ ಕವಿಗಳಲ್ಲೊಬ್ಬನಾದ ಆದಿಭಟ್ಟ ನಾರಾಯಣ ದಾಸನೆಂಬುವನು ಆ ಕುರಿತು ಹೀಗೆ ಹೇಳಿದ್ದಾನೆ-

“ಯಕ್ಷಗಾನಮು ಗೂಡ ವಾಗ್ಗೇಯಕಾರಪ್ರಣೀತಮುಲೇ, ಶ್ರುತಿಲಯಾತ್ಮಕಮ್ಯ ರಾಗ ವೈವಿಧ್ಯಮು, ಜಾತಿಮೂರ್ಛನಾಯುತಮೈನ ಸ್ವರಾಲಾಪಯುಗಲಿಗಿನ ಗೇಯರಚನ.”

ಯಕ್ಷಗಾನವು ಕೂಡ ವಾಗ್ಗೇಯಕಾರರಿಂದ ರಚಿಸಲ್ಪಟ್ಟ, ವಿವಿಧ ರಾಗಗಳಲ್ಲಿ ಜಾತಿ ಮೂರ್ಛನಾದಿ ಶಾಸ್ರೋಕ್ತಕ್ರಮದ ಸ್ವರಾಲಾಪಸಹಿತವಾಗಿ ಹಾಡತಕ್ಕ ಗೇಯ ಪ್ರಬಂಧ ವೆಂಬುದು ಇಲ್ಲಿ ಸ್ಪಷ್ಟವಿದೆ.

ಇದು ವೀಣಾದಿ ವಾದ್ಯಗಳೊಂದಿಗೆ ಸಭಾಸಂಗೀತದಲ್ಲಿ ಹಾಡಲ್ಪಡುತ್ತಿತ್ತೆಂಬುದಕ್ಕೂ, ತಂಜಾವೂರಿನ ವಿಜಯರಾಘವ ನಾಯಕ ರಾಜನ ಆಸ್ಥಾನದಲ್ಲಿದ್ದವನಾದ ಚೆಂಗ ಕಾಳಕವಿ ಎಂಬುವನು 'ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು ನೋಡಬಹುದು-

“ಯಕ್ಷಗಾನ೦ಬುನು ರಾವಣಹಸ್ಯ, ಮುಡುಕು, ದಂಡಮೀಟಲು ಚೆಂಗುಲು ತಾಳ ಮುಲುನು | ಜೋಲ ಸುವ್ವಾಲ ಧವಳಂಬುಲೇಲಲಮರ ಕೊಂದರತಿವಲು ವಿನಿಪಿಂಚ ರಂದಮುಗನುǁ”

'ರಾವಣಹಸ್ತ'ವೆಂದರೆ ೨೦ ತಂತಿಗಳ ವಾದ್ಯವಿಶೇಷ, ದಂಡೆ ಎಂದರೆ ವೀಣೆ. ಚೆಂಗು=ಜಾಕಟೆ, ದಕ್ಷಿಣ ಕನ್ನಡದ (ತೆಂಕಮಟ್ಟು) ಯಕ್ಷಗಾನದಲ್ಲಿ ಇಂದೂ ಉಪಯೋಗಿಸಲ್ಪಡುವಂಥಾದ್ದು, ಮುಡುಕು=ಪ್ರಾಯಶಃ 'ಉಡು' ಎಂಬ ಚರವಾದ್ಯ, ಈ ವಾದ್ಯಗಳೊಡನೆ ಜೋಗುಳ, ಸುವ್ವಾಲೆ, ಧವಳಾರ, ಯಾಲಪದಗಳಿಂದ ಕೂಡಿದ 'ಯಕ್ಷಗಾನ'ವನ್ನು ರಾಜಸಭೆಯಲ್ಲಿ ಸುಶ್ರಾವ್ಯವಾಗಿ ಹಾಡಿ ಕೇಳಿಸಿದರು ಎಂದು ಮೇಲಿನ ವಾಕ್ಯದ ಅರ್ಥ.