ಈ ಪುಟವನ್ನು ಪ್ರಕಟಿಸಲಾಗಿದೆ

೧೨೦ / ಕುಕ್ಕಿಲ ಸಂಪುಟ
ನಾಗವರ್ಮನು ಹೇಳಿದ ಆ 'ಮೇಲ್ವಾಡು ' ಅಥವಾ 'ಮಹಾಪ್ರಬಂಧವು' ಕರ್ಣಾಟಕ ಸಂಗೀತದ ಪೂರ್ವಸಂಪ್ರದಾಯದಲ್ಲಿ ಅತ್ಯಂತ ಪ್ರಶಸ್ತವಾಗಿತ್ತೆಂಬುದು ಸಂಗೀತಶಾಸ್ತ್ರ ಗ್ರಂಥಗಳಿಂದ ವ್ಯಕ್ತವಾಗುವುದು. ಚಾಲುಕ್ಯ ಸೋಮೇಶ್ವರನು (ಕ್ರಿ. ಶ. ೧೨ನೇ ಶತಕ) ತನ್ನ 'ಮಾನಸೋಲ್ಲಾಸ' ಗ್ರಂಥದ ಸಂಗೀತಾಧ್ಯಾಯದಲ್ಲಿ ಈ ಕುರಿತು-
ಕಂದವೃತ್ತಾಧಿಕಃ ಕಶ್ಚಿತ್ ಪ್ರಬಂಧೋ ಗೀಯತೇ ಮಹಾನ್ |
ಅಲ್ಪ: ಪಶ್ಚಾತ್ ಪ್ರಗಾತವ್ಯ ಏಷ ಸೂಡಕ್ರಮೋ ಮತಃ ||
ಎಂದಿರುತ್ತಾನೆ. 'ಸೂಡಕ್ರಮ' ಎಂದರೆ ಪ್ರಬಂಧಗಾನಕ್ರಮ ಎಂದರ್ಥ. 'ಸೂಡ' ಎಂದರೆ ಅನೇಕ ತಾಳಗಳಲ್ಲಿ ರಚಿಸಲ್ಪಟ್ಟ ಹಲವು ಪದ್ಯಗಳುಳ್ಳ ಗೇಯಪ್ರಬಂಧ, 'ಬಹೂನಾಂ ತಾಳಾನಾಮೇಕತ್ರಗುಂಘನಂ ಸೂಡಃ' ಎಂಬ ಲಕ್ಷಣವೂ ಇದೆ (ಸಂ. ಸಾರಸಂಗ್ರಹ). ಮೊದಲಾಗಿ ಇಂಥ ಮಹಾಪ್ರಬಂಧಗಳನ್ನು ಹಾಡಿ ಆಮೇಲೆ ಸಣ್ಣದನ್ನು, ಎಂದರೆ ಶಾಸ್ತ್ರದಲ್ಲಿ 'ಆಲಿಕ್ರಮ'ದವೆಂದು ಹೇಳಲಾದ ಬಿಡಿಪದ್ಯಗಳನ್ನು ಹಾಡಬೇಕು ಎಂದರ್ಥ. ಅಂದಿನ ಸಂಗೀತದ 'ಸಭಾಸಂಪ್ರದಾಯ' ಹಾಗಿತ್ತು ಎಂಬ ತಾತ್ಪರ್ಯ ತಾನೇ?
ಈ 'ಪೂಜಾಪ್ರಬಂಧ'ಕ್ಕೆ 'ಯಕ್ಷಗಾನ'ವೆಂಬ ನಾಮಕರಣವು ಪ್ರಾಯಶಃ ಆಂಧ್ರದಲ್ಲಿ ಆದದ್ದಿರಬೇಕೆಂದು ತೋರುವುದು. ಏಕೆಂದರೆ ಈಗ ತಿಳಿದಿರುವಂತೆ, ನಮ್ಮಲ್ಲಿ ಈ ಹೆಸರು ಕೇಳಿಬರುವುದಕ್ಕೆ ಮೊದಲೇ ಆಂಧ್ರದ ಪ್ರೌಢಸಾಹಿತ್ಯಕೃತಿಗಳಲ್ಲಿ ಇದರ ಉಲ್ಲೇಖ ಕಂಡುಬರುತ್ತದೆ. (ಕನ್ನಡದಲ್ಲಿ ಈ ಹೆಸರು ಕಾಣುವುದು ಈ ಕೃತಿಗಳಲ್ಲಿಯೇ ಹೊರತು ಇತರ ಸಾಹಿತ್ಯ ಗ್ರಂಥಗಳಲ್ಲಿ ಕಂಡುಬರುವುದಿಲ್ಲ). ಕಳೆದ ಕ್ರಿ. ಶ. ೧೫ನೇ ಶತಮಾನದ ಮೊದಲ ಭಾಗದಲ್ಲಿದ್ದವನಾದ ಶ್ರೀನಾಥ ಕವಿಯು ತನ್ನ 'ಭೀಮೇಶ್ವರ ಪುರಾಣ'ವೆಂಬ ಆಂಧ್ರ ಮಹಾಕಾವ್ಯದಲ್ಲಿ, ಗೋದಾವರೀ ತೀರದಲ್ಲಿ ದಕ್ಷಿಣ ಕಾಶಿಯೆಂದು ಪ್ರಸಿದ್ಧ ವಾಗಿದ್ದ 'ದಕ್ಷಾರಾಮ' (ದ್ರಾಕ್ಷಾರಾಮವೆಂದೂ ಹೆಸರಿದೆ) ಕ್ಷೇತ್ರದ ಭೀಮೇಶ್ವರ ದೇವರ ಸನ್ನಿಧಿಯಲ್ಲಿ ಯಕ್ಷಗಾನ ಸಂಗೀತಾರಾಧನೆ ನಡೆಯುತ್ತಿತ್ತೆಂದು ವರ್ಣಿಸಿದ್ದಾನೆ (ಆ. ೩-೬೩) ಅದಲ್ಲದೆ ಆಂಧ್ರ ಪದಕವಿತಾ ಪಿತಾಮಹನೆಂದು ಪ್ರಸಿದ್ಧನಾದ ತಿರುಪತಿ ಅಣ್ಣಮಾಚಾರ್ಯನು ತನ್ನ 'ಸಂಕೀರ್ತನ ಲಕ್ಷಣ'ವೆಂಬ ಗ್ರಂಥದಲ್ಲಿ, ಯಕ್ಷಗಾನ ಲಕ್ಷಣ ವನ್ನು, ಎಂದರೆ ಆ ಪ್ರಬಂಧದಲ್ಲಿ ಎಷ್ಟೆಲ್ಲ ವಿಧದ ಪದ್ಯರಚನೆಗಳಿರುತ್ತವೆ ಎಂಬುದನ್ನು ಆ ಮೊದಲಿನ ಸಂಕೀರ್ತನಾಚಾರ್ಯರು ಕೊಟ್ಟಿರುವುದಾಗಿ ಹೇಳುತ್ತಾನೆ. ಅಲ್ಲಿಯೂ ಈ ಹೆಸರು ಪ್ರಬಂಧವಾಚಕವೆಂಬುದು ಸುಸ್ಪಷ್ಟವಾಗಿದೆ. (ಅಣ್ಣಮಾಚಾರ್ಯನ ಈ ಲಕ್ಷಣ ಗ್ರಂಥ (ತೆಲುಗುಪ್ರತಿ) ತಿರುಪತಿ ದೇವಸ್ಥಾನದಿಂದ ಪ್ರಕಾಶಿಸಲ್ಪಟ್ಟಿದೆ.)
ಕ್ರಮೇಣ ನಮ್ಮ ದೇವಸ್ಥಾನಗಳಲ್ಲಿ 'ಸೇವೆ'ಗೆ ಚ್ಯುತಿ ಬಂದ ಮೇಲೆ ತಾಳಮದ್ದಳೆಯು ಗಟ್ಟದ ಕೆಳಗಿನ ಕರಾವಳಿ ಸೀಮೆಯಲ್ಲಿ ಮಾತ್ರ, ಪ್ರಧಾನವಾಗಿ ದಕ್ಷಿಣ ಕನ್ನಡದಲ್ಲಿ ಜನಪ್ರಿಯ 'ಸಭಾಸಂಪ್ರದಾಯ'ವಾಗಿ ಉಳಿದುಕೊಂಡಿದೆ. ಯಾವುದರಿಂದ? ಗಾನದ ರಕ್ತಿಯಿಂದಲ್ಲ, ದೇವರ ಭಕ್ತಿಯಿಂದಲೂ ಅಲ್ಲ; ಆ ಭಕ್ತಿಯೆಂಬುದು ದೇವಸ್ಥಾನ ದಿಂದ ಹೊರ ಬಂದಾಗಲೇ ಹೊರಟುಹೋಗಿದೆ. ಮತ್ತೆ, ಅದು ಉಳಿದಿರುವುದಕ್ಕೆ ಒಂದೇ ಒಂದು ಕಾರಣವಾಗಿರುವುದೆಂದರೆ ಅಲ್ಲಿ ರೂಢಿಗೆ ಬಂದಿರುವ 'ಅರ್ಥಹೇಳು'ವುದೆಂಬ ವಿಶೇಷ ವಾಚಿಕ ವಿಧಾನ. ಅದಾದರೂ ಮೂಲತಃ ಅಲ್ಲಿಯ ದೇವಸ್ಥಾನಗಳಲ್ಲೇ ಪ್ರಾರಂಭವಾದುದೆಂದು ಊಹಿಸಬಹುದು.