ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಮತ್ತು ಕಥಕಳಿ / ೧೨೫

ಮೇಳದವರು ರಂಗಸ್ಥಳದಲ್ಲಿ ದಶಾವತಾರ ರೂಪಕವನ್ನು ಆಡಿತೋರಿಸುತ್ತಿದ್ದರೆಂಬು ದನ್ನು ಕ್ರಿ. ಶ. ೧೩ನೇ ಶತಕದವನಾದ ಚೌಂಡರಸನೆಂಬ ಕವಿಯ ಕನ್ನಡ ದಶಕುಮಾರ ಚರಿತ ಕಾವ್ಯದಿಂದ ತಿಳಿಯಬಹುದು. ಹಾಗಿದ್ದುದರಿಂದಲೇ ಬಯಲಾಟಕ್ಕೆ ದಶಾವತಾರದ ಆಟವೆಂದೂ ಹೆಸರಾಗಿರುವುದು ಸಹಜವೇ ಸರಿ.

ರಾಮನಾಟ್ಟಂ ಕೃತಿಗಳ ಪೂರ್ವದಲ್ಲಿ ಎಂದರೆ ಕ್ರಿ. ಶ. ೧೬ನೇ ಶತಮಾನಕ್ಕೆ ಹಿಂದೆ, ಮಲಯಾಳದಲ್ಲಿ ಭೀಮನ್ ಕಥಪಾಟು, ಕಿರಾತಾರ್ಜುನೀಯಂ ಪಾಟು, ಕುಮಾರ ಹರಣಂ ಪಾಟು ಎಂಬಂತೆ ಕೆಲವು ಗೀತನಾಟಕಕೃತಿಗಳು ದೊರೆಯುತ್ತವೆ. ಅವುಗಳ ಭಾಷೆ ತಮಿಳು ಮಿಶ್ರವಾದ ಒಂದು ಮೋಡಿ ಭಾಷೆಯಾಗಿರುತ್ತದೆ. ಕೇರಳೀಯರು ಅದನ್ನು ಮಲಯಾಳೀ ಪ್ರಾಕೃತವೆನ್ನುತ್ತಾರೆ. ವಸ್ತುತಃ ಅದು ತಮಿಳು, ನಾಟಕಕ್ಕೆ ವಿಶಿಷ್ಟವಾದ ಒಂದು ದೇಶೀ ಭೇದವಾಗಿದೆ ಎಂದು ತಿಳಿಯಬಹುದು. ಹಿಂದಕ್ಕೆ ತಮಿಳಿನಲ್ಲಿ 'ನಾಟಕ ತಮಿಳ್' ಎಂಬ ಭಾಷಾ ಸ್ವರೂಪವೂ ರೂಢಿಯಲ್ಲಿದ್ದ ಸಾಹಿತ್ಯ ಭಾಷೆಗಳಿಗಿಂತ ವಿರೂಪವಾಗಿತ್ತು.

ಕನ್ನಡದಲ್ಲಿಯೂ ಹಿಂದಕ್ಕೆ ಯಕ್ಷಗಾನ ಕೃತಿಗಳಂತಹದೇ ಹಾಡುಗಬ್ಬಗಳು ಬೆದಂಡೆ, ಚತ್ತಾಣವೆಂಬ ಹೆಸರುಗಳಿಂದ ಪ್ರಸಿದ್ಧವಾಗಿದ್ದವೆಂದೂ, ಅವುಗಳ ಭಾಷೆಯು ಅಂದಿನ ಸಾಹಿತ್ಯ ರೂಢಿಯಲ್ಲಿದ್ದ ಕನ್ನಡಕ್ಕೆ ಸಲ್ಲದ ಭಾಷೆಯಾಗಿತ್ತೆಂದೂ ಕವಿರಾಜಮಾರ್ಗವೆಂಬ ಲಕ್ಷಣಗ್ರಂಥದಲ್ಲಿ ಹೇಳಲಾಗಿದೆ- “ನುಡಿಗೆಲ್ಲಂ ಸಲ್ಲದ ಕನ್ನಡದೊಳ್ ಚತ್ತಾಣಮುಂ ಬೆದಂಡೆಯುಂ” ಎಂದು ಆ ಲಕ್ಷಣ ವಾಕ್ಯವಿರುತ್ತದೆ.

ಕಥಕಳಿ ಸಂಪ್ರದಾಯವು ಪೂರ್ವದಲ್ಲಿ ಕೇರಳದ ದೇವಸ್ಥಾನಗಳಿಗೆ ಸಂಬಂಧಪಟ್ಟ ನಾಟ್ಯಶಾಲೆಗಳಲ್ಲಿ ನಡೆಯುತ್ತಿದ್ದ ಚಕ್ಯಾರ್ ಕೂತ್ತುಗಳೆಂಬ ಸಂಸ್ಕೃತ ನಾಟಕಪ್ರಯೋಗ ಗಳಿಂದ ಉಂಟಾದ್ದೆಂಬ ಪ್ರತೀತಿಯಿದೆ. ಕಥಕಳಿಯ ರಂಗಸಂಪ್ರದಾಯಗಳೂ ಕೆಲವೊಂದು ವೇಷಭೂಷಣಗಳೂ ಆ ಶಾಸ್ತ್ರೀಯ ನಾಟಕಗಳಿಂದಲೇ ಬಂದಂಥವೆಂದೂ ಕೇರಳದ ವಿದ್ವಾಂಸರ ಅಭಿಪ್ರಾಯವಿದೆ. ಅವೇ ರಂಗಸಂಪ್ರದಾಯ ಮತ್ತು ವೇಷಭೂಷಣಗಳು ಯಕ್ಷಗಾನ ಬಯಲಾಟಗಳಲ್ಲಿರುವುದಂತೂ ಪ್ರತ್ಯಕ್ಷ ಕಾಣುವ ವಿಚಾರ. ಇವೆಲ್ಲವೂ ಬಹಳ ಮಟ್ಟಿಗೆ ನಾಟ್ಯಶಾಸ್ತ್ರದಲ್ಲಿಯೂ ಹೇಳಲ್ಪಟ್ಟವಾಗಿವೆ ಎಂಬುದು ಇವುಗಳ ಶಾಸ್ತ್ರೀಯತೆಯನ್ನು ಸಮರ್ಥಿಸುತ್ತವೆ.

ಸಂಸ್ಕೃತ ನಾಟಕಗಳ ಪ್ರಯೋಗವು ಕರ್ನಾಟಕ, ಆಂಧ್ರ, ತಮಿಳುನಾಡು ಈ ಮೂರು ರಾಜ್ಯಗಳಲ್ಲಿಯೂ ಶಾಸ್ರೋಕ್ತ ಕ್ರಮದಲ್ಲಿ ನಡೆಯುತ್ತಿತ್ತೆಂಬುದು ಪುರಾತನ ಕಾವ್ಯಗ್ರಂಥ ಗಳಿಂದ ಮತ್ತು ಸಂಗೀತ ನಾಟ್ಯಾದಿ ಲಕ್ಷಣಗ್ರಂಥಗಳಿಂದ ತಿಳಿಯುತ್ತದೆ. ಆ ನಾಟಕ ಪ್ರಯೋಗವು ನಾಟಕಶಾಲೆಯೊಳಗೆ ನಡೆಯುತ್ತಿದ್ದುದು. ಯಕ್ಷಗಾನ ಪ್ರಯೋಗಕ್ಕಾದರೆ ಮೊದಲಿಂದಲೂ ನಮ್ಮಲ್ಲಿ ಬಯಲಾಟವೆಂದೂ ಆಂಧ್ರದಲ್ಲಿ ವೀಥಿನಾಟಕವೆಂದೂ, ತಮಿಳುನಾಡಿನಲ್ಲಿ ತೆರುಕ್ಕೂತ್ತು ಎಂದೂ ಹೆಸರಿದ್ದುದು. ಎಂದರೆ ಇದು ನಾಟಕ ಶಾಲೆ ಯಲ್ಲದೇ ಹೊರಬಯಲಲ್ಲಿ ನಡೆಯುತ್ತಿದ್ದುದೆಂಬುದು ಸ್ಪಷ್ಟ. ಇಂತಹ ಬಯಲಾಟ ಸಂಪ್ರದಾಯವಿದ್ದಿರುವ ವಿಚಾರವನ್ನು ನಾಟ್ಯಶಾಸ್ತ್ರದಲ್ಲಿಯೇ ಕಾಣಬಹುದು. ಅಲ್ಲಿ ಸಂಸ್ಕೃತ ನಾಟಕಪ್ರಯೋಗದ ಕುರಿತು ಏನೊಂದು ಲಕ್ಷಣಗಳು ಹೇಳಲ್ಪಟ್ಟಿವೆಯೋ ಅದಕ್ಕಿಂತ ಕೆಲಮಟ್ಟಿಗೆ ಹೊರತಾದ ನಾಟಕಗಳನ್ನು ಭರತನು ಬಾಹ್ಯ ಪ್ರಯೋಗಗಳೆಂದು ಕರೆದಿದ್ದಾನೆ. ಮತ್ತು ಅವು ನಾಟಕಶಾಲೆಯಲ್ಲದೆ ಹೊರಬಯಲಲ್ಲಿ, ಎಲ್ಲಿ ಬೇಕೆಂದರಲ್ಲಿ ರಂಗಸ್ಥಳವನ್ನು ಹಾಕಿ ಆಡಲ್ಪಡುತ್ತವೆ ಎಂದಿದ್ದಾನೆ. ಆ ಲಕ್ಷಣ ಶ್ಲೋಕಗಳು ಹೀಗಿವೆ-