ಈ ಪುಟವನ್ನು ಪ್ರಕಟಿಸಲಾಗಿದೆ

೧೨೮ / ಕುಕ್ಕಿಲ ಸಂಪುಟ

ದೃಶ್ಯಪ್ರಯೋಗಗಳು ಹೊರಬಯಲಲ್ಲಿ ಎಲ್ಲಿ ಬೇಕೆಂದರಲ್ಲಿ ನಾಲ್ಕು ಕಂಬಗಳನ್ನು ಹಾಕಿ ಮಾಡುವ ತಾತ್ಕಾಲಿಕ ರಂಗಸ್ಥಳಗಳಲ್ಲಿ ಆಡಲ್ಪಡುತ್ತಿದ್ದವೆಂಬ ಉಲ್ಲೇಖ ಹೀಗಿದೆ:

ಅಥಬಾಹ್ಯಪ್ರಯೋಗೇ ತು ಪ್ರೇಕ್ಷಾಗೃಹ ವಿವರ್ಜಿತೇ |
ವಿದಿಕ್ಷ್ವಪಿ ಭವೇದ್ರಂಗಃ ಕದಾಚಿದ್ರರ್ತುರಾಜ್ಞಯಾ ||(ಭ. ನಾ.)

'ಭರ್ತುರಾಜ್ಞಯಾ' ಎಂದರೆ, ಆಟ ಆಡಿಸುವವನಿಗೆ ಎಲ್ಲಿ ಇಷ್ಟವೋ ಅಲ್ಲಿ ರಂಗಸ್ಥಳ ವನ್ನು ಹಾಕಿ ಆಡುವುದೆಂಬ ಅರ್ಥ. ನಾಟಕ ಶಾಲೆಯೊಳಗೆ ನಡೆಯುವ ಸಂಸ್ಕೃತ ನಾಟಕ ಗಳು 'ಅಭ್ಯಂತರ ಪ್ರಯೋಗ', ಹೊರಬಯಲಲ್ಲಿ ನಡೆಯುವ ಈ ಆಟಗಳು 'ಬಾಹ್ಯ ಪ್ರಯೋಗ' ಎನ್ನುತ್ತಾನೆ ಭರತ. ಇದರ ಗೇಯಪ್ರಬಂಧಗಳೇ ಪ್ರಾಕೃತಾದಿ ದೇಶಭಾಷೆ ಗಳಲ್ಲಿ ರಚಿಸಲ್ಪಟ್ಟು ಉಪರೂಪಕಗಳೆಂದು ಕರೆಯಲ್ಪಟ್ಟಿವೆ. ಇರಲಿ.

ಹೀಗೆ ಬಯಲಾಟವು ನಡೆದುಬಂದ ದಾರಿಯನ್ನು ಮೂಲದಿಂದ ಶೋಧಿಸಿಕೊಂಡು “ಬಂದರೆ, ಇದರ ಗೇಯ ಸಾಹಿತ್ಯವೂ, ಪ್ರಯೋಗ ವಿಧಾನವೂ ಕಾಲಕಾಲಕ್ಕೆ ದೇಶರೂಢಿ ಯಲ್ಲಿ ಹಾಗೂ ಭಾಷಾರೂಢಿಯಲ್ಲಿ ನೂತನ ಸಂಸ್ಕಾರ ವಿಶೇಷಗಳನ್ನೂ ಬೇರೆ ಬೇರೆ ಹೆಸರುಗಳನ್ನೂ ಪಡೆದಿದ್ದುವೆಂದು ತಿಳಿಯಬಹುದಾಗಿದೆ. ಹಿಂದೆ ಹೇಳಿದಂತೆ ಚೌಂಡರಸನ ಆ 'ದಶಾವತಾರಾಕಾರ' (=ದಶಾವತಾರ ರೂಪಕ)ದ ಗೇಯ ಪ್ರಬಂಧಗಳಾವುವು, ಜನ್ನನು ಹೇಳಿದಂತೆ ಆ 'ಕೇಳಿಕೆ'ಯಲ್ಲಿ ಹಾಡಲ್ಪಡುತ್ತಿದ್ದ ಗೇಯ ಸಾಹಿತ್ಯವಾವುದು ಎಂಬುದು ತಿಳಿದುಬಂದಿಲ್ಲ. ಬಹುಶಃ ಸಂಸ್ಕೃತ ಪ್ರಾಕೃತಗಳ ಉಪರೂಪಕಗಳು ಹೇಗೋ ಹಾಗೆ ಆ ಹಾಡುಗಬ್ಬಗಳೂ ಕಾಲಗತಿಯಲ್ಲಿ ಸವೆದು ಅಳಿದು ನಷ್ಟವಾಗಿದೆ. ಆದರೆ, ಅಂದಿನ ಕನ್ನಡ ಕಾವ್ಯಭೇದಗಳನ್ನು ನಿರೂಪಿಸುವ ಕವಿರಾಜಮಾರ್ಗ, ಕಾವ್ಯಾವಲೋಕನ ಮೊದಲಾದ ಲಕ್ಷಣಗ್ರಂಥಗಳಲ್ಲಿ ಕಾಣುವ ಹಾಡು, ಮೇಲ್ಪಾಡು ಹಾಗೂ ಬೆದಂಡೆ ಎಂಬ ಹಾಡುಗಬ್ಬ ಗಳ ಲಕ್ಷಣಗಳು ನಮ್ಮ ಯಕ್ಷಗಾನ ಪ್ರಸಂಗಗಳಿಗೆ ಸಂಪೂರ್ಣ ಸಮನ್ವಯವಾಗಿ ಕಂಡುಬರುವುದರಿಂದ ಅವೇ ಅಂದಿನ ಬಯಲಾಟದ ಕಥಾಪ್ರಬಂಧಗಳಾಗಿದ್ದಿರಬೇಕೆಂದು ನ್ಯಾಯವಾಗಿ ಊಹಿಸುವುದಕ್ಕೆ ಅವಕಾಶವುಂಟು. ಈ ಕುರಿತು ಅನ್ಯತ್ರ ಲೇಖನಗಳಲ್ಲಿ ತಕ್ಕಷ್ಟು ವಿಸ್ತಾರವಾಗಿ ವಿವೇಚಿಸಿದ್ದೇನೆ. (ದಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸ್ಮಾರಕ ಗ್ರಂಥ "ಯಕ್ಷಗಾನ ಮಕರಂದ ೧೯೮೦, 'ಬೆದಂಡೆ-ಚತ್ತಾಣ' ಪ್ರಬುದ್ಧ ಕರ್ನಾಟಕ ೫.೩).

ಪ್ರಕೃತ ವಿಷಯ ಇಂದಿನ ಯಕ್ಷಗಾನದ್ದು. ಕನ್ನಡದಲ್ಲಿ ನಮಗೆ ಯಕ್ಷಗಾನವೆಂಬ ಹೆಸರು, ಬಯಲಾಟದ ಪ್ರಸಂಗ ಸಾಮಾನ್ಯವಾಗಿ ವಾಚಕವಾಗಿ ಆ ಪ್ರಸಂಗಗಳ ಕವಿವಾಕ್ಯ ದಲ್ಲಿ ಮಾತ್ರ ಕಂಡುಬರುವುದು ಹೊರತು ಅನ್ಯತ್ರ ಕಾವ್ಯಗಳಲ್ಲಾಗಲಿ, ಲಕ್ಷಣಗ್ರಂಥ ಗಳಲ್ಲಾಗಲಿ ನಾನು ತಿಳಿದಂತೆ ಕಂಡುಬರುವುದಿಲ್ಲ. ಉಪಲಬ್ಧ ಕನ್ನಡ ಯಕ್ಷಗಾನ ರಚನೆಗಳ ಕಾಲವಾದರೆ ಸಾಮಾನ್ಯವಾಗಿ ಗದುಗಿನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ- ಈ ಮೂರು ಗ್ರಂಥಗಳ ಅನಂತರವೆಂದೇ ಹೇಳಬೇಕು (ಸುಮಾರು ೧೫ನೇ ಶತಕದ ನಂತರ), ಏಕೆಂದರೆ, ಅವುಗಳ ಋಣ ಇವುಗಳಲ್ಲಿ ಸಾಕಷ್ಟು ಕಂಡು ಬಾರದೆ ಇಲ್ಲವೇ ಇಲ್ಲ. ಇದಕ್ಕಿಂತ ಹಿಂದೆ ಪ್ರಯೋಗ ನಡೆಯುತ್ತಿದ್ದುದಕ್ಕೆ ಆಧಾರ ದೊರೆಯುವಾಗ ಅವುಗಳ ಪ್ರಸಂಗ ಸಾಹಿತ್ಯ ಇದ್ದಿರಲೇ ಬೇಕಷ್ಟೆ, ಅದು ಹೇಗಿತ್ತೋ, ಏನು ಹೆಸರಿತ್ತೊ ಗೊತ್ತಿಲ್ಲ. ತಮಿಳು, ಮಲಯಾಳಗಳಲ್ಲಿ ಯಕ್ಷಗಾನವೆಂಬ ಹೆಸರು ರೂಢಿಯಿಲ್ಲ. (ತಮಿಳಿನಲ್ಲಿ ಇದೆ - ಸಂ.) ತಮಿಳಿನ ತೆರುಕೂತ್ತು ಬಯಲಾಟವೇ ಆದರೂ ಅದರ ಪದ್ಯಕಾವ್ಯಕ್ಕೆ ಅಲ್ಲಿ ಯಕ್ಷಗಾನವೆಂಬ ಹೆಸರಲ್ಲ; 'ತೆರುಕೂತ್ತುಪ್ಪಾಡಲ್' ಎಂದೇ