ಈ ಪುಟವನ್ನು ಪ್ರಕಟಿಸಲಾಗಿದೆ
ಆಂಧ್ರ ಯಕ್ಷಗಾನ - ತುಲನಾತ್ಮಕ ವಿವೇಚನೆ

ಕರೆಯುತ್ತಾರೆ. ಮಲಯಾಳದ "ಕಥಕಳಿ" ಪ್ರಬಂಧಗಳು ಯಕ್ಷಗಾನದ ಪ್ರತಿರೂಪಗಳೇ ಆದರೂ ಅಲ್ಲಿ ಅವಕ್ಕೆ “ಆಟ್ಟ ಕಥಾಪ್ರಬಂಧ' ಎಂದೇ ಕರೆಯುತ್ತಾರಲ್ಲದೆ ಯಕ್ಷಗಾನ ವೆಂದಲ್ಲ. ('ಕಥಕಳಿ' ಎಂಬುದು ಈಚೆಗೆ ಬರವಣಿಗೆಯಲ್ಲಿ ರೂಢಿಯಾದ ಹೆಸರು. ಅದು ಹಿಂದಕ್ಕೆ, ಇಂದಿಗೂ ಕೂಡ ಕೇರಳದಲ್ಲಿ 'ಆಟ'ವೆಂದೇ ಕರೆಯಲ್ಪಡುತ್ತದೆ. ಹಿಂದೆ ಅದು ಮೂಕ ನಾಟ್ಯರೂಪವಾಗಿಯೂ ಇರಲಿಲ್ಲ. ಹಾಗೂ ವಿಶೇಷವಾದ ಹಸ್ತಮುದ್ರೆಗಳ ನಿರೂಪಣೆ ಈಗಿನಂತಿದ್ದಿರಲಿಲ್ಲ. ಭಾಗವತರೊಡನೆ ಪಾತ್ರಗಳೂ ಹಾಡುತ್ತಿದ್ದುವು ಎಡೆಯೆಡೆ ಮಾತೂ ಇದ್ದಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ).
ಆಂಧ್ರದಲ್ಲಿಯಾದರೆ, ಯಕ್ಷಗಾನವೆಂಬ ಹೆಸರೇ ಮೊದಲೂ, ಇಂದಿಗೂ ರೂಢಿ ಯಲ್ಲಿರುವುದಾಗಿದೆ. ಕನ್ನಡದಲ್ಲಿ ನಾವು 'ಯಕ್ಷಗಾನ' ಎಂಬ ಶಬ್ದವನ್ನು ಎಂದು ಮೊದಲಾಗಿ ಕೇಳಿದವೋ ಅದಕ್ಕಿಂತ ಎಷ್ಟೋ ಹಿಂದೆ ಆಂಧ್ರದಲ್ಲಿ ಅದು ಪ್ರಸಿದ್ಧವಾಗಿತ್ತು. ಕನ್ನಡದಲ್ಲಿ ಉಪಲಬ್ಧವಿರುವ ಯಕ್ಷಗಾನಗಳಿಗಿಂತ ಹಿಂದಿನವು ಅಲ್ಲಿ ದೊರೆತಿವೆ ಎಂಬುದರಿಂದಲ್ಲ, ಅಲ್ಲಿಯ ಪ್ರಾಚೀನ ಕಾವ್ಯಗಳಲ್ಲಿಯೂ, ಲಕ್ಷಣಗ್ರಂಥಗಳಲ್ಲಿಯೂ ಯಕ್ಷಗಾನದ ಉಲ್ಲೇಖವಿರುವುದಷ್ಟೇ ಅಲ್ಲ, ಆ ಉಲ್ಲೇಖಗಳು ಮತ್ತೂ ತಕ್ಕಷ್ಟು ಹಿಂದಕ್ಕೆ ಅದರ ವ್ಯಾಪ್ತಿಯನ್ನು ಗುರುತಿಸುತ್ತವೆ. ಕ್ರಿ. ಶ. ೧೪-೧೫ನೇ ಶತಕದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಆಂಧ್ರಕವಿ ತನ್ನ 'ಭೀಮೇಶ್ವರಪುರಾಣ'ವೆಂಬ ಗ್ರಂಥದಲ್ಲಿ “ಕೀರ್ತಿಂತುರೆದ್ದಾನಿ ಕೀರ್ತಿ ಗಂಧರ್ವುಲು ಗಾಂಧರ್ವಮುನ ಯಕ್ಷಗಾನಸರಣಿ' ಎಂದು ಹೇಳಿದ್ದಾನೆ. (೩-೧೩). ಇದರ ಸಂದರ್ಭಾರ್ಥವೇನೆಂದರೆ ದಕ್ಷಾರಾಮವೆಂಬ ಶಿವಕ್ಷೇತ್ರ ದಲ್ಲಿ ಅಲ್ಲಿಯ ಭೀಮೇಶ್ವರ ದೇವರ ಮುಂದೆ ಖ್ಯಾತಿವೆತ್ತ ಗಂಧರ್ವರು (ಶಾಸ್ತ್ರೀಯ ಸಂಗೀತದ ಗಾಯಕರು) ದೇವಸ್ತುತ್ಯಾಶ್ರಯವಾದ ಯಕ್ಷಗಾನ ಪದ್ಯ ಪರಂಪರೆಗಳನ್ನು ಹಾಡಿ ಸ್ತುತಿಸುತ್ತಿದ್ದರು. ಎಂದಾಗಿದೆ. ಎಂದರೆ, ಯಕ್ಷಗಾನದ ಗೀತಾರಾಧನೆ ಆ ದೇವರ ಸನ್ನಿಧಿಯಲ್ಲಿ ನಡೆಯುತ್ತಿತ್ತೆಂದು ಅರ್ಥವಾಗುವುದಷ್ಟೆ, ಆ ಭೀಮೇಶ್ವರ ಪುರಾಣದ ಮೂಲ ಸಂಸ್ಕೃತದಲ್ಲಿರುತ್ತದೆ. ಅದನ್ನೇ ಈ ಕವಿ ತೆಲುಗಿಗೆ ಪರಿವರ್ತಿಸಿದ್ದಾಗಿದೆ. ಸಂಸ್ಕೃತದ ಆ ಪುರಾಣ ಶ್ಲೋಕ ಹೀಗಿದೆ-
ಕೀರ್ತಯಂತಿ ಸ್ಮ ಮಾಹಾತ್ಮ್ಯಾo ಗಂಧರ್ವಾಸ್ತ್ರಿದಿವೌಕಸಾ:|
ಗಾಂಧರ್ವವಿದ್ಯಾ ನಿಪುಣಾ ಗಾಂಧರ್ವೇಣ ಗರೀಯಸಾ ||
ಈ ಶ್ಲೋಕದಿಂದ ತಿಳಿಯಬಹುದಾದಂತೆ ಆ ದೇವರ ಮಾಹಾತ್ಮವನ್ನು ವರ್ಣಿಸುವ ಕಥೆಯನ್ನು ಗೇಯಪ್ರಬಂಧವಾಗಿ ರಚಿಸಿದ್ದೇ ಯಕ್ಷಗಾನ. ಶ್ರೀನಾಥನು 'ಯಕ್ಷಗಾನ ಸರಣಿ' ಎಂದಿರುವುದು ಆ ಪ್ರಬಂಧದ ರಚನಾಕ್ರಮವನ್ನು ಸೂಚಿಸುತ್ತದೆ. ಗಾಂಧರ್ವ ವೆಂದರೆ ದೇವಸ್ತುತ್ಯಾಶ್ರಯವಾದ ಗೇಯ ಪ್ರಬಂಧವೆಂದರ್ಥ, ನಾಟ್ಯಶಾಸ್ತ್ರದಲ್ಲಿಯೇ ಹಾಗೆ ಲಕ್ಷಣವಿದೆ. ಮೇಲಿನ ಶ್ಲೋಕದಲ್ಲಿ 'ಗರೀಯಸಾ ಗಾಂಧರ್ವೇಣ' ಎಂದಿರುವುದ ರಿಂದ ಶ್ರೀನಾಥನು ಹೇಳಿದ ಆ ಯಕ್ಷಗಾನ ರಚನೆಯು ಸಾಕಷ್ಟು ದೊಡ್ಡದಾಗಿದ್ದಿರ ಬೇಕೆಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ದೇವರ ಮಾಹಾತ್ಮವನ್ನು ಕುರಿತ ಯಕ್ಷಗಾನಗಳು ಆ ಕಾಲದಲ್ಲಿ ರೂಢಿಯಲ್ಲಿದ್ದಿರಬೇಕು; ಮತ್ತು ಅವನ್ನು ದೇವರ ಮುಂದೆ ಹಾಡುವ “ಗೀತಾರಾಧನೆ' ಪ್ರಚಲಿತವಾಗಿದ್ದಿರಬೇಕೆಂಬುದರಲ್ಲಿ ಸಂಶಯವಿಲ್ಲ.
ಆಂಧ್ರದ ಇತರ ಕವಿಗಳೂ ಈ ಯಕ್ಷಗಾನ ಗೀತಾರಾಧನೆಯ ವಿಚಾರ ಉಲ್ಲೇಖಿ ಸಿದ್ದಿದೆ. ಹೀಗಿರುವುದರಿಂದ ಅಂದಿಗೆ ಆ ಯಕ್ಷಗಾನವೆಂಬುದು ದೃಶ್ಯಪ್ರಯೋಗಕ್ಕೇ 9