ಈ ಪುಟವನ್ನು ಪ್ರಕಟಿಸಲಾಗಿದೆ

ಪಾರ್ತಿಸುಬ್ಬ
ಪಾರ್ತಿಸುಬ್ಬನ ಸಮಸ್ಯೆ : ಹಿನ್ನೆಲೆ

ಸಂಪಾದಕನ ಟಿಪ್ಪಣಿ

ಪ್ರಸಿದ್ಧ ಯಕ್ಷಗಾನ ಕವಿ ಪಾರ್ತಿಸುಬ್ಬನಿಗೆ ಸಂಬಂಧಿಸಿದ ಚರ್ಚೆಯು, ಕನ್ನಡದ ಪ್ರಮುಖ ಸಂಶೋಧನ ವಿವಾದಗಳಲ್ಲೊಂದು. ಆತನ ಕಾಲ, ದೇಶ, ಕರ್ತೃತ್ವಗಳು ದೀರ್ಘವಾದ ಚರ್ಚೆಗೆ ಒಳಗಾಗಿವೆ. ಆ ಚರ್ಚೆಗೆ ಬೇರೆ ಬೇರೆ ಮುಖಗಳೂ, ಕವಲು ಗಳೂ ಇವೆ. ದಿ| ಕುಕ್ಕಿಲ ಕೃಷ್ಣ ಭಟ್ಟರು, ಈ ಚರ್ಚೆಯಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಒಬ್ಬರು. ಹಾಗಾಗಿ, ಪಾರ್ತಿಸುಬ್ಬನಿಗೆ ಸಂಬಂಧಿಸಿದ ಅವರ ಬರಹಗಳನ್ನು ನೀಡುವಾಗ, ಆ ಚರ್ಚೆಯ ಸಂಕ್ಷಿಪ್ತವಾದ ಪರಿಚಯವಾದರೂ ಅವಶ್ಯವೆಂಬ ನೆಲೆಯಲ್ಲಿ, ಇಲ್ಲಿ ಅದನ್ನು ಸೂಕ್ಷ್ಮವಾಗಿ ಸೂಚಿಸಿದೆ-

ರಾಮಾಯಣಕ್ಕೆ ಸಂಬಂಧಿಸಿದ ಎಂಟು ಯಕ್ಷಗಾನ ಪ್ರಸಂಗಗಳಾದ ಪುತ್ರಕಾಮೇಷ್ಠಿ- ಸೀತಾಕಲ್ಯಾಣ, ಪಟ್ಟಾಭಿಷೇಕ, ಪಂಚವಟಿ-ವಾಲಿವಧೆ, ಉಂಗುರ ಸಂಧಿ (ಚೂಡಾಮಣಿ) ಸೇತುಬಂಧನ, ಅಂಗದ ಸಂಧಾನ, ಕುಂಭಕರ್ಣ ಕಾಳಗ, ಕುಶಲವ- ಇವುಗಳನ್ನೂ, ಶ್ರೀಕೃಷ್ಣ ಬಾಲಲೀಲೆ (ಕೃಷ್ಣ ಚರಿತೆ) ಐರಾವತ ಪ್ರಸಂಗ ಮತ್ತು ಸಭಾಲಕ್ಷಣ- ಇವುಗಳನ್ನೂ ಬರೆದಿರುವವನು ಕಾಸರಗೋಡಿನ ಕುಂಬಳೆಯ ಪಾರ್ತಿಸುಬ್ಬನೆಂಬ ಕವಿ ಎಂಬುದು ೧೯೫೦ರ ವರೆಗೂ, ಜನಪ್ರತೀತಿಯಲ್ಲಿ ಸ್ಥಾಪಿತವೆಂಬಂತೆ ಇದ್ದ ವಿಚಾರ. ಇದು ಅಂಗೀಕೃತ ವಿಚಾರವಾಗಿತ್ತು. ಈ ಪ್ರಸಿದ್ಧಿಗೆ ಮುಖ್ಯ ಆಧಾರಗಳು ಏನೆಂದರೆ-

೧. ವಿಶೇಷತಃ ಕಾಸರಗೋಡು ಪ್ರದೇಶದಲ್ಲಿ, ಪಾರ್ತಿಸುಬ್ಬನ ಬಗೆಗೆ ಪರಂಪರೆಯಿಂದ ಇದ್ದ ಪ್ರಬಲವಾದ ಜನಶ್ರುತಿ- ಅವನು ಕುಂಬಳೆಯವನು, ಪಾರ್ವತಿ ಎಂಬವಳ ಪುತ್ರ, ಪ್ರಸಂಗಗಳ ಕರ್ತೃ ಎಂಬುದು.

೨. ಆತನು ಕೇರಳಕ್ಕೆ ಹೋಗಿ, ಕಲಿತು, ಅಲ್ಲಿದ್ದ ರಾಮನಾಟ್ಟಂನ ಪ್ರಭಾವದ ಆದರ್ಶದಿಂದ, ನಮ್ಮ ಯಕ್ಷಗಾನದ ತೆಂಕುತಿಟ್ಟನ್ನು ರೂಪಿಸಿದನೆಂಬ ಹೇಳಿಕೆಗಳು.

೩. ಮೇಲೆ ಹೇಳಿದ ಎಲ್ಲ ಕೃತಿಗಳಲ್ಲೂ ಕಾಣುವ ಕಣ್ಣಪುರ (ಕಣಿಪುರ - ಕಣಿಯರ = ಕುಂಬಳೆ) ಗೋಪಾಲಕೃಷ್ಣನ ಸ್ತುತಿಗಳು, ಉಲ್ಲೇಖಗಳು.

೪. ಪಂಚವಟಿ ಪ್ರಸಂಗದ, ಹೆಚ್ಚಿನೆಲ್ಲ ಪ್ರತಿಗಳಲ್ಲಿ ಕಾಣಸಿಗುವ ಈ ಪದ್ಯ

ಧಾತ್ರೀಗುತ್ತಮನಾಮ ಕಣ್ಣಪುರದೀ ನಿಂತಿರ್ದ ಶ್ರೀಕೃಷ್ಣನಾ
ಸತ್ಪಾದಾಂಬುಜ ದಿವ್ಯನಾಮವರದಿಂದೀ ಪಾರ್ವತೀನಂದನಂ ǁ
ಬತ್ತೀಸಾಕೃತಿ ರಾಗತಾಳ ವಿಧದಿಂ ರಾಮಾಯಣಂ ಪಾಡಿದಂ |
ಭಕ್ತಿಧ್ಯಾನದಿ ಕೇಳು ಪುಣ್ಯಕಥೆಯಂ ಸಂತೋಷಮಂ ಮಾಳ್ವುದು ǁ

ಇಲ್ಲಿ ಬರುವ ಕಣ್ಣಪುರವು ಕುಂಬಳೆ, ಪಾರ್ವತಿನಂದನನೇ ಪಾರ್ತಿಸುಬ್ಬ