ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೬೫

ಜಾತೆ ನಿರ್ಭೀತೆ ಸುದಾತೆ ಸಕಲಜನ |
ಮಾತೆ ಸಜ್ಜನಮನಃಪ್ರೀತೆ ಸುಖ್ಯಾತೆ ||

ಹೀಗೆ ಮಥುರಾ ಪಟ್ಟಣಕ್ಕೆ ಬಂದು ದೇವಕಿಯಿದ್ದ ಕಾರಾಗೃಹದ್ವಾರದ ಮುಂದೆ ನಿಂತ ಕೊರವಂಜಿಯ ಮಾತು ಮಲೆಯಾಳ ಭಾಷೆಯಲ್ಲಿ ಹೀಗಿದೆ :

(ಕೊರವಂಜಿ ಕಟ್ಟಳೆಯು ತಮಿಳುದೇಶದ ಒಂದು ವಿಶಿಷ್ಟ ಮೂಲನಿವಾಸಿಗಳ ಪ್ರಾಚೀನ ಜಾನಪದ ನೃತ್ಯ ವಿಶೇಷ. ಮೂಲತಃ ಇದು ಯಕ್ಷಗಾನಕ್ಕೆ ನಿಕಟ ಸಂಪರ್ಕ ವುಳ್ಳುದಾಗಿದ್ದು ಪಾರ್ವತಿ ಕೊರವಂಜಿ, ಶ್ರೀಕೃಷ್ಣ ಕೊರವಂಜಿ, ಅರ್ಜುನ ಕೊರವಂಜಿ ಇತ್ಯಾದಿ 'ಕೊರವಂಜಿ ಯಕ್ಷಗಾನ' ಗ್ರಂಥಗಳು ಕನ್ನಡದಲ್ಲಿ ರಚಿಸಲ್ಪಟ್ಟಿರುವುವೆಂಬ ಯಕ್ಷಗಾನ ಚರಿತ್ರೆಗೆ ಸಂಬಂಧಪಟ್ಟ ವಿಷಯವೂ ಇಲ್ಲಿ ಸ್ಮರಣಾರ್ಹವಾಗಿದೆ. ಮತ್ತು 'ಮಥುರಾ ಪಟ್ಟಣದಿಂದ ಬಂದ ಕೊರವಂಜಿಯನ್ನು ಸುಬ್ಬನು ಮಲೆಯಾಳ ಭಾಷೆ ಯಲ್ಲಿಯೇ (ತಮಿಳಿನಲ್ಲಿ ಯಲ್ಲ!) ನುಡಿಸುತ್ತಾನೆ ಎಂಬುದನ್ನೂ ಲಕ್ಷಿಸಬೇಕು.)

'ಅಮ್ಮೇ ಕೇಳಡಿಯಮ್ಮೇ, ನೀಂಗಳಕು ಸುಕಂ ಉಂಡಾವು; ನಿನ್ನುಡೆ ಬಂಧನಂ ಗಳೆಲ್ಲಾಂ ತೀರ್ಕುಂ, ಯೋಚನೆ ವೇಂಡ; ನೀಂ ನನಚ್ಚ ಕಾರ್ಯಂ ಎಲ್ಲಾಂ ಕೈಗೂಡುಂ; ಶ್ರೀಮನ್ನಾರಾಯಣನುಡೆಯ ಕರುಣಮುಂಡಾಯಿ ತಪಂಗಳುಂಶೈದು ಅಡಿಕ್ಕೂರಿತ್ತು ಕೃಪಯಾನೇ, ಮನಂತಿಳಿವಿಲ್ ಇಚ್ಛಾವರಂಗಳಂ ಬೇಂಡಿಕ್ಕುಂ'.

ಆ ಮೇಲೆ ದೇವಕಿಯು ತನ್ನ ಕಷ್ಟ ಪರಂಪರೆಗಳನ್ನೆಲ್ಲ ಹೇಳಿ ಮುಂದಿನ ಸುಖ ದುಃಖದ ಭವಿಷ್ಯವನ್ನು ಹೇಳಬೇಕೆಂದು 'ರಂಗುವಾಲೆ ಅಕ್ಷತೆ, ಫಲಪುಷ್ಪ, ತಾಂಬೂಲಾದಿ ಕಾಣಿಕೆ ಇಟ್ಟು 'ಕಣಿಗೂಡೆಯನ್ನು ಕೇಳುತ್ತಾಳೆ. ಕೊರವಂಜಿಯು 'ಪೊಂಗೇದಗೆಸಳು ಗುರ್ಗಳಲಿ ಶೋಭಿಸುವಂಥ' ದೇವಕಿಯ ಹಸ್ತರೇಖೆಯನ್ನು ನೋಡಿ ಶ್ರೀಕೃಷ್ಣನು ಮಗನಾಗಿ ಹುಟ್ಟಿ ಕಷ್ಟಗಳನ್ನೆಲ್ಲ ಪರಿಹರಿಸುವನೆಂದು ಕಣಿ ಹೇಳುತ್ತಾಳೆ. ದೇವಕಿಯು 'ಕಟ್ಟು ಕಾವಲು ಕಂಸನಾಜ್ಞೆ' ಇರುವುದರಿಂದ ಮಗು ಹುಟ್ಟಿದರೂ ಅದು ಉಳಿಯದೆಂದು 'ಹೊಟ್ಟೆಗೋಸುಗವಾಗಿ ನುಡಿದ ನಿಮಿತ್ಯ'ವನ್ನು ತಾನು ನಂಬುವುದಿಲ್ಲ ಎನ್ನುತ್ತಾಳೆ. ಅದಕ್ಕೆ ಕೊರವಂಜಿಯು ಹೇಳುವ ನಂಬಿಕೆಯ ಮಾತು :

ತ್ರಿವುಡೆ ತಾಳ :

ಹೊನ್ನಿನಾಸೆಗೆ ಬಂದುದಿಲ್ಲ ಹಸ್ತಿ ಗಮನೇ-ನಿನ್ನಯ |
ಪುಣ್ಯವನು ನಿನಗೊರೆಯಲಾಗಿಯೆ ಬಂದೆ ನಮ್ಮ ||
ನಾಡಮಾತುಗಳಾಡಿ ಹೋಗಲು ಬಂದಳಲ್ಲ -ಶಿವದಯ |
ಮಾಡಿದಿರುವನು ಹೇಳಲಾಗಿಯೆ ಬಂದೆನಮ್ಮ
ಕಟ್ಟು, ಬಣ್ಣದ ಜಾಲಮಾತಿನ ಕೊರವಿಯಲ್ಲ- ಲೋಕದ |
ಸೃಷ್ಟಿಯಧಿಪತಿತನಕೆ ಯೋಗ್ಯದ ಕೊರವಿಯಮ್ಮ ||

ಏಕತಾಳ :

ಸೊಲ್ಲ ಕೇಳೆ ಸೊಲ್ಲ ಕೇಳೆ ಸೊಗಸುಗಾರವ್ವ |
ಬಲ್ಲಿದ ಸುಜಾಣ ಮರಿ ಹುಲ್ಲೆಗಣ್ಣಿನವ್ವ |
ಏಳುಲೋಕದಪ್ಪ ನಿನ್ನ ಬಾಲನು ಕೇಳವ್ವ |
ವೇಳೆಯೊಳವತರಿಸಿ ಖಳರ ಕೊಲುವನು ನೋಡವ್ವ ||