ಈ ಪುಟವನ್ನು ಪ್ರಕಟಿಸಲಾಗಿದೆ

೧೮೮ / ಕುಕ್ಕಿಲ ಸಂಪುಟ

'ಮೈರಾವಣನ ಕಾಳಗ'ವೆಂಬ ಯಕ್ಷಗಾನ ಪ್ರಬಂಧದಲ್ಲಿ ತನ್ನ ತಂದೆಯನ್ನು ಸ್ತುತಿಸಿದ 'ಅಜಪುರದ ಬುಧಕುಲದೊಳುದಿಸಿದ | ಸುಜನಕುಲಸುರಧೇನು ವೆಂಕಾ | ರ್ಯಜನೆನಿಪ ಸುಬ್ಬಾಭಿಧಾನನ | ನಿಜಪದಗಳ || ಒಸಗೆಯಿಂ ಸಂಸ್ತುತಿಸಿ...' ಎಂಬ ಪದ್ಯವನ್ನೂ, ಒಂದನೆಯ ಬಸವಪ್ಪನಾಯಕನಿಂದ ರಾಜಮನ್ನಣೆ ಪಡೆದವನೆಂಬುದಕ್ಕೆ ಆ ಸುಬ್ಬನು ತನ್ನ ರುಕ್ಷ್ಮಿಣೀ ಸ್ವಯಂವರದಲ್ಲಿ ತನ್ನ ತಂದೆಯ ಮತ್ತು ತನ್ನ ಪರಿಚಯಕ್ಕಾಗಿ ಹೇಳಿ ಕೊಂಡಿರುವ ಒಂದು ಪದ್ಯವನ್ನೂ ಆಧಾರವೆಂಬಂತೆ ಉದ್ಧರಿಸಿಕೊಟ್ಟಿರುತ್ತಾರೆ. (ಯಕ್ಷಗಾನ ಬಯಲಾಟ, ಪುಟ - ೧೮೮).

ಮೊದಲನೆಯದಾಗಿ 'ಸುಬ್ಬನು ಬ್ರಹ್ಮಾವರದವನೆ?' ಎಂಬ ಪ್ರಶ್ನೆ, ಮೇಲೆ ಹೇಳಿರುವ ಮೂರು ಕೃತಿಗಳಲ್ಲಿಯೂ ಆತನು ತನ್ನ ಸ್ಥಳವು ಬ್ರಹ್ಮಾವರವೆಂದು ಹೇಳಿ ಕೊಂಡುದಿಲ್ಲ, ಅಜಪುರವೆಂದೂ ಹೇಳಿದ್ದಿಲ್ಲ. ಹನುಮದ್ರಾಮಾಯಣದಲ್ಲಿ ಪ್ರತಿಸಂಧಿಯ ಕೊನೆಯಲ್ಲಿಯೂ ಉಲ್ಲೇಖಿತವಾಗಿರುವ 'ಆಡುವಳ್ಳಿಯ ವೆಂಕಾರ್ಯತನುಜ ಸುಬ್ರಹ್ಮಣ್ಯ ವಿರಚಿತ' ಎಂಬ ವಾಕ್ಯದಿಂದ ಆತನ ಮತ್ತು ಆತನ ತಂದೆಯಾದ ವೆಂಕಾರ್ಯನ, ಸ್ಥಳವು ಆಡುವಳ್ಳಿ ಎಂದು ಸ್ಪಷ್ಟವಾಗುತ್ತದೆ. ಅನ್ಯತ್ರ ಈ ಕವಿಯು ತನ್ನ ಸ್ಥಳನಾಮ ನಿರ್ದೇಶ ವನ್ನು ಎಲ್ಲಿಯೂ ಮಾಡಿದಂತೆ ಇಲ್ಲ. ಆದುದರಿಂದ ಈತನ ಮಗನಾದ ವೆಂಕಟನು ಆ 'ಆಡುವಳ್ಳಿ' ಎಂಬ ಹೆಸರನ್ನು ಸಂಸ್ಕೃತೀಕರಿಸಿ ತನ್ನ ತಂದೆಯನ್ನು 'ಅಜಪುರದ ಬುಧಕುಲ ದೊಳುದಿಸಿದ.... ವೆಂಕಾರ್ಯಜನೆನಿಪ ಸುಬ್ಬ' ಎಂದು ಹೇಳಿರುವುದಾಗಿದೆ ಎಂದೇ ನಾವು ತಿಳಿಯಬೇಕಲ್ಲದೆ ಆತನು ಬ್ರಹ್ಮಾವರವನ್ನೇ ಅಜಪುರವೆಂದು ಕರೆದುದಾಗಿದೆ ಎಂದು ಹೇಳುವುದು ನ್ಯಾಯವೆ? ಕರ್ಣಾಟಕ ಕವಿಚರಿತೆಯಲ್ಲಿಯೂ (ತೃತೀಯ ಭಾಗ ಪುಟ ೮೯) ಈ ಸುಬ್ರಹ್ಮಣ್ಯ ಕವಿಯ ಕುರಿತು 'ಇವನ ತಂದೆ ವೆಂಕಾರ್ಯ, ಸ್ಥಳ ಆಡುವಳ್ಳಿ, ಕುಲದೇವತೆ ಮೂಕಾಂಬೆ, ಮೂಕಾಂಬಾಪಾಂಗ ಪ್ರಸಾದಸಾಧಿತ, ಸರಸಸಾಹಿತ್ಯ ಸಾಮ್ರಾಜ್ಯ ಪ್ರತಿಷ್ಠಿತ ವಿದ್ವಜ್ಜನೋಪಲಾಲನೀಯ ಭೂವಿಬುಧ ಎಂದು ತನ್ನನ್ನು ವಿಶ್ಲೇಷಿಸಿ ಹೇಳಿ ಕೊಂಡಿದ್ದಾನೆ. ಇವನ ಕಾಲವು ಸುಮಾರು ಕ್ರಿ. ಶ. ೧೭೫೦ ಆಗಿರಬಹುದೆಂದು ತೋರುತ್ತದೆ' ಎಂದಿದೆ.

ಆ 'ಆಡುವಳ್ಳಿ' ಎಂಬುದು ಮೈಸೂರು ಸೀಮೆಯ ಕಳಸಕ್ಕೆ ಸಮೀಪವಿರುವ ಒಂದು ಸ್ಥಳ ಎಂದು ಕೆಳದಿ ನೃಪವಿಜಯದಿಂದ ತಿಳಿಯುತ್ತದೆ. (ಪುಟ ೧೬೧) ಮಾತ್ರ ಅಲ್ಲ ಕೆಳದಿ ರಾಜ್ಯವು ಅಲ್ಲಿವರೆಗೆ ವಿಸ್ತರಿಸಿಕೊಂಡಿತ್ತೆಂಬುದೂ ಚರಿತ್ರೆಯಿಂದ ತಿಳಿಯುವ ವಿಷಯ. (“Mysore and Coorg' by B. Lewis Rice) ಬ್ರಹ್ಮಾವರ ಮತ್ತು ಆಡುವಳ್ಳಿ ಗಳಂತೆ 'ಅಜಪುರ' ಎಂಬುದು ಒಂದು ಸ್ಥಳದ ಮೂಲ ಹೆಸರಲ್ಲ. ಇವೆರಡಕ್ಕೂ ಪ್ರತಿನಾಮವಾಗಿ ಉಪಯೋಗಿಸಬಹುದಾದ ಕಲ್ಪಿತ ಶಬ್ದವದು. ಬ್ರಹ್ಮ, ಆಡು ಎಂಬ ಶಿಷ್ಟಾರ್ಥತ್ವದ ಮೂಲಕ ಉಭಯ ಸಮಾನತ್ವವನ್ನು ಪಡೆದಿದೆ. ಬ್ರಹ್ಮಾವರ ಮತ್ತು ಆಡುವಳ್ಳಿಗಳು ಎಂದೂ ಪರಸ್ಪರ ಪ್ರತಿನಾಮಗಳಾಗವಷ್ಟೆ? ಸುಬ್ಬನು ತನ್ನ ಸ್ಥಳವನ್ನು ಆಡುವಳ್ಳಿ ಎಂದೇ ಹೇಳಿರುವಾಗ ಅವನ ಮಗನು ಹೇಳಿದ ಅಜಪುರವೆಂಬುದು ಆಡುವಳ್ಳಿಯ ಪ್ರತಿನಾಮವೆಂಬುದರಲ್ಲಿ ಯಾವ ಸಂದೇಹಕ್ಕೂ ಎಡೆ ಇಲ್ಲ. ಸುಬ್ಬನು ಬ್ರಹ್ಮಾವರದವನಾಗಿರುತ್ತಿದ್ದರೆ ಆ ಮೂಲಹೆಸರಿನ ಕಲ್ಪನೆಗೆ ಅವಕಾಶವಿಲ್ಲದಿರುವ ಆಡುವಳ್ಳಿ' ಎಂಬ ಹೆಸರಿನಿಂದ ಅದನ್ನು ಕರೆಯುತ್ತಿದ್ದನೇ? ಬ್ರಹ್ಮನನ್ನು 'ಆಡು' ಎಂದು ಹೆಸರಿಸುವಷ್ಟು ಸುಬ್ಬನು ಅಪ್ರಬುದ್ಧನೆಂದು ನಾವೆಣಿಸಲಾದೀತೇ? ತಾನು ಆಡುವಳ್ಳಿ