ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೮೭

ದಲ್ಲಿ ಆ ಕಥಾಭಾಗವಿದೆ ಎಂದೂ ನಾನು ಹೇಳಿದುದಾಗಿದೆ. ಶ್ರೀಯುತರು ತದ್ವಿರುದ್ಧವಾಗಿ ಮಾಡಿಕೊಂಡ ಅಭಿಪ್ರಾಯವನ್ನು ದಯವಿಟ್ಟು ತಿದ್ದಿಕೊಳ್ಳಬೇಕು. (ಪಾರ್ತಿಸುಬ್ಬ ಕವಿಯ ಕಾಲ ಮತ್ತು ಕರ್ತೃತ್ವದ ನಿರ್ಣಯ'ವೆಂಬ ನನ್ನ ಭಾಷಣ ಪುಸ್ತಕವನ್ನು ನೋಡಿದರೆ ಸಮಾಧಾನವಾದೀತು).

ಶೂರ್ಪಣಖಿಯ ಕುಚಚ್ಛೇದನ ಸಂದರ್ಭವು ಕಥಕ್ಕಳಿ ಪ್ರಯೋಗದಲ್ಲಿದೆ ಎಂದು ನಾನು ಹೇಳಿದ್ದು ನಿಜ. ಅದು ಅದರಲ್ಲಿರುವುದೂ ನಿಜ. ಈ ಭಾಗದಲ್ಲಿ ಅದರ ನೂರಾರು ಪದ್ಯಗಳನ್ನು ಯಥಾವತ್ತಾಗಿ ಭಾಷಾಂತರಿಸಿಕೊಂಡು ಸಾದ್ಯಂತ ಕಥಕಳಿ ರಾಮಾಯಣದ ಪ್ರತಿಕೃತಿಯಾಗಿಯೇ ರಚಿಸಿರುವ ಸುಬ್ಬನು ಶೂರ್ಪಣಖಿಯ ಕುಚಚ್ಛೇದನ ಸಂದರ್ಭ ವನ್ನೂ ಅದರಿಂದ ಸ್ವೀಕರಿಸಿದ್ದನೆಂದು ತಿಳಿಯಬೇಕೊ? ಅಥವಾ ಎಲ್ಲಿಯೋ ಇದ್ದಿರಬಹು ದಾದ ಇನ್ನೊಂದು ರಾಮಾಯಣವನ್ನು ಹುಡುಕಿ ಅದರಿಂದ ಸ್ವೀಕರಿಸಿದನೆಂದು ಊಹಿಸ ಬೇಕೊ? ಯಾವುದು ಸಮಂಜಸ ಮತ್ತು ಸಂಭವನೀಯ ಎಂಬುದನ್ನು ಸಹೃದಯರೇ ನಿರ್ಧರಿಸಲಿ.

ಬತ್ತಲೇಶ್ವರ ರಾಮಾಯಣದಲ್ಲಿ ಈ ಎರಡೂ ಕಥಾಭಾಗಗಳಿರಬಹುದು... ಇದ್ದ ರೇನು? ಅದನ್ನು ರಚಿಸಿದ ಕವಿ ಯಾರು? ಕಾಲವಾವುದು? ಕವಿಚರಿತ್ರೆಯಲ್ಲಿ ಹೇಳಿದಂತೆ ಕ್ರಿ. ಶ. ೧೪೩೦ರ ಕಾಲದ ಬತ್ತಲೇಶ್ವರನೆಂಬ ವೀರಶೈವಶರಣನು ಈ ರಾಮಾಯಣವನ್ನು ರಚಿಸಿದ ಕವಿಯಲ್ಲ; ಈತನು ಉತ್ತರ ಕನ್ನಡದಲ್ಲಿ (ಹೊನ್ನಾವರ?ಗಿದ್ದ ಒಬ್ಬ ಅರ್ವಾಚೀನ ಕವಿ; ವೀರಶೈವನೂ ಅಲ್ಲ, ಬತ್ತಲೇಶ್ವರನೆಂದು ಈತನ ಹೆಸರಲ್ಲ; ಆ ಬತ್ತಲೇಶ್ವರನೆಂದು ಇವನನ್ನು ಭ್ರಮಿಸಿದುದು ಸರಿಯಲ್ಲ ಎಂದು ಶ್ರೀ ಯಸ್, ಯನ್ ಕೃಷ್ಣ ಜೋಯಿಸರೆಂಬ ವಿದ್ವಾಂಸರು ಸಾಧಾರವಾಗಿ ಬರೆದಿರುವ ವಿಮರ್ಶೆಯನ್ನು ನೋಡಿದರೆ ಈ ಭ್ರಾಂತಿಯ ಪರಿಹಾರವಾಗಬಹುದು. (ಪ್ರಬುದ್ಧ ಕರ್ಣಾಟಕ ಶಾರ್ವರಿ ಸಂದ ಆಷಾಢ ಸಂಚಿಕೆಯಲ್ಲಿ ಆ ಲೇಖನವಿದೆ).

ಇನ್ನಿಗ ಶ್ರೀ ಕಾರಂತರು ಆಧಾರವಿಲ್ಲದೆ ಆಗ್ರಹಪೂರ್ವಕವಾಗಿ ಪಾರ್ತಿಸುಬ್ಬನ ಕರ್ತೃತ್ವವನ್ನು ಅಲ್ಲಗಳೆದು ಆತನ ಕೃತಿಗಳನ್ನೆಲ್ಲ ಯಾವ 'ಅಜಪುರದ ಸುಬ್ಬ'ನಿಗೆ ತೊಡಿಸಿದ್ದಾರೋ ಆತನ ಕಾಲದ ಮತ್ತು ಚರಿತ್ರೆಯ ಕುರಿತಾಗಿಯಾದರೂ ಶ್ರೀಯುತರು ಹೇಳಿರುವುದು ಯಥಾರ್ಥವಾಗಿದೆಯೇ? ಎಂಬುದನ್ನು ಸ್ವಲ್ಪ ವಿಚಾರಿಸೋಣ.


ವೆಂಕಾರ್ಯನ ಮಗ ಸುಬ್ಬನ ದೇಶಕಾಲ ವಿಚಾರ

'ರುಕ್ಕಿಣೀ ಸ್ವಯಂವರ', 'ಪಾರಿಜಾತ' ಎಂಬ ಎರಡು ಯಕ್ಷಗಾನ ಪ್ರಬಂಧಗಳ ಮತ್ತು ಕಂದಪದ್ಯಗಳಲ್ಲಿ ರಚಿಸಲ್ಪಟ್ಟ 'ಹನುಮದ್ರಾಮಾಯಣ'ವೆಂಬ ಪ್ರೌಢ ಕಾವ್ಯದ ಕರ್ತೃವಾದ ವೆಂಕಾರ್ಯನ ಮಗ ಸುಬ್ಬನು ಬ್ರಹ್ಮಾವರದವನು ಮತ್ತು ಕ್ರಿ. ಶ. ೧೬೯೮ ರಿಂದ ಹದಿನೇಳು ವರ್ಷ ಕೆಳದಿರಾಜ್ಯವನ್ನು ಆಳಿದ ಒಂದನೆಯ ಬಸವಪ್ಪ ನಾಯಕನ ಆಸ್ಥಾನಕವಿಯಾಗಿ ಆತನಿಂದ ರಾಜಮನ್ನಣೆ ಪಡೆದವನು. ಈ ಕಾರಣದಿಂದ ಆತನು ಹದಿನೇಳನೆಯ ಶತಮಾನದ ಕವಿ ಎಂಬ ವಾದವು ಸುಬ್ಬನ ಎರಡನೇ ಸಮಸ್ಯೆಯಾಗಿದೆ. ಈ ಕವಿಯು ಬ್ರಹ್ಮಾವರದವನೆಂಬುದಕ್ಕೆ ಈತನ ಮಗನಾದ ವೆಂಕಟನೆಂಬ ಕವಿಯು ತನ್ನ