ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೯೩

ಯಾಗಿದ್ದುದರಿಂದ 'ವೆಂಕಾರ್ಯಪ್ರಧಾನನಂ' ಎಂದು ತನ್ನ ಅಜ್ಜನನ್ನು ವೆಂಕಟನು ಹೊಗಳಿದ್ದಾನೆ.

ಇನ್ನು ಕ್ರಿ. ಶ. ೧೭೪೦ಕ್ಕೆ ಮೊದಲು ಸುಬ್ಬನ ತಾಡವಾಲೆಗಳು ಸಿಕ್ಕುವುದರಿಂದಲೂ ಈತನು ಹಿರಿಯ ಬಸವಪ್ಪನಾಯಕನ ಸಮಕಾಲೀನನು- ಎಂದರೆ ಕ್ರಿ. ಶ. ೧೭೧೫ರಲ್ಲಿ ಪ್ರೌಢವಯಸ್ಕನೂ, ಪ್ರಸಿದ್ಧಿಗೆ ಬಂದವನೂ... ಎಂದು ಹೇಳುವ ಶ್ರೀ ಕಾರಂತರು ವೆಂಕಾರ್ಯನ ಮಗ ಸುಬ್ಬನ ಕೃತಿಗಳೆಂದು ನಿಷ್ಕರ್ಷೆಯುಳ್ಳ 'ರುಕ್ಷ್ಮಿಣೀ ಸ್ವಯಂವರ'ದ ಓಲೆಯ ಪ್ರತಿಯಾಗಲಿ, ಕಾಗದದ ಪ್ರತಿಯಾಗಲಿ ತಮಗೆ ದೊರೆತಿದೆ ಎಂದು ಸಹ ತಮ್ಮ ಗ್ರಂಥದಲ್ಲಿ ನಿರೂಪಿಸಿದಂತೆ ಇಲ್ಲ. 'ಪಾರಿಜಾತ' ಪ್ರಸಂಗದ ಎರಡು ಪ್ರತಿಗಳ ಕಾಲವನ್ನು 'ಬಯಲಾಟ' ಗ್ರಂಥದ ಪರಿಶಿಷ್ಟದಲ್ಲಿ ಕೊಟ್ಟಿದ್ದಾರೆ. ಅವುಗಳಲ್ಲಿ ಒಂದರ ಕಾಲವು ತಾ. ೨-೧೨-೧೮೦೯, ಇನ್ನೊಂದರದ್ದು ತಾ. ೧೨-೫-೧೮೪೯, ಇದರಿಂದಲೂ ಸುಬ್ಬನು ಒಂದನೆಯ ಬಸವಪ್ಪನಾಯಕನ ಆಸ್ಥಾನಕವಿ ಎಂದು ತಿಳಿಯಲು ಅನುಕೂಲವಿಲ್ಲವಷ್ಟೆ?

ಹೀಗೆ ಈ ಕವಿಯ ದೇಶಕಾಲಗಳ ವಿಚಾರವಾಗಿ ಯಾರಿಗೂ ಯಾವ ಸಂದೇಹಕ್ಕೂ ಅವಕಾಶವಿಲ್ಲವೆಂಬುದು ಮೇಲೆ ಹೇಳಿದಂತೆ ಸುಬ್ಬನ ಮತ್ತು ಅವನ ಮಗನ ಪದ್ಯ ಗಳಿಂದ ಸುವೇದ್ಯವಾಗುವುದಾಗಿದ್ದರೂ ಅಸಂಬದ್ಧಾರ್ಥವನ್ನು ಕಲ್ಪಿಸಿ ಪ್ರತಾರಣಾತ್ಮಕ ವಾದ ಯುಕ್ತಿವಾದದಿಂದ ಜನಸಾಮಾನ್ಯರು ಭ್ರಾಂತಿಗೊಳ್ಳುವಂತೆ ಮಾಡಿ, 'ಅಜಪುರದ ಸಿದ್ಧಿಗೆ' ಸಾಧನವಿದು ಎಂಬಂತೆ ಕಾಲ್ಪನಿಕವಾದ ಸುಬ್ಬನ ಸಮಸ್ಯೆಗಳನ್ನು ಸೃಷ್ಟಿಸಿ ಇಂತಹ ದುರಧೃವಸಾಯದಲ್ಲಿ ಶ್ರೀ ಕಾರಂತರು ಪ್ರವೃತ್ತರಾದುದೇ ಆಯೋಚಿತ. ಆಬೋಧ ಪೂರ್ವವಾದ ಪೂರ್ವಗ್ರಹದಿಂದಲಾಗಿ ಒಂದೊಮ್ಮೆ ತಿಳಿಯದೆಯೇ ಸಂಘಟಿಸಿಹೋದ ತಪ್ಪುಗಳನ್ನು ಮತ್ತೂ ಮತ್ತೂ ಸರಿ ಎಂದು ವಾದಿಸುತ್ತಿರುವುದಂತೂ ಬಹಳ ಶೋಚನೀಯ. ಬ್ರಹ್ಮಾವರದ ಪ್ರಶಸ್ತಿಗಾಗಿ ಹೊರಟ, 'ನಮ್ಮ ಅಜಪುರ-ನಮ್ಮ ಬ್ರಹ್ಮಾವರ' ಎಂಬ ಗ್ರಂಥದಲ್ಲಿ ಶ್ರೀಯುತರು ಇಂತಹ ಪ್ರತಿಪ್ರಸವವನ್ನ ಮಾಡಿದರು. “ಬ್ರಹ್ಮಾವರ, ಅಜಪುರ, ಆಡುವಳ್ಳಿ ಈ ಮೂರೂ ಒಂದೇ ಎಂದು ನಿರ್ಧರಿಸಬಹುದು' ಎಂದ ಶ್ರೀಯುತರ 'ಬ್ರಹ್ಮಾವರ ತರ್ಕವು' ಹೀಗೆ ಹೇಳಿದಂತಾಯಿತು:

'The King is the ruler; Ruler is made of wood; Therefore King is made of wood!'
'ಬ್ರಾಹ್ಮಣ, ಎಂದರೆ ದ್ವಿಜ, ದ್ವಿಜ ಎಂದರೆ ಹಲ್ಲು, ಆದುದರಿಂದ ಹಲ್ಲೇ ಬ್ರಾಹ್ಮಣ.'
'ವಿಶ್ವಾಮಿತ್ರ ಎಂದರೆ ಕೌಶಿಕ, ಕೌಶಿಕ ಎಂದರೆ ಗೂಬೆ. ಆದುದರಿಂದ ವಿಶ್ವಾಮಿತ್ರನು ಗೂಬೆ.'
'ಕುಲ ಎಂದರೆ ವಂಶ, ವಂಶ ಎಂದರೆ ಬಿದಿರು. ಆದುದರಿಂದ ಕುಲ ಎಂದರೂ ಬಿದಿರೇ.'
'ರಾಜಪತ್ನಿ ಎಂದರೆ ಮಹಿಷಿ ಮಹಿಷಿ ಎಂದರೆ ಎಮ್ಮೆ, ಹಾಗಾಗಿ ರಾಜನ ಹೆಂಡತಿಯೇ ಎಮ್ಮೆ!'
ನಮ್ಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ್ದ ಸುಪ್ರಸಿದ್ಧ ಲೇಖಕರೂ, ವಿದ್ವಾಂಸರೂ, ಹಿರಿಯರೂ ಆದ ಶ್ರೀ ಕಾರಂತರೂ ಹೀಗೂ ವಾದಿಸುವುದು ನಮ್ಮ ದುರದೃಷ್ಟ!