ಈ ಪುಟವನ್ನು ಪ್ರಕಟಿಸಲಾಗಿದೆ

೧೯೪ / ಕುಕ್ಕಿಲ ಸಂಪುಟ

ಯಕ್ಷಗಾನವನ್ನು, ಯಕ್ಷಗಾನ ಕಾವ್ಯಗಳನ್ನು, ಯಕ್ಷಗಾನ ಕವಿಗಳನ್ನು ಕುರಿತು ನಮ್ಮಲ್ಲಿ ಪ್ರಕಟವಾಗುವ ಲೇಖನ ಮತ್ತು ಗ್ರಂಥಗಳ ವಿಚಾರವಾಗಿ 'ಬಯಲಾಟ' ಗ್ರಂಥದಲ್ಲಿ ಶ್ರೀ ಕಾರಂತರೇ ಹೇಳಿರುವ ಈ ಮಾತುಗಳು ಸರ್ವಥಾ ಸತ್ಯ ಮತ್ತು ಇಲ್ಲಿ ಸ್ಮರಣೀಯವಾಗಿದೆ :

“ಬರಿಯ ಒಂದೆರಡು ಬಯಲಾಟಗಳನ್ನು ಮೇಲಿಂದ ಮೇಲೆ ನೋಡಿ, ದೂರ ದಿಂದಲೇ ನಾಲ್ಕು ಪುಸ್ತಕಗಳನ್ನು ತಿರುವಿಹಾಕಿ, ಚಿತ್ರಕಲೆ, ನೃತ್ಯ, ಗೀತ, ನಾಟಕ ಇವುಗಳ ನಿಕಟ ಪರಿಚಯವಿಲ್ಲದೆಯೂ ಸಾಹಸಿಗಳು ಈ ವಿಷಯದಲ್ಲಿ ಈ ವಿಷಯದಲ್ಲಿ ಗ್ರಂಥನಿರ್ಮಾಣಕ್ಕೆ ದುಡುಕುವುದನ್ನು ಕಾಣುವಾಗ ಬರಿಯ ಒಂದೆರಡು ಶಬ್ದಗಳಿಂದಲೇ ಒಂದೊಂದು ಸಿದ್ಧಾಂತ, ತೀರ್ಮಾನಗಳಿಗೆ ಹೊರಡುವುದನ್ನು ಕಾಣುವಾಗ, ತುಂಬ ದುಃಖವಾಗುತ್ತದೆ. 'ದೇವತೆಗಳು ಕಾಲಿರಿಸಲು ಭಯಗೊಳ್ಳುವಲ್ಲಿ ಹುಚ್ಚರು ಧೈರ್ಯವಾಗಿ ಸಾಗುತ್ತಾರೆ' ಎಂಬ ಗಾದೆಯ ಮಾತಿನ ನೆನಪಾಗುತ್ತದೆ. ಯಾವ ಕಲೆಯೇ ಇರಲಿ, ಶಾಸ್ತ್ರವೇ ಇರಲಿ, ಸಾಕಷ್ಟು ವಿಸ್ತಾರವಾದ ಪರಿಚಯ, ಅಭ್ಯಾಸ, ಪರಿಶ್ರಮಗಳೊಂದೂ ಇಲ್ಲದೆ ವಿಮರ್ಶೆಗೆ ಎಟುಕದು. ಅದು ಬರಿಯ ಕಾಲ್ಪನಿಕ ಪ್ರತಿಭೆಗೆ ಆಹಾರವಾದಲ್ಲಿ ಇದ್ದ ತಿಳುವಳಿಕೆಯೂ ಕೆಟ್ಟಿತು. ಅತ್ತ- ನಮ್ಮ ವಿಮರ್ಶೆಯ ಕ್ಷೇತ್ರ ಹೀಗಿದ್ದರೆ, ಸಂಶೋಧನೆಯ ಕ್ಷೇತ್ರ ಕೂಡ ಹೀಗೆಯೇ ಆಗುತ್ತಿದೆಯೆಂಬ ಭಯವೂ ಇದೆ. ಬಹುದೂರದ ಹೇಳಿಕೆಗಳು, ದಂತಕಥೆ ಗಳು, ಪೌರಾಣಿಕ ಕಲ್ಪನೆಗಳು ನೂರು, ಸಾವಿರ ವರ್ಷಗಳ ಚರಿತ್ರೆಗೆ, ಕಲೆಯ ಇತಿಹಾಸಕ್ಕೆ ಆಧಾರವನ್ನಾಗಿ ಮುಂದೊಡ್ಡುವುದನ್ನು ಕಾಣುತ್ತಿದ್ದೇವೆ. ಇಂಥ ದುಡುಕುಗಳಿಂದ ಹೆಸರಿನ ಸಂಶೋಧನೆಗಳಿಂದ ಯಾರಿಗೆ ಉಪಕಾರವೋ, ಯಾವ ದೇವರಿಗೆ ಪ್ರೀತಿಯೋ ನನಗಂತೂ ತಿಳಿಯದು.”

- ಓಂ ಸತ್ಯಂ -






(ಮಧುಪುರ : ಗೀತಾ ಪ್ರಕಾಶನ, ಕಾಸರಗೋಡು ೧೯೬೨.)