ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು /೨೨೯


ವಾದ ರಸದ ವ್ಯಕ್ತಸ್ವರೂಪ ಎಂಬ ತಾತ್ಪರ್ಯ. ಕೇವಲ ಅಭಿನಯವೊಂದೇ ನಾಟ್ಯವಲ್ಲ. ನರ್ತನವಿಲ್ಲದಿದ್ದರೆ ನಾಟ್ಯವೆಂಬ ಹೆಸರೇ ಹುಟ್ಟುವ ಕಾರಣವಿಲ್ಲ. ಹಾಗೆಂದು ನರ್ತನ ವೊಂದೇ ನಾಟ್ಯವಲ್ಲ. ಗೀತವಿಲ್ಲದೆ ನರ್ತನವಿಲ್ಲ. ಆದರೂ ಗೀತ ನರ್ತನಗಳಷ್ಟಕ್ಕೇ ನಾಟ್ಯವೆಂಬ ಸಂಜ್ಞೆ ಸಲ್ಲದು. ಗೀತ, ವಾದ್ಯ, ನರ್ತನ, ಅಭಿನಯ, ಮಾತು, ವೇಷ ಇವೆಲ್ಲವೂ ಸೇರಿರುವ ದೃಶ್ಯವೂ, ಶ್ರವ್ಯವೂ ಆದ ನಾಟಕಾದಿ ರೂಪಕಪ್ರಯೋಗಕ್ಕೇ ನಾಟ್ಯ ಎಂಬ ಹೆಸರಿರುವುದು. ಆದುದರಿಂದಲೇ ಭರತನು ರಸಗಳನ್ನು ನಾಟ್ಯರಸಗಳೆಂದು ಹೇಳುತ್ತಾನೆಯೇ ಹೊರತು ಕಾವ್ಯರಸಗಳೆಂದು ಎಲ್ಲಿಯೂ ಹೇಳುವುದಿಲ್ಲ. ರೂಢಿಯಲ್ಲಿ ಅಭಿನೇಯ ವಸ್ತುಗಳಲ್ಲದ ಗದ್ಯಪದ್ಯಾದಿ ರಚನೆಗಳಿಗೆ ಶ್ರವ್ಯಕಾವ್ಯಗಳೆಂಬ ಹೆಸರಿರುವು ದಾದರೂ ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ 'ಶ್ರವ್ಯ' ಎಂದರೆ 'ಗೇಯ' ಎಂದೇ ಅರ್ಥ ವಿರುವುದಾಗಿದೆ. ಗದ್ಯ, ಶ್ಲೋಕ, ವೃತ್ತಾದಿ ರಚನೆಗಳನ್ನು ಭರತನು 'ಪಾಠ' ಎಂದೇ ಕರೆದಿರುವುದು ಹೊರತು ಶ್ರವ್ಯವೆಂದಲ್ಲ. ಹಾಗೆ ಪಾಠ, ಗೇಯ, ನೃತ್ಯ, ಅಭಿನಯ ಇವು ಸಮುಚಿತವಾಗಿ ಸೇರಿದ ಪಾಕವನ್ನೇ ರಸ ಎಂದಿರುವುದಾಗಿದೆ.
ಈ ಗೇಯ ವಸ್ತುಗಳು, ಎಂದರೆ ಧ್ರುವಾಗೀತೆಗಳು ಅನ್ನೋಕ್ತಿಯಲ್ಲಿರುವುದರಿಂದ ರಸೋತ್ಕರ್ಷಕ್ಕೆ ವಿಶೇಷ ಅನುಕೂಲವಾಗುವುದೆಂದೂ ಹೇಳುತ್ತಾನೆ. ಎಂದರೆ, ನಾಟಕದ ಪಾಠ್ಯರಚನೆಯಲ್ಲಿ ಅಭಿನಯಯೋಗ್ಯವಲ್ಲದ ಎಷ್ಟೋ ವಿಷಯಗಳನ್ನು ವಾಚಿಕವಾಗಿ ವರ್ಣಿಸುವುದಕ್ಕಾಗುವುದಿಲ್ಲ. ಆಲಿಂಗನ, ಚುಂಬನಾದಿ (ಅಶ್ಲೀಲ) ಶೃಂಗಾರಚೇಷ್ಟೆಗಳು, ಕೊಲೆ, ಅಂಗಚ್ಛೇದ, ಚಿತ್ರಹಿಂಸೆ ಮುಂತಾದ ಭೀಭತ್ಸ ದೃಶ್ಯಗಳು ಅಭಿನಯಕ್ಕೆ ನಿಷಿದ್ಧ ವಾದವು. ಅಂಥವನ್ನು ಗೀತಗಳಲ್ಲಾದರೆ ಅನ್ನೋಕ್ತಿಯ ಮೂಲಕ ವರ್ಣಿಸಬಹುದಾಗಿದೆ. ಅದರಿಂದ ಶೋತೃಗಳಲ್ಲಿ ಸಾನುಕೂಲವಾದ ಪರಿಣಾಮವುಂಟಾಗುತ್ತದೆ. ಇದೂ ಅಲ್ಲದೆ ಆಯಾ ದೃಶ್ಯಗಳ ದೇಶಕಾಲಾದಿ ಸನ್ನಿವೇಶಗಳ ಚಿತ್ರವನ್ನು ಶೋತೃಗಳ ಮನಸ್ಸಿನಲ್ಲಿ ಪ್ರತಿಬಿಂಬಿಸುವಂತೆ ಗೀತೆಗಳಲ್ಲಿ ವರ್ಣಿಸಬಹುದಾಗಿದೆ ಎನ್ನುತ್ತಾನೆ :

ಯಾನಿ ವಾಸ್ತು ನಬ್ರೂಯತ್ತಾನಿ ಗೀತೈರುದಾಹರೇತ್|
ನರೇವ ತು ಕಾವ್ಯಾರ್ಥ್ಯರರೌಪಮ್ಯಸಂಶ್ರಯ್ಕೆ:||

ಆದ್ದರಿಂದ ಗೀತನೃತ್ತಗಳು ರಸಾನುಭವಕ್ಕೆ ಆತಂಕವೆಂದು ಅವನ್ನು ತೊಡೆದುಹಾಕಿರ ಬೇಕೆಂದೆಣಿಸುವುದು ಸಾಧುವಾಗಲಾರದು. ನಮ್ಮಲ್ಲಿ ಸಂಸ್ಕೃತ ನಾಟಕಗಳು ಎಂದಿನವರೆಗೆ ರಚನೆಯಾಗುತ್ತಿದ್ದುವೋ ಅಂದಿನ ವರೆಗೆ ನೃತ್ಯಗೀತ ಸಹಿತವಾಗಿಯೇ ಅವು ಪ್ರಯೋಗಿಸ ಲ್ಪಡುತ್ತಿದ್ದುವೆಂದು ತಿಳಿಯಬೇಕು. ಈ ಗೀತಗಳನ್ನು ಕವಿಗಳು ರಚಿಸುವುದಲ್ಲವಾದ್ದರಿಂದ ನಮ್ಮ ಸಂಸ್ಕೃತ ನಾಟಕಗಳಲ್ಲಿ ಅವು ಸೇರಿಕೊಂಡಿಲ್ಲದಿರುವುದು ಸಹಜವೇ ಆಗಿದೆ. ಕಾಳಿದಾಸನ 'ವಿಕ್ರಮೋರ್ವಶೀಯ'ದಲ್ಲಿ ಕಾಣುವ ಗೀತಗಳು ಆತನ ರಚನೆಯಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುವುದು ನ್ಯಾಯವೇ ಸರಿ. ಅಂದು ಪ್ರಯೋಗದಲ್ಲಿದ್ದ ಕೆಲವೊಂದು ಗೀತಗಳು, ಕೆಲವು ಹಸ್ತಪ್ರತಿಗಳಲ್ಲಿ ಉಳಿದುಬಂದಿವೆ. ಹಾಗೆ ಶ್ರೀಹರ್ಷ, ರಾಜಶೇಖರ, ಮುರಾರಿಮಿಶ್ರ ಮುಂತಾದವರ ಕೆಲವು ನಾಟಕಗಳಲ್ಲಿಯೂ ಕೆಲವು ಗೀತೆಗಳು ಸೇರಿಕೊಂಡಿರುವುದನ್ನು ಕಾಣಬಹುದು. ಆ ನಾಟಕಗಳು ಸಗೀತವಾಗಿಯೇ ಪ್ರಯೋಗದಲ್ಲಿದ್ದುವೆಂಬುದಕ್ಕೆ ಅವೇ ಸಾಕ್ಷಿಗಳಾಗಿವೆ.
ಇದಕ್ಕೆ ಇನ್ನೂ ಒಂದು ಪ್ರಬಲವಾದ ಆಧಾರ ದೊರೆಯುವುದೇನೆಂದರೆ, ಶಾರ್ಙ್ಗದೇವನ ವರೆಗಿನ ನಮ್ಮ ಪ್ರಸಿದ್ಧ ಸಂಗೀತಶಾಸ್ತ್ರ ಗ್ರಂಥಕರ್ತರು ರಾಗ ಲಕ್ಷಣ ಗಳನ್ನು ಕೊಡುವಾಗ ಇಂಥಿಂಥ ರಾಗಗಳು ನಾಟಕದ . ಇಂಥ ಸಂಧಿಗಳಲ್ಲಿ .