ಈ ಪುಟವನ್ನು ಪ್ರಕಟಿಸಲಾಗಿದೆ

ಸೂಡ - ಸೂಳಾದಿ - ಸಾಲಗ

ಯಕ್ಷಗಾನ ಪ್ರಯೋಗ ಪದ್ಧತಿಯಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಪ್ರಸಿದ್ದ ವಾಗಿರುವ 'ತೆಂಕ ಮಟ್ಟಿನ' ಪ್ರಯೋಗದ ನೃತ್ಯ, ಗೀತ, ರಾಗ ತಾಳಾದಿಗಳಲ್ಲಿ ಹೇಗೋ ಹಾಗೆ ಪ್ರಬಂಧಗಳ ಪದ್ಯ ರಚನೆಯಲ್ಲಿಯೂ ಕುಂಬಳೆಯ ಪಾರ್ತಿಸುಬ್ಬನಂತಹ ಪ್ರಸಿದ್ಧ ಯಕ್ಷಗಾನ ಕವಿಗಳ ರಚನೆಯಲ್ಲಿ ವಿಶಿಷ್ಟವಾದ ಶಾಸ್ತ್ರೀಯ ಪರಂಪರೆಯು ಕಂಡು ಬರುತ್ತದೆ. ಸಂಗೀತರತ್ನಾಕರಾದಿ ಶಾಸ್ತ್ರಗ್ರಂಥಗಳಲ್ಲಿ ಶುದ್ಧ ಸೂಡ, ಸಾಲಗಸೂಡ ಎಂಬ ಭೇದಗಳಿಂದ ಲಕ್ಷಣೋಕ್ತವಾದ ದೇಶೀಯ ಗೇಯಪ್ರಬಂಧ ಲಕ್ಷಣಗಳ ವ್ಯಾಪ್ತಿಗೆ ಯಕ್ಷಗಾನ ಪದ್ಯಗಳೂ ಹೊರತಾದುವಲ್ಲ, ಎಂಬ ವಿಚಾರವು ಸಂಗೀತಶಾಸ್ತ್ರ ಗ್ರಂಥಗಳ ಪರಿಶೀಲನೆಯಿಂದ ವ್ಯಕ್ತವಾಗುವುದು. ಅಂತಹ ಶಾಸ್ತ್ರೀಯ ಸೂಳಾದಿ ಪದರಚನಾ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದ ಕನ್ನಡ ಹರಿದಾಸರ ಪದಸಾಹಿತ್ಯದ ಪ್ರಭಾವವು ನಮ್ಮ ಯಕ್ಷಗಾನ ಕವಿಗಳ ಮೇಲೆ ಬಿದ್ದಿರುವುದೂ ಸರ್ವಥಾ ಸಂಭಾವ್ಯವೇ ಆಗಿದೆ. ಯಕ್ಷಗಾನ ಪದ್ಯರಚನೆಯ ಈ ಶಾಸ್ತ್ರೀಯ ಸಂಸ್ಕೃತಿಯನ್ನರಿಯಬೇಕಾಗಿದ್ದರೆ ಶುದ್ಧ ಸೂಡ, ಸಾಲಗಸೂಳ, ಸೂಳಾದಿ ಎಂಬ ಶಾಸ್ರೋಕ್ತ ಸಂಜ್ಞೆಗಳ ನೈರುಕ್ತ ಲಕ್ಷಣಗಳನ್ನು ಮೊದಲಾಗಿ ತಿಳಿದುಕೊಳ್ಳುವುದು ಯುಕ್ತ, ಪ್ರಸ್ತುತ ಲೇಖನದಲ್ಲಿ ಈ ಕುರಿತು ಯಥಾಮತಿ ವಿಮರ್ಶಿಸಲಾಗಿದೆ-

ಸೂಡ : ಮಾರ್ಗದೇಶೀ ಭೇದಗಳಿಂದ ಪ್ರಸಿದ್ಧವಾದ ನಮ್ಮ ಸಂಗೀತ ಪದ್ಧತಿಯ ಚಿರಪರಂಪರೆಯಲ್ಲಿ, ಸಾಹಿತ್ಯದ ಕಾವ್ಯಪರಂಪರೆಯಲ್ಲಿ ಛಂದೋಬಂಧಗಳು ಹೇಗೋ ಹಾಗೆ, ಲೆಕ್ಕವಿಲ್ಲದಷ್ಟು ವಿಧದ ಗೇಯವಸ್ತುಗಳು ಕಾಲಕಾಲಕ್ಕೆ ಹುಟ್ಟಿಕೊಂಡಿವೆ. ಸಂಸ್ಕೃತದಲ್ಲಿ ಇವಕ್ಕೆಲ್ಲ ಸರ್ವಸಾಮಾನ್ಯವಾಗಿ ಗೀತ, ಪ್ರಬಂಧ, ವಸ್ತು, ರೂಪಕ ಎಂಬ ಹೆಸರು. ಸಂಗೀತ ರತ್ನಾಕರಾದಿ ಶಾಸ್ತ್ರ ಗ್ರಂಥಗಳಲ್ಲಿ ಪ್ರಬಂಧಕ್ಕೆ ಪರ್ಯಾಯವಾಗಿ 'ಸೂಡ' ಎಂಬ ಶಬ್ದವೂ ಹೆಚ್ಚು ಬಳಕೆಯಲ್ಲಿದೆ. ಗಾಂಧರ್ವವೆಂದು ಪ್ರಸಿದ್ಧವಾದ ಮಾರ್ಗಪದ್ಧತಿಯಲ್ಲಿರುವ ಸಾಮಗೀತೆ, ಜಾತಿ, ಕಪಾಲ, ಕಂಬಲ, ಶುದ್ಧ, ಭಿನ್ನ, ಗೌಡ, ಸಾಧಾರಣ, ಮದ್ರಕ ಇತ್ಯಾದಿ ಗೀತೆಗಳಿಗೆಲ್ಲ ಶುದ್ಧ ಸೂಡಗಳೆಂಬ ಹೆಸರೆಂದು ಸಂಗೀತರತ್ನಾಕರದಲ್ಲಿ ಹೇಳಿದೆ. ದೇಶೀ ಪದ್ಧತಿಯ ಪ್ರಬಂಧಗಳು ಅವುಗಳ ಬಂಧಗೌರವ, ತಾಳಭೇದ, ಪ್ರಯೋಗ ಪ್ರಾಶಸ್ತ್ರಾದಿ ತಾರತಮ್ಯಕ್ಕನುಸಾರವಾಗಿ ವರ್ಗಶಃ ವಿಭಾಗಿಸಲ್ಪಟ್ಟಿವೆ. ಆ ವರ್ಗಗಳ ಪ್ರತ್ಯೇಕ ಪ್ರಬಂಧಗಳಿಗೆ ಲಕ್ಷಣಗ್ರಂಥಗಳಲ್ಲಿ ಏಲಾಸೂಡ, ಡೇಂಕಿಗೂಡ, ಮಂಠಸೂಡ, ಮಾತ್ರಕಾಸೂಡ, ಗದ್ಯಸೂಡ ಇತ್ಯಾದಿ ವ್ಯವಹಾರವಿರುವುದಲ್ಲದೆ ಆ ಒಂದೊಂದು ವರ್ಗಗಳಿಗೂ ಶುದ್ಧ ಸೂಡ, ಸಾಲಗ, ಸೂಡ,





೧. ಸಂಗೀತಸಾರಾಮೃತ, ಪ್ರಬಂಧಾಧ್ಯಾಯದ ಆರಂಭದ ಶ್ಲೋಕಗಳು.
೨. ಸಂಗೀತರತ್ನಾಕರ, ಪ್ರಬಂಧಾಧ್ಯಾಯ, ಶ್ಲೋಕ ೩೧೪.
೩, ೪, ಸಂಗೀತೋಪನಿಷತ್ಸಾರೋದ್ಧಾರ.