ಈ ಪುಟವನ್ನು ಪ್ರಕಟಿಸಲಾಗಿದೆ

೨೪೨ / ಕುಕ್ಕಿಲ ಸಂಪುಟ

ತಿರಿಪ, ಬೋನ ಮೊದಲಾದ ಎಷ್ಟೋ ಕನ್ನಡ ಪದಗಳು ಮತಂಗಾದಿಗಳ ಕಾಲದಿಂದಲೇ ಪಾರಿಭಾಷಿಕ ಸಂಜ್ಞೆಗಳಾಗಿ ಬಳಕೆಯಲ್ಲಿರುವುದರಿಂದಲೂ, ದೇಶೀಯ ಸೂಡಗಳಲ್ಲಿ ಕರ್ಣಾಟಕ ಭಾಷಾರಚನೆಗಳೇ ಹೆಚ್ಚಾಗಿ ಇದ್ದಂತೆ ಲಕ್ಷಣಗ್ರಂಥಗಳಿಂದ ತಿಳಿಯುವುದ ರಿಂದಲೂ, ಸಂಸ್ಕೃತದಲ್ಲಿ ಈ ಪದಕ್ಕೆ ವ್ಯುತ್ಪತ್ತಿ ಕಾಣುವುದಿಲ್ಲವಾದುದರಿಂದಲೂ, ದಾಸಕೂಟದ ವಾಗ್ಗೇಯಕಾರರ ಕನ್ನಡ ಕೃತಿಗಳಿಗೆ ಸೂಳಾದಿ ಎಂಬ ವ್ಯವಹಾರವು ಇಂದಿಗೂ ಉಳಿದಿರುವುದರಿಂದ ಸಹ ಇದು ಕನ್ನಡ ಭಾಷೆಯ ಪದವಾಗಿರಬಹುದೆಂಬ ಅನುಮಾನವಾಗುವುದು. ಆದುದರಿಂದ ಕನ್ನಡದಲ್ಲಿ ಇದರ ಸುಳಿವು ಸಿಕ್ಕುವುದೋ ಹೇಗೆ ಎಂದು ನೋಡೋಣ.

ಪ್ರಬಂಧ ಎಂಬ ಪದಕ್ಕೆ 'ಕಟ್ಟಿದ ಕಟ್ಟು' ಎಂಬುದು ಯೋಗಾರ್ಥ. 'ಪ್ರಬಧ್ಯತೇ ಇತಿ ಪ್ರಬಂಧಃ' ಕಟ್ಟು ಎಂಬ ಧಾತುರೂಪವೇ ಕರ್ಮಾರ್ಥದಲ್ಲಿ ನಾಮವಾಗಿಯೂ ಇದೆ. ಈ ಕಟ್ಟು ಎಂಬ ಅರ್ಥವಿರುವ ಇನ್ನೊಂದು ಕನ್ನಡ ಪದ ಸೂಡು ಎಂಬುದು. ವೀಳ್ಯದೆಲೆ, ಬಾಳೆಎಲೆ, ಕಸಬರಿಕೆ, ಹರುವೆ ಸೊಪ್ಪು, ನೆಲ್ಲು, ಹುಲ್ಲು ಇತ್ಯಾದಿಗಳ ಕಟ್ಟುಗಳಿಗೆಲ್ಲ ಸೂಡು, ಸೂಡಿ ಎಂಬ ಹೆಸರಿರುವುದು ನಮಗೆಲ್ಲ ತಿಳಿದೇ ಇದೆ. ಸೂಡು ಎಂಬುದು ಕ್ರಿಯಾಪದವಾದರೆ ಅದಕ್ಕೆ ಮುಡಿ ಎಂಬ ಅರ್ಥವೂ ಪ್ರಸಿದ್ಧವಾಗಿದೆ. ಹೂಗಳನ್ನು ಸೂಡುವುದು ಎಂದರೆ ಮುಡಿದುಕೊಳ್ಳುವುದು. ಶಬ್ದಮಣಿದರ್ಪಣದಲ್ಲಿಯೂ 'ಸೂಡು = ಪುಷ್ಪಧಾರಣೇ ತೃಣಾದಿಪೂರೇಚ' ಎಂದು ಇವೆರಡು ಅರ್ಥಗಳನ್ನು ಕೊಟ್ಟಿದೆ. ಕಟ್ಟಿದ ಕಟ್ಟಿಗೆ ಕರ್ಮಾರ್ಥದಲ್ಲಿ ಈ ಹೆಸರಾಗಬೇಕಾದರೆ 'ಸೂಡು' ಎಂಬುದಕ್ಕೆ ಕಟ್ಟು ಎಂಬ ಕ್ರಿಯಾರ್ಥವಿದ್ದಿರಬೇಕಾದುದು ಸಹಜ. ಪ್ರಾಚೀನ ಕನ್ನಡ ಕಾವ್ಯಾದಿಗಳಲ್ಲಿ ಹಾಗಿರುವುದೂ ಕಾಣುತ್ತದೆ. ಸ್ವಯಂವರಾದಿ ವಿವಾಹಸಂದರ್ಭದಲ್ಲಿ 'ಮಾಲೆ ಸೂಡಿದಳ ಎಂಬ ಪ್ರಯೋಗವಿರುವುದಷ್ಟೆ? ಅಲ್ಲಿ ವಧುವು ವರನ ಕೊರಳಿಗೆ ಮಾಲೆಯನ್ನು ಕಟ್ಟಿದಳು ಎಂದು ವಾಚ್ಯಾರ್ಥ. ಪುಷ್ಪಧಾರಣೆ ಎಂಬುದರ ಲಕ್ಷಣಾರ್ಥವು ಇಲ್ಲಿ ಪ್ರವರ್ತಿಸುವ ಸಂಭವವಿಲ್ಲ. ಏಕೆಂದರೆ ಪುಷ್ಪಧಾರಣದಲ್ಲಿ ಸೂಡು ಎಂಬುದು ಸ್ವಾರ್ಥಕ್ರಿಯೆ; ತಾನು ಮುಡಿದುಕೊಳ್ಳುವುದು ಎಂಬರ್ಥ. ಪರಾರ್ಥದಲ್ಲಿಯಾದರೆ ಮುಡಿಸು ಎಂದಂತೆ ಇದಕ್ಕೂ ಇಸು ಪ್ರತ್ಯಯವನ್ನು ಹಚ್ಚಿ ಸೂಡಿಸು ಎಂದೇ ಪ್ರಯೋಗದಲ್ಲಿರುವುದು. ಇದರಂತೆಯೇ ಪಟ್ಟಕಟ್ಟಿದರು ಎಂಬರ್ಥದಲ್ಲಿ 'ಪಟ್ಟ ಸೂಡಿದ‌' ಎಂಬ ಪ್ರಾಚೀನ ಕವಿಪ್ರಯೋಗವಿದೆ. ಕಿರೀಟಧಾರಣದ ಪೂರ್ವವಿಧಿಯಾಗಿ ಪಟ್ಟೆ ವಸ್ತ್ರವನ್ನು ತಲೆಗೆ ಕಟ್ಟುವುದರಿಂದಲೇ ಪಟ್ಟ ಕಟ್ಟುವುದು (ಪಟ್ಟಬಂಧ) ಎಂಬ ಹೆಸರಾದುದು. ಪಟ್ಟ ಸೂಡಿದರ್ ಎಂಬುದಕ್ಕೆ ಪಟ್ಟ ಕಟ್ಟಿದರು ಎಂದೇ ಅರ್ಥ; ಇಲ್ಲಿಯೂ ಸೂಡಿದ‌ ಎಂಬುದು ಬಂಧನಾರ್ಥದಲ್ಲಿರುವ ಕ್ರಿಯಾಪದವೆಂಬುದರಲ್ಲಿ ಸಂದೇಹವಿಲ್ಲ. ಇನ್ನೂ ಇಂತಿರುವ ಕೆಲವು ಪ್ರಾಚೀನ ಕವಿಪ್ರಯೋಗಗಳಿಂದ ಸಹ ಸೂಡು ಎಂಬ ಧಾತುವಿಗೆ ಪುಷ್ಪಧಾರಣ ಮತ್ತು ಬಂಧನ


೧. ವಡ್ಡಾರಾಧನೆ, ಪು. ೪೧, ೧೦೮ - ಪಂಪಭಾರತ, ತೃತೀಯಾಶ್ವಾಸ - ೬೪.
೨. ಚಿಕ್ಕಮಗಳೂರು ಶಾಸನ (C 500 A. D.) History of Kannada literature.
೩. ಪಂಪಭಾರತ ಅ. ೧೪- (೧೭ ಗದ್ಯ) ವಡ್ಡಾರಾಧನೆ, ಪು. ೧೦೩.
೪. ಕವಿರಾಜಮಾರ್ಗ.