ಈ ಪುಟವನ್ನು ಪ್ರಕಟಿಸಲಾಗಿದೆ
೨೪೮ / ಕುಕ್ಕಿಲ ಸಂಪುಟ

“ಏಲಾದಿ ವರ್ಗದ ದೇಶೀ ಪ್ರಬಂಧಗಳಿಗೆ ಛಾಯಾಲಗತ್ವವಿರುವುದೆಂಬುದು ಹೇಗೆ ಆಚಾರ್ಯಸಮ್ಮತವೋ ಎಂದರೆ ಶಾಸ್ತ್ರಪ್ರಸಿದ್ಧವಾದ ವಿಷಯವೋ ಹಾಗೆಯೇ ಶುದ್ಧ ಪ್ರಬಂಧಗಳ ಸಾದೃಶ್ಯವಿರುವುದರಿಂದ ಲೋಕದಲ್ಲಿ ಇದಕ್ಕೆ ಶುದ್ಧ ಎಂಬ ವ್ಯವಹಾರವಿರುವುದೂ ಸಮ್ಮತವೇ ಆಗಿದೆ' ಎಂಬ ಅಭಿಪ್ರಾಯವು ಈ ಶ್ಲೋಕದಿಂದ ಸ್ಪಷ್ಟವಾಗು ವುದು. ಛಾಯಾಲಗತ್ವ ಮತ್ತು ಶುದ್ದ ಸಾದೃಶ್ಯ ಎಂಬ ಎರಡೂ ಗುಣಗಳು ಈ ಪ್ರಬಂಧಗಳಲ್ಲಿವೆ, ಆದುದರಿಂದ ಶುದ್ಧ ಮತ್ತು ಸಾಲಗಗಳೆಂಬ ಎರಡು ಹೆಸರುಗಳಿಂದ ಇವನ್ನು ವ್ಯವಹರಿಸುವುದು ನ್ಯಾಯವೇ ಆಗಿದೆ ಎಂಬ ತಾತ್ಪರ್ಯ. ಹೀಗೆ ಛಾಯಾಲಗತ್ವವೆಂದರೆ ಶುದ್ಧ ಸಾದೃಶ್ಯವಲ್ಲ ಎಂಬುದು ಶಾರ್ಙ್ಗದೇವನ ಮಾತಿನಿಂದಲೇ ಸ್ಪಷ್ಟವಾಗುವುದರಿಂದ ಹಿಂದಿನ ಶ್ಲೋಕದ ವ್ಯಾಖ್ಯಾನದಲ್ಲಿ ಛಾಯೆ ಎಂದರೆ ಶುದ್ಧ ಸಾದೃಶ್ಯ ಎಂಬ ಅರ್ಥಕೊಟ್ಟಿರುವುದು ಸರಿಯೇ? ಅದೂ ಅಲ್ಲದೆ ಈ ಶ್ಲೋಕದ ವ್ಯಾಖ್ಯಾನದಲ್ಲಿ ಕಲ್ಲಿನಾಥನು ಶುದ್ಧ ಸಾದೃಶ್ಯ ಎಂಬುದಕ್ಕೆ 'ಶುದ್ಧಸ್ಯ ಜಾತ್ಯಾದೇಃ ಸಾದೃಶ್ಯತೋ ನಿಯಮಾನತಿ ಲಂಘನಾದಿತ್ಯರ್ಥ' ಎನ್ನುತ್ತಾನೆ. ಇದರಿಂದ, ಜಾತ್ಯಾದಿ ಶುದ್ಧ ಪ್ರಬಂಧಗಳಿಗೆ ಯಾವ ಶಾಸ್ರೋ ನಿಯಮಗಳಿವೆಯೋ ಆ ನಿಯಮಗಳನ್ನು ಮೀರದಿರುವುದೇ ಶುದ್ಧ ಸಾದೃಶ್ಯ ಎಂದೂ ಏಲಾದಿಗಳು ಅದೇ ನಿಯಮದಲ್ಲಿರುವುದರಿಂದ ಅವು ಶುದ್ಧ ಪ್ರಬಂಧ ಗಳೆಂಬುದೇ ಸರಿಯೆಂದೂ ಅವನೇ ಹೇಳಿದಂತಾಯಿತಷ್ಟೆ? ಇನ್ನೂ ಮುಂದುವರಿದು 'ಧ್ರುವಾದೇಸ್ತು ನಿಯಮಾತಿಲಂಘನಾತ್ ಸರ್ವಥಾ ಸಾಲಗತ್ವಮೇವ ಎಂದೂ ಹೇಳುತ್ತಾನೆ. ಶಾಸ್ತ್ರೋಕ್ತನಿಯಮಗಳನ್ನು ಮೀರಿರುವುದರಿಂದ ಧ್ರುವಾದಿಪ್ರಬಂಧಗಳು ಸರ್ವಥಾ ಸಾಲಗಗಳೇ ಎನ್ನುವ ಈ ಮಾತು ಮೊದಲು ಅವನೇ ಹೇಳಿರುವುದಕ್ಕೆ ವಿರುದ್ಧವಾಗಿದೆಯಲ್ಲ! ಪೂರ್ವಾಪರ ವಿರುದ್ಧವಾದ ಇವೆರಡು ಅರ್ಥಗಳಲ್ಲಿ ಯಾವುದು ಸರಿ, ಯಾವುದು ತಪ್ಪು? ಶಾರ್ಙ್ಗದೇವನು ಹೇಳಿರುವುದಕ್ಕಂತೂ ಈ ಎರಡು ಅರ್ಥಗಳೂ ಹೊಂದುವುದಿಲ್ಲ. ಏಕೆಂದರೆ ಆ ಲಕ್ಷಣಶ್ಲೋಕಗಳಲ್ಲಿ ಛಾಯೆ ಎಂಬುದಕ್ಕೆ ಶುದ್ಧದ ಛಾಯೆ ಎಂದೇ ಗೃಹೀತಾರ್ಥ ಎನ್ನುವ ಯಾವ ಸೂಚನೆಯೂ ಕಾಣುವುದಿಲ್ಲ. ಶುದ್ಧದ ನಿಯಮಗಳನ್ನು ಮೀರಿರುವ ಅಥವಾ ಶುದ್ಧದ ಲಕ್ಷಣಗಳಿಂದ ಸ್ಖಲಿತವಾಗಿರುವ, ಎಂಬ ಅರ್ಥವಿರುವಲ್ಲಿ ಶಾರ್ಙ್ಗದೇವನು ಸರ್ವತ್ರ ವಿಕೃತ ಎಂಬ ಪದವನ್ನು ಪಾರಿಭಾಷಿಕವಾಗಿ ಪ್ರಯೋಗಿಸಿರುವುದೂ ಕಾಣುತ್ತದೆ. ಶುದ್ಧಸ್ವರ X ವಿಕೃತಸ್ವರ, ಶುದ್ಧಜಾತಿ X ವಿಕೃತಜಾತಿ, ಶುದ್ಧಾವಸ್ಥೆ X ವಿಕೃತಾವಸ್ಥೆ ಇತ್ಯಾದಿ. ಶುದ್ಧದ ಛಾಯೆ ಎಂಬುದು ಗೃಹೀತಾರ್ಥವಾಗಿದ್ದರೆ ಛಾಯಾಪ್ರಬಂಧಗಳು ಎಂದಷ್ಟೆ ಹೇಳಿದರೆ ಸಾಕಾಗುತ್ತಿದ್ದಿಲ್ಲವೆ? ಛಾಯೆಗೆ 'ಲಗ'ವನ್ನು ಸೇರಿಸುವ ಆವಶ್ಯಕತೆ ಇತ್ತೆ? ಎರಡನೆ ಶ್ಲೋಕದಲ್ಲಿಯೂ ಛಾಯಾತ್ನಂ ಎಂಬ ಸರಳವಾದ ಭಾವರೂಪಕ್ಕೆ ಬದಲು 'ಛಾಯಾಲಗತ್ವಂ' ಎನ್ನಬೇಕಾಗಿರಲಿಲ್ಲ. ಸಂಗೀತರತ್ನಾಕರದಲ್ಲಿಯೇ ಸಪ್ರಪಂಚವಾಗಿ ನಿರೂಪಿಸಿರುವ ಏಲಾದಿ ಪ್ರಬಂಧ ಲಕ್ಷಣಗಳನ್ನು ಪರಿಶೀಲಿಸಿದರೆ ಜಾತ್ಯಾದಿ ಶುದ್ಧ ಪ್ರಬಂಧಗಳ ಲಕ್ಷಣಗಳೆಲ್ಲ ಅವುಗಳಲ್ಲಿ ಯಥಾವತ್ತಾಗಿರುವುದಿಲ್ಲ ಎಂಬುದೂ ಸ್ಪಷ್ಟವಾಗುವುದು. ಮಾತ್ರವಲ್ಲ ಶುದ್ಧದ ಲಕ್ಷಣಗಳಿಗೆ ಅವು ಸರ್ವಾತ್ಮನಾ ಸಮವಾಗಿವೆ ಎಂದರೆ, ಆಚಾರ್ಯ ಸಮ್ಮತವಾಗಿ ಛಾಯಾ ಲಗತ್ಯವಿದೆ ಎಂದು ಆ ಶ್ಲೋಕದ ಪೂರ್ವಾರ್ಧದಲ್ಲಿ ಹೇಳಿರುವುದಕ್ಕೆ ಅರ್ಥವೇನು? ಆದುದರಿಂದ ಛಾಯಲಗತ್ವ ಮತ್ತು ಶುದ್ಧಸಾದೃಶ್ಯ ಎಂಬೆರಡು ಪದಗಳಿಗೂ ಕಲ್ಲಿನಾಥನು ಕೊಟ್ಟಿರುವ ವಿವರಣೆಯು ಏನೇನೂ ಸಮರ್ಪಕವಲ್ಲ ಎಂಬುದು ಸ್ಪಷ್ಟ. ಆದರೂ ಅರ್ವಾಚೀನಲಾಕ್ಷಣಿಕರು ಅದೇನೋ ಒಂದು ಗೌರವಬುದ್ಧಿಯಿಂದ ಅವನು ಕೊಟ್ಟಿರುವ 'ಶುದ್ಧ ಸ್ಯಛಾಯಾಂ ಲಗತಿ ಇತಿ' ಎನ್ನುವ ನಿರುಕ್ತಿಯನ್ನೇ ತಮ್ಮ ತಮ್ಮ