ಕೈಶಿಕಿಯನ್ನು ದಾಕ್ಷಿಣಾತ್ಯ ವೃತ್ತಿಯೆಂದು ಕರೆದಿರುವುದನ್ನು ಲಕ್ಷಿಸಬೇಕು.
ಯೇಷು ದೇಶೇಷು ಯಾ ಪೂರ್ವಾಪ್ರವೃತ್ತಿಃ ಪರಿಕೀರ್ತಿತಾ |
ತದ್ ವೃತ್ತಿಕಾನಿ ರೂಪಾಣಿ ತೇಷು ತಜ್ಞ ಪ್ರಯೋಜಯೇತ್ ||
ಯಾವ ದೇಶದಲ್ಲಿ ಯಾವ ಪ್ರವೃತ್ತಿ ಪ್ರಧಾನವೋ ಅಲ್ಲಿ ಅದಕ್ಕೆ ತಕ್ಕುದಾದ ಪ್ರಯೋಗವಿರಬೇಕು ಎಂದರ್ಥ. ಆ ಪ್ರಕಾರ ಬಹುನೃತ್ತಗೀತವುಳ್ಳ ಸಂಸ್ಕೃತ ನಾಟ್ಯ ಪ್ರಯೋಗ ನಮ್ಮಲ್ಲಿ ನಡೆಯುತ್ತಿತ್ತು. ಆ ಶಾಸ್ತ್ರೀಯ ಪರಂಪರೆ ನಮ್ಮ ದೇಶಿಯಲ್ಲಿ ಸ್ಥಾಪಿತವಾಯಿತು. ಮತಂಗ, ಸೋಮೇಶ್ವರ, ಶಾರ್ಙ್ಗದೇವಾದಿಗಳಿಂದ ಇದು ತಿಳಿಯುವುದು.
ಹಿಂದೆ ಹೇಳಿದ ಅನುಬದ್ಧ ರಚನೆ ದೇಶಿಯಲ್ಲಿ ಶುದ್ಧ ಸೂಡ-ಸಾಲಗಸೂಡ ಎಂದು ಪ್ರಸಿದ್ಧವಾಯಿತು. ಅವೇ ಏಲಾದಿ ಮತ್ತು ಧ್ರುವಾದಿ ಪ್ರಬಂಧಗಳು, ಸೂಡ ಶಬ್ದಕ್ಕೆ ಕಟ್ಟು, ನಿಬಂಧ ಎಂದರ್ಥ. ಹಿಂದೆ ಹೇಳಿದಂತೆ ಯತಿಲಯ, ವಾದ್ಯಗತಿ, ವರ್ಣ, ಸ್ವರ ಅಕ್ಷರ ಎಲ್ಲವೂ ಕಟ್ಟುನಿಟ್ಟಾಗಿರುವ ಅನುಬದ್ಧ ಕೃತಿ- ಸೂಡ. ಶಾಸ್ರೋಕ್ತ ತಾಳದ್ದು ಶುದ್ಧ ಸೂಡ. ಸಾಲಗ ತಾಳ (ಛಾಯಾಲಗ, ಖಂಡತಾಳ)ವಾದರೆ ಸಾಲಗಸೂಡ.
ದೇಶೀ ನೃತ್ಯ ಪದ್ಧತಿಗಳಲ್ಲಿ ಹಾಡಲ್ಪಡುತ್ತಿದ್ದುದೂ ಇವೇ ಪ್ರಬಂಧಗಳು. ಅದರಿಂದ ಅವಕ್ಕೂ ಸೂಡನೃತ್ಯಗಳೆಂದು ಹೆಸರು.
ಇನ್ನೊಂದು ವಿಚಾರ ಇಲ್ಲಿ ಸ್ಮರಿಸತಕ್ಕದ್ದಿದೆ. ನಾಟ್ಯಸಂಗೀತವಾದ ಗಾಂಧರ್ವದಲ್ಲಿ ರಾಗಾಲಾಪನೆ ಇದ್ದಿಲ್ಲ. ತಾಳಲಯಪ್ರಧಾನವಾದ ಧ್ರುವಾಗಾನದಲ್ಲಿ ಅದಕ್ಕೆ ಅವಕಾಶ ವಿಲ್ಲ. ನಾಟಕದಲ್ಲಿ ಅದರ ಆವಶ್ಯಕತೆಯೂ ಇಲ್ಲ. ಕ್ರಮೇಣ ದೇಶಿಯಲ್ಲಿ ನಾಟ್ಯವಿಲ್ಲದ ಕೇವಲ ಸಂಗೀತ ವಿಕಾಸಗೊಂಡಿತು. ರಾಗಾಲಾಪ ಕ್ರಮ ರೂಢಿಗೆ ಬಂತು. ಅದೇ ಧ್ರುವಾ ಪ್ರಬಂಧಗಳು ದೇಶ ಭಾಷೆಗಳಲ್ಲಿ ಪರಿವರ್ತನೆಗೊಂಡವು. ಶಾಸ್ತ್ರದಲ್ಲಿ ಅವನ್ನು 'ದೇಶಿಕಾರ' ಪ್ರಬಂಧಗಳೆಂದು ಕರೆಯಲಾಗಿದೆ. ವಾಗ್ಗೇಯಕಾರ ಪ್ರಬಂಧಗಳೆಂದರೂ ಅವೇ. ರಾಗಭೇದಗಳೂ ಉಂಟಾದುವು. ಈ ವಿಕಾಸವನ್ನು ಮತಂಗನ ಬೃಹದ್ದೇಶಿಯಿಂದ ತಿಳಿಯಬಹುದು. ಅಲ್ಲಿಂದ ಇದು ಮೊದಲಾಯಿತು. ರಾಗಮಾರ್ಗಸ್ಯ ಸದ್ರೂಪಂ ಯನ್ನೋಕ್ಕಂ ಭರತಾದಿಭಿಃ'- ಭರತಾದಿಗಳು ಈ ರಾಗವಿಧಾನವನ್ನು ಹೇಳಿಲ್ಲವೆನ್ನುತ್ತಾನೆ.
ಅಂದಿನಿಂದ ನಮ್ಮಲ್ಲಿ ನಾಟ್ಯ ಸಂಗೀತ-ಗಾನಸಂಗೀತ ಹೀಗೆ ಎರಡು ಕವಲುಗಳಾಗಿ ನಡೆದುಬಂದಿವೆ. ಇವು, ನಾಟ್ಯದಂಡಿ- ವೀಣಾದಂಡಿ ಎಂದೂ ಕರೆಯಲ್ಪಟ್ಟಿವೆ.
ಕರ್ಣಾಟಕದಲ್ಲಿ ವೀಣಾದಂಡೀ ಸಂಪ್ರದಾಯವು ಬಹಳ ಮುಂದುವರಿದಿತ್ತು. ಏಳೆ, ಅಕ್ಕರ ಮೊದಲಾದ ಕರ್ಣಾಟಕ ಜಾತಿಗಳ 'ಪಾಡುಗಬ್ಬ'. ಆ ಆ ದಂಡಿಗಾನಕ್ಕೆ ಪ್ರಶಸ್ತವಾಗಿತ್ತು. ಆದ್ದರಿಂದ ಆ ಪಾಡುಗಬ್ಬವು ನಮ್ಮ ಸಾಹಿತ್ಯದಲ್ಲಿ 'ಬೆದಂಡೆ' ಎಂದು ಕರೆಯಲ್ಪಟ್ಟಿದೆ. ಇದು 'ವೈದಂಡಿಕ' ಪದದ ತದ್ಭವ. ಈ ಕುರಿತು 'ಬೆದಂಡೆ ಚತ್ತಾಣ' ಎಂಬ ಲೇಖನದಲ್ಲಿ ವಿಸ್ತಾರವಾಗಿ ನಿರೂಪಿಸಿರುತ್ತೇನೆ. ('ಪ್ರಬುದ್ಧ ಕರ್ಣಾಟಕ' ಸಂ. ೫೩, ಸಂಚಿಕೆ ೩)
ಸೂಡ ಸಂಪ್ರದಾಯವೆಂದರೂ ಇದೇ. ಬರೀ ಸಂಗೀತವೆಂದರೆ ವೀಣಾದಂಡಿ, ಇಂದಿನವರೆಗೂ ಅದೇ ಪರಂಪರೆ ನಮ್ಮಲ್ಲಿ ನಡೆದುಬಂದಿದೆ. ಇಂದಿನ ತಾಳಗಳೆಲ್ಲ ಸಾಲಗ ತಾಳಗಳಾದ್ದರಿಂದ ಇಂದಿನ ಪ್ರಬಂಧಗಳೂ ಸಾಲಗಸೂಡಗಳೇ ಸರಿ. ಈ ಕುರಿತು