ಈ ಪುಟವನ್ನು ಪ್ರಕಟಿಸಲಾಗಿದೆ

೨೮೬ / ಕುಕ್ಕಿಲ ಸಂಪುಟ ಒಟ್ಟೊಟ್ಟಾಗಿ ಉಚ್ಚರಿಸುವುದು ಎಂಬ ವಿಶಿಷ್ಟಾರ್ಥವಿದೆ. ಸಸ, ಸರಿಗ, ರೀಮಗ, ಗಾನುಪಗಾ, ಇತ್ಯಾದಿ ಈ ಅಲಂಕಾರ ಕಲೆಗಳಲ್ಲಿ ಕಾಲಪ್ರಮಾಣಭೇದವೂ ಇದೆ. ದೀಪ್ತಾಯತಾದಿ ಶ್ರುತಿಗಳೇ ಗಾನದಲ್ಲಿ ಪ್ರಸನ್ನಾದಿ, ಊರ್ಮಿ, ಬಿಂದು ಮುಂತಾದ ಕೊಟ್ಟ ಅಭಿನವಗುಪ್ತನ ಅಲಂಕಾರಗಳಾಗಿ ಪರಿಣಮಿಸಿವೆ ಎಂಬುದು ವ್ಯಾಖ್ಯಾನದಿಂದಲೂ ಸ್ಪಷ್ಟವಾಗಿಯೇ ಇದೆ. ಭರತನು ಹೇಳಿರುವ ಅಲಂಕಾರಗಳೂ ಇಪ್ಪತ್ತೆರಡು ಇರುವುದರಿಂದ ನಾನ್ಯದೇವನು ಇದನ್ನು ಅನುಲಕ್ಷಿಸಿ ಕಲಾಕಾಲಪ್ರಮಾಣೇನ ವಿಭೇದಿತಾ: ಎಂಬ ಮಾತನ್ನು ಹೇಳಿದ್ದಾಗಿರಲಿಕ್ಕೂ ಸಂಭವವಿದೆ. ಅದೇನೆಂದು ಆತನ ಸ್ಪಷ್ಟೋಕ್ತಿ ಇಲ್ಲದಿರುವುದರಿಂದ ನಾವು ಖಂಡಿತ ಹೇಳುವಂತಿಲ್ಲ. ಹೇಗಿದ್ದರೂ ಈ ಶ್ರುತಿಜಾತಿಗಳಂತೂ ಉಚ್ಚನೀಚ ಪ್ರಮಾಣದ ಶ್ರುತಿ ಭೇದಗಳಲ್ಲವೆಂಬುದೂ ಉಚ್ಚನೀಚ ಭೇದಕ್ಕೆ ಇವುಗಳ ಕಾರಣವಿಲ್ಲವೆಂಬುದೂ ನಿಸ್ಸಂದಿಗ್ಧವೇ ಸರಿ.

ಶ್ರೀ ಸತ್ಯನಾರಾಯಣನವರು ನಾನ್ಯದೇವನ 'ಕಲಾಕಾಲಪ್ರಮಾಣೇ ವಿಭೇದಿತಾಃ' ಎಂಬ ಮಾತಿಗೆ ಅರ್ಥ ಮಾಡಿರುವುದು ಬಹಳ ವಿಚಿತ್ರವಾಗಿದೆ. 'ಈ ಐದು ಶ್ರುತಿಜಾತಿಗಳು ಹೇಗೆ ಇಪ್ಪತ್ತೆರಡಾಗುತ್ತವೆ ಎಂಬುದಕ್ಕೆ ಅವನು ಕೊಡುವ ಕಾರಣರೂಪವಾದ ಶ್ರುತಿಲಕ್ಷಣವು ಅತ್ಯಂತ ಮುಖ್ಯವೂ ಸ್ವಾರಸ್ಯವೂ ಆಗಿದೆ. ಅದನ್ನು ಬೇರೆ ಯಾವ ಶಾಸ್ತ್ರಕಾರರೂ, ಶಾರ್ಙ್ಗದೇವನೂ ಸಹ, ಹೇಳಲಿಲ್ಲ. ಈ ಶ್ರುತಿಲಕ್ಷಣದಿಂದ ಸ್ವರತ್ವ, ಸ್ವರಸ್ವಸಂವೇದ್ಯತೆ ಮುಂತಾದ ಪ್ರಾಥಮಿಕ ಪ್ರಮೇಯಗಳು ಅನುಮಿತಿಯೊಂದಿಗೆ ಸಿದ್ಧವಾಗುತ್ತವೆ : ಪಂಚೈತಾಃ ಕಲಾಕಾಲಪ್ರಮಾಣೇನ ವಿಭೇದಿತಾ ದ್ವಾವಿಂಶತಿರಿತಿ ವ್ಯಾಖ್ಯಾತಾಃ | ದೀಪ್ತಾ, ಆಯತಾ, ಕರುಣಾ, ಮೃದು ಮಧ್ಯಾಗಳಲ್ಲಿ ಪ್ರತಿಯೊಂದೂ ಇತರ ಶ್ರುತಿಗಳಿಂದ ಕಾಲ, ಕಲಾ, ಮತ್ತು ಪ್ರಮಾಣಗಳಲ್ಲಿ ಭಿನ್ನವಾಗಿರುತ್ತದೆ ಎನ್ನುತ್ತಾರೆ. (೩೭೫).

ಇದರಲ್ಲಿ 'ಮುಖ್ಯವೂ ಸ್ವಾರಸ್ಯವೂ' ಆಗಿರುವುದು ಇವರು ಕಲ್ಪಿಸಿರುವ ಈ ಅರ್ಥವೇ ಸರಿ. 'ಕಲಾ ಕಾಲ ಪ್ರಮಾಣೇನ' ಎಂಬ ತೃತೀಯ ವಿಭಕ್ತಿ ಏಕವಚನದಲ್ಲಿರುವ ಈ ಸಮಸ್ತ ಪದಕ್ಕೆ 'ಕಾಲ, ಕಲಾ ಮತ್ತು ಪ್ರಮಾಣಗಳಲ್ಲಿ' ಎಂಬ ಅರ್ಥವನ್ನು ವಿಭಕ್ತಿಜ್ಞಾನವಿದ್ದವರು ಯಾರಾದರೂ ಮಾಡಬಹುದೆ?

ಶ್ರೀಯುತರು ಇದನ್ನೇ ಮತ್ತೂ ಮತ್ತೂ ಒತ್ತಿ ಹೇಳುತ್ತಾರೆ :

'ಇವುಗಳ ಲಕ್ಷಣಗಳನ್ನು ನಾನ್ಯದೇವನು ಕಲಾಕಾಲಪ್ರಮಾಣ ಎಂದು ತ್ರಿವಿಧವಾಗಿ ಹೇಳಿರುವನಷ್ಟೆ. ಪ್ರಮಾಣವೆಂದರೆ ಹಿಂದಿನ ಧ್ವನಿಗೂ ಈ ಶ್ರುತಿಯನ್ನುಂಟು ಮಾಡುವವರೆಗೆ ಇರುವ ಧ್ವನಿಗೂ ಮಧ್ಯದಲ್ಲಿರುವ ಅಂತರಾಳ ಅಥವಾ ನಾದವಿಸ್ತಾರ ಕಾಲ ಈ ಶ್ರುತಿಯು ಸ್ಪಷ್ಟರೂಪದಲ್ಲಿ ಗೋಚರಿಸಲು ಹಿಡಿಯುವ ಕನಿಷ್ಠ ಕಾಲಾವಕಾಶ, ಕಲೆ ಎಂದರೆ ಈ ಶ್ರುತಿಯ ಪ್ರತ್ಯೇಕವಾದ ಅಸ್ತಿತ್ವವು ಗೋಚರಿಸುವುದಕ್ಕೆ ಬೇಕಾಗುವ ಕನಿಷ್ಠ ಕಂಪನ ಮೌಲ್ಯ. (!)

'ಶ್ರುತಿಪಂಚಕದಲ್ಲಿ ಪ್ರತಿಯೊಂದಕ್ಕೂ ಕಾಲ, ಕಲಾ, ಮತ್ತು ಪ್ರಮಾಣಗಳು ನಿರ್ದಿಷ್ಟವಾಗಿಯೂ ಬೇರೆ ಬೇರೆಯಾಗಿಯೂ ಇರುವುದರಿಂದ ಪ್ರತಿಯೊಂದಕ್ಕೂ ಒಂದು ವಿಶಿಷ್ಟ ವ್ಯಕ್ತಿತ್ವವು ಲಭಿಸುತ್ತದೆ'. (೩೮೪)

ಹೀಗೆ ಈ ಶ್ರುತಿಗಳು ಸಂಗೀತಶಾಸ್ತ್ರಕ್ಕೆ ಆಧಾರಭೂತಪ್ರಮೇಯಗಳಾದ ನಾದಶ್ರುತಿ, ಜಾತಿ, ಸ್ವರ ಅದರ ವಾದಿ ಸಂವಾದಿಯೇ ಮೊದಲಾದ ನಾಲ್ಕು ವಿಧ, ಸ್ಥಾಯಿ, ಗ್ರಾಮ ಈ