ಈ ಪುಟವನ್ನು ಪ್ರಕಟಿಸಲಾಗಿದೆ
ಎರಡು ವಿಮರ್ಶೆಗಳು / ೨೯೯

ಕ್ರಮವಾಗಿ ೧೨+೧೮+೧೪+೧೫+೧೩+೧೨+೨೯+೧೦+೫+೪ರಂತೆ ೧೦೨ರಷ್ಟು ಇತರ ಪ್ರಚಲಿತ ರಾಗಗಳೂ ಈ ಗ್ರಂಥದಲ್ಲಿ, ಪ್ರತ್ಯೇಕ ರಾಗಭಾವದ್ಯೋತಕವಾದ ಸ್ವರ ಸಂಚಾರದೊಡನೆ ಲಕ್ಷಣತಃ ನಿರೂಪಿಸಲ್ಪಟ್ಟಿವೆ.
ಈ ವರ್ಗೀಕರಣದ ಹಾಗೂ ವಿಭಿನ್ನ ರಾಗ ಸ್ವರೂಪಗಳ ಪರಿಜ್ಞಾನಕ್ಕೆ ಹಿನ್ನಲೆಯಾಗಿ ಒಂದೆರಡು ಮಾತುಗಳನ್ನು ಇಲ್ಲಿ ಹೇಳುವುದು ಪ್ರಸಜ್ಯವೆನಿಸುವುದು.
ಶಾಸ್ತ್ರ ವಿಹಿತವಾಗಿಯೇ ನಮ್ಮ ಸಂಗೀತದಲ್ಲಿ ರಾಗಭೇದಗಳುಂಟಾಗುವುದು ಎರಡು ವಿಧದಿಂದ. ಪ್ರಯೋಗಿಸುವ ಸ್ವರಗಳು ಭಿನ್ನವಾದಲ್ಲಿಯೂ ರಾಗಭೇದವಾಗುವುದು. ಅದಲ್ಲದೆ, ಭಿನ್ನ ಸ್ವರ ಪ್ರಯೋಗವಿಲ್ಲದಿದ್ದರೂ ಸ್ವರಗಳ ವಿನಿಯೋಗ, ಎಂದರೆ ಸ್ವರಗಳ ಸಂಚಾರ ಕ್ರಮವಷ್ಟೇ ಭಿನ್ನವಾಗಿರುವುದೂ ರಾಗಭೇದವೆಂದೆಣಿಸಲ್ಪಡುವುದು. ಪರಂಪರೆಯಿಂದ ನಡೆದು ಬಂದಿರುವ ಈ ಕ್ರಮದಲ್ಲಿ, ಇವೆರಡೂ ವಿಧಗಳಿಂದ ಹುಟ್ಟುವ ಹಾಗೂ ಹುಟ್ಟಿಕೊಂಡಿರುವ ರಾಗಭೇದಗಳಿಗೆ ಒಂದು ಮಿತಿಯೇ ಇರುವುದಿಲ್ಲ. ಗಾನಕ್ರಮದ ವರ್ಣಾಲಂಕಾರಾದಿ ಸ್ವರ ಸಂಚಾರಗಳಲ್ಲಿ ಒಂದಿಷ್ಟು ವ್ಯತ್ಯಾಸವುಂಟಾಯಿತೆಂದರೆ ಅದೊಂದು ರಾಗಭೇದವೇ ಎಂಬ ಪರಿಕಲ್ಪನೆಯಿಂದ ರಾಗಗಳ ಸಂಖ್ಯೆ ಬೆಳೆಯುತ್ತಾ ಅದನ್ನು ಅಂಕೆಯಲ್ಲಿಟ್ಟುಕೊಳ್ಳುವುದೂ ನಾಮಮಾತ್ರ ಭಿನ್ನವೆಂಬಂತಿರುವವುಗಳನ್ನೆಲ್ಲ ಗುರುತಿಸುವುದೂ ಅಸಾಧ್ಯ ಮತ್ತು ಅವ್ಯವಹಾರವೆಂಬ ಸ್ಥಿತಿಯುಂಟಾಗಿತ್ತೆಂದರೂ ವಾಸ್ತವವೇ ಆಗಿದೆ. ಅದಕ್ಕಾಗಿ ಮುಂದೆ ಶಾಸ್ತ್ರಕಾರರಿಂದ ಈ ರಾಗಗಳನ್ನು ಬೇರೆ ಬೇರೆ ವಿಧದಲ್ಲಿ ವರ್ಗೀಕರಿಸಿ ವ್ಯವಸ್ಥೆಗೊಳಿಸುವ ಪ್ರಯತ್ನ ನಡೆಯುತ್ತ ಬಂದಿದೆ. ಪುರುಷರಾಗ, ಶ್ರೀರಾಗ, ನಪುಂಸಕರಾಗ, ಭಾರ್ಯಾಪುತ್ರರಾಗಗಳು, ಶುದ್ಧ, ಸಾಲಗ, ಸಂಕೀರ್ಣ ಜಾತಿಗಳು, ಘನರಾಗ, ಕ್ಷುದ್ರರಾಗ, ರಕ್ತಿರಾಗ ಮುಂತಾದ ಹಲವೊಂದು ವರ್ಗೀಕರಣಗಳಾಗಿದ್ದರೂ ಹೊಸತಾಗಿ ಹುಟ್ಟುವವಕ್ಕೊಂದು ನಿಯಂತ್ರಣವಿಲ್ಲದುದರಿಂದ ಈ ಸಮಸ್ಯೆಗೆ ಸೂಕ್ತ ಪರಿಹಾರವಾಗಲಿಲ್ಲ.
ಇದಕ್ಕಾಗಿ ನಮ್ಮ ಕರ್ಣಾಟಕ ಸಂಪ್ರದಾಯದಲ್ಲಿ ಮೇಳರಾಗ ಪದ್ಧತಿ ಹುಟ್ಟಿತು. ವಿಜಯನಗರದ ಸ್ವಾಮೀ ವಿದ್ಯಾರಣ್ಯರೇ ಇದರ ಮೂಲ ಪ್ರವರ್ತಕರು, ಸಪ್ತಕದ ಯಾವುದಾದರೂ ಸ್ವರ ಅಥವಾ ಸ್ವರಗಳು ಭಿನ್ನವಾದರೇ ರಾಗಭೇದ, ಅದಲ್ಲದೆ ಕೇವಲ ಸಂಚಾರ ಭೇದವೆಂಬುದು ರಾಗಭೇದವಲ್ಲವೆಂಬ ತತ್ವದ ಮೇಲೆ ಈ ಮೇಳ ಪದ್ಧತಿಯು ಕಟ್ಟಲ್ಪಟ್ಟಿವೆ. ಇದು ಮುಂದೆ ರಾಗಗಳು ಅಸಂಖ್ಯಾತವಾಗಿ ಹುಟ್ಟುವುದನ್ನು ಮಿತಿಗೊಳಿಸುವ ಜನನ ನಿಯಂತ್ರಣವೇ ಆಯಿತು. ಈ ತತ್ವದಂತೆ ಸ್ಥಾಯಿಯ ಶುದ್ಧವಿಕೃತ ಹನ್ನೆರಡು ಸ್ವರಭೇದಗಳಿಂದ ಹುಟ್ಟಬಹುದಾದ ಮೇಳರಾಗಗಳು ಇಂತಿಷ್ಟೇ ಎಂಬ ನಿರ್ಧಾರದಿಂದ ಕೊನೆಯದಾಗಿ ೭೨ ಮೇಳಕರ್ತರಾಗಗಳು ನಿರ್ಮಾಣಗೊಂಡು ಕರ್ಣಾಟಕ ಪದ್ಧತಿಯಲ್ಲಿ ಸುಸ್ಥಿರವಾದ ವ್ಯವಸ್ಥೆ ಏರ್ಪಟ್ಟಿತು.
ಉತ್ತರದಲ್ಲಿಯೂ ಇದೇ ಆದರ್ಶದಿಂದ ಮೇಳ ವರ್ಗೀಕರಣದ ಪ್ರಯತ್ನವು ನಡೆದಿತ್ತಾದರೂ ಅನ್ಯ ಸಂಪ್ರದಾಯದ ಪ್ರಭಾವದಿಂದ ವ್ಯವಸ್ಥೆಯಲ್ಲಿದ್ದ ಅಲ್ಲಿಯ ಲಕ್ಷ್ಯ ಮಾರ್ಗದಲ್ಲಿ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯದೆ ಅದು ಸಾರ್ವತ್ರಿಕವಾದ ಯಶಸ್ಸನ್ನು ಪಡೆಯಲಿಲ್ಲ. ರಾಗಭೇದ ಪರಿಗಣನೆಯಲ್ಲಿ ಸ್ವರ ವಿನಿಯೋಗದ ಭಿನ್ನ ವೈಶಿಷ್ಟ್ಯಕ್ಕೇ ರೂಢಿಯಲ್ಲಿ ಹೆಚ್ಚಿನ ಪ್ರಾಧಾನ್ಯವಿದ್ದುದೂ ಇದಕ್ಕೆ ಕಾರಣವಾಯಿತೆಂದು ತೋರುವುದು. ಕೊನೆಗಾದರೂ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಸರ್ವಾದರಣೀಯವಾಗುವಂತೆ ರೂಢಿಗೆ ತಂದವರು ದಿ| ಭಾತ್‌ಖಂಡೆಯವರೇ, ರೂಢಮೂಲವಾಗಿದ್ದ