ಎರಡು ವಿಮರ್ಶೆಗಳು
(ಪುಸ್ತಕಲೋಕ : ಮಾನವಿಕ ಕರ್ನಾಟಕ)
ರಾಗದರ್ಶನ : ಲೇಖಕರು : ಪ್ರೊ| ಎ. ಎಮ್. ಪುರಂದರೆ, ಪ್ರಕಾಶಕರು ಪಠ್ಯಪುಸ್ತಕ ನಿರ್ದೇಶನಾಲಯ, ಕರ್ಣಾಟಕ ವಿಶ್ವವಿದ್ಯಾಲಯ, ಧಾರವಾಡ, ಪುಟ ೧೦ + ೩೬೦, ಬೆಲೆ
ಹಿಂದೂಸ್ಥಾನಿ ಸಂಗೀತಪದ್ಧತಿಯ ರಾಗ ಲಕ್ಷಣಗಳನ್ನು ನಿರೂಪಿಸುವ ಈ ಗ್ರಂಥವು
ಸ್ವಾಗತಾರ್ಹವಾಗಿದೆ. ರಾಗ ರಚನೆಯೇ ನಮ್ಮ ಸಂಗೀತದ ವೈಶಿಷ್ಟ್ಯವಾಗಿರುತ್ತಾ ರಾಗ ಭೇದಗಳನ್ನು ಲಕ್ಷ್ಯಾನುರೋಧವಾಗಿ ವಿವರಿಸುವ ಲಕ್ಷಣಗ್ರಂಥಗಳು ಕನ್ನಡದಲ್ಲಿಲ್ಲವೆಂಬ ಕೊರತೆಯನ್ನು ಈ ಗ್ರಂಥವು ಒಂದಂಶ ತುಂಬುತ್ತದೆ ಎಂಬುದು ಸಮಾಧಾನಕರವೂ
ಅಭಿಮಾನಾಸ್ಪದವೂ ಆಗಿದೆ. ಸಂಸ್ಕೃತಾದಿ ಶಾಸ್ತ್ರಗ್ರಂಥಗಳಲ್ಲಿ ಮತಭೇದಗಳ ಗೊಂದಲದಿಂದ ಜಟಿಲವಾಗಿರುವ ಈ ರಾಗವಿಸ್ತರವನ್ನು ಸಾಮಾನ್ಯ ವಿದ್ಯಾರ್ಥಿಗಳಿಗೂ ಸುಲಭ ಗ್ರಾಹ್ಯವಾಗುವಂತೆ ಸರಳವಾಗಿಯೂ ಸುಬೋಧವಾಗಿಯೂ ಕನ್ನಡಕ್ಕೆ ತಂದಿರುವ ಈ ಗ್ರಂಥಕರ್ತರೂ, ಪಠ್ಯಪುಸ್ತಕಪ್ರಣಾಲಿಕೆಯಲ್ಲಿ ಪ್ರಕಾಶಕ್ಕೆ ತಂದಿರುವ ಕರ್ಣಾಟಕ ವಿಶ್ವವಿದ್ಯಾಲಯದ ಪ್ರನೇತೃಗಳೂ, ಕನ್ನಡಿಗರ ಅಭಿನಂದನೆಗೆ ಅರ್ಹರು. ಇದು ಪ್ರೌಢ
ವ್ಯಾಸಂಗದ 'ಪೂರಕ' ಗ್ರಂಥವೂ ಹೌದು. ಶಿಷ್ಯೋಪದೇಶ ಸೌಲಭ್ಯವುಳ್ಳ ಶಿಕ್ಷಣ ಗ್ರಂಥವೂ ಹೌದು.
ಸಂಗೀತವು ಓದಿ ಕಲಿಯುವ ವಿದ್ಯೆಯಲ್ಲ. ಲಕ್ಷಣಗಳನ್ನು ಎಷ್ಟೇ ವಿಸ್ತಾರವಾಗಿ ಬರೆದರೂ ಅದರ ಪ್ರಾಯೋಗಿಕ ಜ್ಞಾನವು ಗುರುಮುಖದಿಂದಲೇ ಪ್ರಾಪ್ತವಾಗಬೇಕು.ಆದುದರಿಂದ ಇಂಥ ಗ್ರಂಥಗಳಲ್ಲಿ ಲಕ್ಷಣಗಳು ಸಂಕ್ಷಿಪ್ತವಾಗಿದ್ದರೆ ದೋಷವಲ್ಲ,
ಮುಖ್ಯಾಂಶಗಳು ಬಿಟ್ಟು ಹೋಗಬಾರದೆಂಬುದೇ ಮುಖ್ಯ. ಆ ಮಟ್ಟಿಗೆ, ಲಕ್ಷ್ಯ ಲಕ್ಷಣಗಳೆರಡರಲ್ಲಿಯೂ ಪರಿಣತರಾದ ಪ್ರೊ. ಪುರಂದರೆಯವರು ಅತ್ಯಂತ ದಕ್ಷತೆಯಿಂದ ಈ ಸಂಗ್ರಹಕಾರ್ಯವನ್ನು ನಿರ್ವಹಿಸಿರುತ್ತಾರೆಂದು ಹೇಳಬೇಕು.
ಕೀರ್ತಿಶೇಷ ಪಂಡಿತ ಭಾತ್‌ಖಂಡೆಯವರು ಹಿಂದೂಸ್ಥಾನಿ ಸಂಗೀತ ಪದ್ಧತಿಯ ಆಧುನಿಕ ಲಕ್ಷ್ಯಮಾರ್ಗಕ್ಕೆ ಆಚಾರ್ಯಪುರುಷರೆಂಬುದು ಸರ್ವಶ್ರುತ, ಅವರು ಸಂಸ್ಕೃತ
ದಲ್ಲಿ ರಚಿಸಿದ (ಚತುರ ಪಂಡಿತಾಭಿಧಾನದಲ್ಲಿ) 'ಲಕ್ಷ್ಯ ಸಂಗೀತ' ಮತ್ತು ಮರಾಠಿಯಲ್ಲಿ ವಿಸ್ತಾರವಾಗಿ ರಚಿಸಿದ, ನಾಲ್ಕು ಭಾಗಗಳುಳ್ಳ 'ಹಿಂದೂಸ್ಥಾನೀ ಸಂಗೀತ ಪದ್ಧತಿ' ಎಂಬ, ಗುರುಶಿಷ್ಯರ ಪ್ರಶೋತ್ತರ ಸಂಭಾಷಣಾ ರೂಪದಲ್ಲಿರುವ ವಿಮರ್ಶಾತ್ಮಕ ಶಾಸ್ತ್ರಗ್ರಂಥಗಳನ್ನು (ಈ ಗ್ರಂಥದ ನಾಲ್ಕು ಭಾಗಗಳೂ ಹಿಂದಿಯಲ್ಲಿ ಭಾಷಾಂತರವಾಗಿವೆ) ಆಧರಿಸಿ ಪ್ರಸ್ತುತ ಗ್ರಂಥವು ರಚಿಸಲ್ಪಟ್ಟಿರುವುದು. ರಾಗಲಕ್ಷಣದಲ್ಲಿ ಆಮೇಲೆ ರೂಢಿಗೆ
ಬಂದಿರುವ ಕೆಲವೊಂದು ವ್ಯತ್ಯಾಸಾಂಶಗಳನ್ನೂ ಮತಾಂತರಗಳನ್ನೂ ಗ್ರಂಥಕರ್ತರು ಅಲ್ಲಲ್ಲಿ ವಿವರಿಸಿರುವುದರಿಂದ ಇಂದಿನ ಪ್ರಚಲಿತ ರಾಗಸ್ವರೂಪಗಳಿಗೆ ಈ ಸಂಕ್ಷಿಪ್ತ ಗ್ರಂಥವು ಕೈಗನ್ನಡಿಯಂತಿದೆ. ದಿ| ಪಂಡಿತ ಭಾತ್‌ಖಂಡೆಯವರ ರಾಗ ವರ್ಗೀಕರಣದಂತೆ, ಕಲ್ಯಾಣ, ಬಿಲಾವಲ, ಖಮಾಚ್, ಭೈರವ, ಪೂರ್ವೀ, ಮಾರವಾ, ಕಾಫೀ, ಅಸಾವರಿ, ಭೈರವಿ, ತೋಡಿ ಎಂಬ ಹತ್ತು ಮೇಳರಾಗಗಳೂ (ಥಾಟ್) ಇವುಗಳ ಜನ್ಮ ಶ್ರೇಣಿಯಲ್ಲಿ