ಈ ಪುಟವನ್ನು ಪ್ರಕಟಿಸಲಾಗಿದೆ

ಕೀರ್ತಿಶೇಷ ಶ್ರೀ ಕುಕ್ಕಿಲ ಕೃಷ್ಣ ಭಟ್ಟರು

ಸೇಡಿಯಾಪು ಕೃಷ್ಣ ಭಟ್ಟ

ಶ್ರೀ ಕುಕ್ಕಿಲ ಕೃಷ್ಣ ಭಟ್ಟರು ನನ್ನ ಸೋದರ ಮಾವನ ಮಗ, ಅವರು ನನಗಿಂತ ಒಂಬತ್ತು ವರ್ಷಕ್ಕೆ ಕಿರಿಯರು. ಅವರು ದಿವಂಗತರಾದ ಮೇಲೆ ಅವರ ಕುರಿತು ನಾಲ್ಕು ಮಾತು ಬರೆಯುವ ಯೋಗವು ನನಗೆ ಬಂದುದು ನನ್ನ ದೌರ್ಭಾಗ್ಯ. ಅವರಿಗೂ ನನಗೂ ಒಂದೇ ಹೆಸರು. ನನ್ನ ಮಾತಾಮಹನೇ ಅವರ ಪಿತಾಮಹ. ನಾನು ನನ್ನ ತಾಯಿಗೆ ದ್ವಿತೀಯ ಪುತ್ರ. ಅವರು ಅವರ ತಂದೆಗೆ (ಏಕಮಾತ್ರ) ಪ್ರಥಮ ಪುತ್ರ. ನಮ್ಮಲ್ಲಿ ನಡೆದು ಬಂದ ಸಂಪ್ರದಾಯದಂತೆ ಎರಡನೆಯ ಮಗನಿಗೆ ಮಾತಾಮಹನ ಹೆಸರು ಮೊದಲನೆಯ ಮಗನಿಗೆ ಪಿತಾಮಹನ ಹೆಸರು. ನಮ್ಮಿಬ್ಬರ ಹೆಸರು ಒಂದೇ ಆದುದಕ್ಕೆ ಇದುವೇ ಕಾರಣ.

ಅವರನ್ನು ಅವರ ಹುಟ್ಟಿನಿಂದಲೇ ನಾನು ಬಲ್ಲೆ. ಅವರು ಜನಿಸಿದ ಕಾಲದಲ್ಲಿ ನಾನು ಅವರ ಮನೆಯಲ್ಲಿಯೇ ಇದ್ದ. ಬಾಲ್ಯದಲ್ಲಿ ಅನಾರೋಗ್ಯದಿಂದಲೂ, ತಾರುಣ್ಯದಲ್ಲಿ ಗೃಹಕಲಹದಿಂದಲೂ, ಪ್ರೌಢಾವಸ್ಥೆಯಲ್ಲಿ ಇತರರು ಉಂಟುಮಾಡಿದ ಭೂಸಂಬಂಧವಾದ ದುರ್ವ್ಯವಹಾರಗಳಿಂದಲೂ ನಾನಾ ಕಷ್ಟಗಳಿಗೆ ಅವರು ಗುರಿಯಾದವರಾದರೂ ದೈವಕೃಪೆ ಯಿಂದ ಹಾಗೂ ತಮ್ಮ ಅಸಾಧಾರಣವಾದ ಸಾಹಸಬಲದಿಂದ ಆ ಪೀಡಾಪರಂಪರೆ ಗಳನ್ನೆಲ್ಲ ಮೆಟ್ಟಿ ಗೆದ್ದು ಮರದ ಭಾಗ್ಯವು ಅವರದು. ಅವರ ಜೀವನಯಾತ್ರೆಯನ್ನು ಒಂದೇ ಮಾತಿನಲ್ಲಿ ವರ್ಣಿಸುವುದಾದರೆ ಅದೊಂದು ನಿರಂತರವಾದ ದಂಡಯಾತ್ರೆ ಎನ್ನಬಹುದು. ಅಥವಾ ಅದೊಂದು ವಿಜಯಯಾತ್ರೆಯೆಂದರೂ ಅತ್ಯುಕ್ತಿಯಾಗಲಾರದು. ಎರಡು ದಿನಗಳ ನಿರಂತರ ಪ್ರಸವವೇದನೆಯಿಂದ ಅವರ ಜನ್ಮವಾಯಿತು. ಆದರೆ ಅವರ ಮರಣವು ನಿರಾಯಾಸವಾಗಿ ಕ್ಷಣಾರ್ಧದಲ್ಲಿ ಘಟಿಸಿತು.

ಅವರ ಪ್ರಾಥಮಿಕ ವಿದ್ಯಾಭ್ಯಾಸವು ಅವರ ಮನೆಯ ಸಮೀಪದಲ್ಲೇ ಇದ್ದ ಸಣ್ಣ ಶಾಲೆಯೊಂದರಲ್ಲಿ ಒಂದೆರಡು ವರ್ಷ ನಡೆಯಿತು. ಅಷ್ಟರಲ್ಲಿ ಆ ಶಾಲೆಯೇ ಇಲ್ಲವೆಂದಾದುದರಿಂದ ಅವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ತಾಯ ತವರು ಮನೆಯನ್ನು ಸೇರಿದರು. ಕನ್ನಡ ಸಾಹಿತ್ಯದ ಪ್ರೌಢ ವಿದ್ವಾಂಸರೂ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಅನುಪಮರೆಂದು ಪ್ರಸಿದ್ಧರಾಗಿದ್ದವರೂ ಆದ ದಿವಂಗತ ಬಡೆಕ್ಕಿಲ ವೆಂಕಟರಮಣ ಭಟ್ಟರು (ಇವರು ಕೆಲವು ವರ್ಷಗಳ ಕಾಲ ಮಂಗಳೂರಲ್ಲಿದ್ದು ಅಡಿಕೆ ಸಾಹುಕಾರಿಕೆ ಮಾಡುತ್ತಿದ್ದುದರಿಂದ ಇವರು ಸಾಹುಕಾರ ವೆಂಕಟರಮಣ ಭಟ್ಟರು ಎಂಬ ಹೆಸರಲ್ಲಿಯೇ ಪ್ರಸಿದ್ಧರಾಗಿದ್ದರು) ಇವರ ಸೋದರಮಾವ. ಇವರ ಪಿತಾಮಹ, ಎಂದರೆ ನನ್ನ ಮಾತಾಮಹ, ಕುಕ್ಕಿಲ ಅಪ್ಪಯ್ಯ ಯಾನೆ ಕೃಷ್ಣ ಭಟ್ಟರೂ ಪುರಾಣ ಸಾಹಿತ್ಯ ಪ್ರಿಯರಾಗಿದ್ದು ರಾಮಾಯಣ, ಭಾಗವತ, ಆದಿತ್ಯ ಪುರಾಣ, ಅಧ್ಯಾತ್ಮ ರಾಮಾಯಣ ಮುಂತಾದ ಗ್ರಂಥಗಳನ್ನು ಪಠಿಸಿದವರು. ಮಾತ್ರವಲ್ಲ, ಅವುಗಳನ್ನು ಓಲೆಯ ಗರಿಯ ಪುಸ್ತಕಗಳಲ್ಲಿ ಪ್ರತಿಮಾಡಿಕೊಂಡವರೂ ಆಗಿದ್ದರು. ನಾನು ಎಳೆಯ ವಯಸ್ಸಿನಲ್ಲಿಯೇ ಪಿತೃವಿಯೋಗವನ್ನು ಹೊಂದಿದವನಾಗಿ ನಾಲ್ಕಾರು ವರ್ಷ ಅವರ ಮನೆಯಲ್ಲಿಯೇ