ಈ ಪುಟವನ್ನು ಪ್ರಕಟಿಸಲಾಗಿದೆ
ಕೀರ್ತಿಶೇಷ ಶ್ರೀ ಕುಕ್ಕಿಲ ಕೃಷ್ಣ ಭಟ್ಟರು

ಸಂಸ್ಕೃತದಲ್ಲಿರುವ ಅನೇಕ ಸಂಗೀತ ಶಾಸ್ತ್ರ ಗ್ರಂಥಗಳ ಅಧ್ಯಯನವನ್ನೂ ಮಾಡಿದರು. ಹೀಗೆ ಯಾವುದೊಂದು ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿದವರಾಗಿರದಿದ್ದರೂ ಅನೇಕ ವಿದ್ಯೆಗಳನ್ನು ಸಾಧಿಸಿ ಬಹುಶ್ರುತರಾದ ಘನವಿದ್ವಾಂಸರೆನಿಸಿಕೊಂಡರು.
ಕೃಷ್ಣ ಭಟ್ಟರಿಗೆ ಅವರ ತಂದೆಯ ಅಚಾತುರ್ಯದ ಫಲವಾಗಿ ಬಂದ ಬವಣೆ ಗಳನ್ನೂ, ಕೋರ್ಟು ಕಛೇರಿಗಳ ಕಟ್ಟೆಯನ್ನು ಹತ್ತಿ ಅವರು ಪಟ್ಟ ಕಷ್ಟಗಳನ್ನೂ, ಅವರ ಕುಟು೦ಬದ ಸ್ಥಿತಿಗತಿವಿಶೇಷಗಳನ್ನೂ ವಿವರಿಸುವುದರಿಂದ ವಾಚಕರಿಗೆ ಯಾವ ಪ್ರಯೋಜನವೂ ಆಗಲಾರದೆಂಬುದರಿಂದ ಅವುಗಳನ್ನೆಲ್ಲಾ ಇಲ್ಲಿ ತಿಳಿಸದೆ ಅವರು ಮಾಡಿದ ಸಾಹಿತ್ಯ ಸೇವೆಯ ಸ್ಥೂಲ ಪರಿಚಯವನ್ನು ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಕೊಡುವ ಪ್ರಯತ್ನ ಮಾಡುತ್ತೇನೆ.
ಅವರ ಲೇಖನಕಾರ್ಯಗಳ ನಿಜವಾದ ಆರಂಭವು ಯಕ್ಷಗಾನದ ಕುರಿತು ಅವರು ಮಾಡಿದ್ದ ಪರಿಶ್ರಮದ ಫಲವಾಗಿಯೇ ಆಯಿತೆಂದರೆ ಬಹುಶಃ ಅದು ತಪ್ಪಾಗಲಾರದು. (ಮಂಗಳೂರಿನಲ್ಲಿ ನನ್ನೊಡನಿದ್ದ ಅವರು ಸ್ವಗೃಹಕ್ಕೆ ತೆರಳಿದ ಮೇಲೆ ಒಂದೆರಡು ವರ್ಷಗಳ ಅನಂತರ ಕನ್ನಡ ಸಾಹಿತ್ಯದ ಕುರಿತಾಗಿ ಒಂದು ಲೇಖನವನ್ನು ಮಾತ್ರ ಬರೆದದ್ದುಂಟು; ಅದು ಧಾರವಾಡದ 'ಜಯಕರ್ಣಾಟಕ' ಮಾಸಪತ್ರಿಕೆಯಲ್ಲಿ ಪ್ರಕಟ ವಾಗಿತ್ತು. ಅವರು ಈ ಕಾರ್ಯಕ್ಕೆ ತೊಡಗಿದ ಕಾಲದಲ್ಲಿ ಶ್ರೀಮಾನ್ ಕೋಟ ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಎಂಬ ಗ್ರಂಥವು ಪ್ರಕಟವಾಗಿತ್ತು. ಕಾರಂತರ ಆ ಗ್ರಂಥವು ಹೊರಬರುವುದಕ್ಕೆ ಮೊದಲೇ ಕೀರ್ತಿಶೇಷ ಪಂಡಿತ ಮುಳಿಯ ತಿಮ್ಮಪ್ಪಯ್ಯ ನವರ 'ಪಾರ್ತಿಸುಬ್ಬ' ಎಂಬ ಗ್ರಂಥವು ಪ್ರಕಾಶಿತವಾಗಿದ್ದು ಅದರಲ್ಲಿ ಪ್ರತಿಪಾದಿತವಾಗಿದ್ದ `ಎಕ್ಕಲಗಾಣ' ಎಂದರೆ 'ಯಕ್ಷಗಾನ' ಎಂಬ ಅಭಿಪ್ರಾಯವನ್ನೇ ಕಾರಂತರೂ ತಮ್ಮ ಪುಸ್ತಕದಲ್ಲಿ ಎತ್ತಿ ಹಿಡಿದರು. ಖ್ಯಾತನಾಮರಾದ ಈ ಇಬ್ಬರು ಮಹನೀಯರ ಬರವಣಿಗೆಯ ಫಲವಾಗಿ, ಹಳೆಗನ್ನಡ ಸಾಹಿತ್ಯದಲ್ಲಿ ಕಂಡುಬರುವ 'ಎಕ್ಕಲಗಾಣ' ಎಂದರೆ ಯಕ್ಷಗಾನವೇ ಆಗಿತ್ತೆಂದೂ ಅತಿ ಪುರಾತನ ಕಾಲದಲ್ಲಿಯೇ ಕನ್ನಡ ನಾಡಿನಲ್ಲಿ ಯಕ್ಷಗಾನ ಕಲೆ ಹುಟ್ಟಿತೆಂದೂ ಕನ್ನಡಿಗರೆಲ್ಲ ಸಾಮಾನ್ಯವಾಗಿ ನಂಬುವಂತಾಯಿತು. ಆದರೆ ಸಂಸ್ಕೃತ ದಲ್ಲಿರುವ ಸಂಗೀತಶಾಸ್ತ್ರ ಗ್ರಂಥಗಳ ಪರಿಚಯವು ಚೆನ್ನಾಗಿದ್ದ ಕೃಷ್ಣ ಭಟ್ಟರಿಗೆ 'ಎಕ್ಕಲಗಾಣ' ಎಂದರೆ 'ಯಕ್ಷಗಾನ'ವೆಂಬರ್ಥವಲ್ಲವೆಂದು ತಿಳಿದಿದ್ದುದರಿಂದ ಶ್ರೀಮಾನ್ ಕಾರಂತರ ಅಭಿಪ್ರಾಯಗಳನ್ನು ಖಂಡಿಸುವ ಒಂದು ಲೇಖನವನ್ನು ಅವರು ಬರೆದರು. ಅದರಲ್ಲಿ 'ಎಕ್ಕಲಗಾಣ' ಎಂಬುದು ಸಂಸ್ಕೃತದ 'ಏಕಲಗಾಯನ' ಎಂಬ ಸಂಜ್ಞೆಯ ತದ್ಭವವೆಂದೂ (ಗಾಯನ' ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ 'ಗಾಯಕ' ಎಂಬ ಅರ್ಥವೂ ಇದೆ) ಎಂದರೆ 'ವಾದ್ಯಾದಿಗಳ ಸಹಾಯವಿಲ್ಲದೆ ಒಂಟಿಯಾಗಿ ಹಾಡುವವನು' ಎಂಬುದೇ ನಿಜವಾದ ಅರ್ಥವೆಂದೂ ಶಾರ್ಙ್ಗದೇವನ 'ಸಂಗೀತ ರತ್ನಾಕರ'ದ ಆಧಾರದಿಂದ ಪ್ರತಿಪಾದಿಸಿದರು. (ಗಾಯಕರಲ್ಲಿ 'ಏಕಲಗಾಯನ', 'ಯಮಲಗಾಯನ', 'ವೃಂದಗಾಯನ' ಎಂಬ ಮೂರು ವರ್ಗಗಳನ್ನು ಶಾರ್ಙ್ಗದೇವನು ತನ್ನ ಗ್ರಂಥದಲ್ಲಿ ನಿರೂಪಿಸಿದ್ದಾನೆ. ಪಂಡಿತ ತಿಮ್ಮಪ್ಪಯ್ಯನವರು ಉದಾಹರಿಸಿದ 'ಚಂದ್ರಪ್ರಭ ಪುರಾಣ'ದ ಪದ್ಯದಲ್ಲಿಯೂ 'ಎಕ್ಕಲಗಾಣನೊರ್ವನಂ' ಎಂದೇ ಇದ್ದು ಅಲ್ಲಿ ಅದು 'ಗಾಯಕ'ನೆಂಬ ಅರ್ಥವನ್ನೇ ಕೊಡುತ್ತದೆ ಹೊರತು ಅದೊಂದು ಬಗೆಯ ಹಾಡುಗಾರಿಕೆ ಎಂಬರ್ಥವನ್ನು ಕೊಡಲಾರ ದೆಂಬುದು ಸುಸ್ಪಷ್ಟ, ಗಾಯಕ ಎಂಬರ್ಥದಲ್ಲಿ 'ಗಾಣ' ಎಂಬ ಪ್ರಯೋಗವು ಹಳೆಗನ್ನಡದ ಬೇರೆ ಗ್ರಂಥಗಳಲ್ಲಿಯೂ ಕಂಡುಬರುತ್ತದೆ. ಉದಾ: 'ರಸಮೊಸರ್ವನ್ನೆಗಂ ತಗುಳೆ