ಈ ಪುಟವನ್ನು ಪ್ರಕಟಿಸಲಾಗಿದೆ

ಒಂದು ಮಹಾಭಾರತೀಯ ವ್ಯಕ್ತಿತ್ವ

ಮುಳಿಯ ಮಹಾಬಲ ಭಟ್ಟ

ಹಲವಾರು ವರ್ಷಗಳ ಹಿಂದೆ ೧೯೫೪ರಲ್ಲೊ '೫೫ರಲ್ಲೋ ಇರಬೇಕು. ನಾನು ಬೆಳಗಾವಿಯ ರಾಜಾ ಲಖಮಗೌಡಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ಒಂದು ದಿನ ಸರದಾರ ವಲ್ಲಭಬಾಯಿ ಪಠೇಲರ ಭಾವಚಿತ್ರವನ್ನು ಅನಾವರಣ ಮಾಡುವ ಕಾರ್ಯಕ್ರಮ ನಡೆಯಿತು. ಆಗ ಕೇಂದ್ರ ಸರಕಾರದಲ್ಲಿ ಪಂಡಿತ ನೆಹರೂರವರ ಸಂಪುಟ ದಲ್ಲಿ ಸಚಿವರಾಗಿದ್ದ ಶ್ರೀ ದ. ಪ. ಕರಮರಕರರು ಭಾವಚಿತ್ರ ಅನಾವರಣಗೊಳಿಸಿದರು. ಅವರು ಅದೇ ಕಾಲೇಜಿನಲ್ಲಿ ಮೊದಲು ಪ್ರಾಧ್ಯಾಪಕರೂ ಆಗಿದ್ದರು. ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡುತ್ತ ಶ್ರೀ ಕರಮರಕರರು ಸರದಾರ ಪಟೇಲರದು ಒಂದು 'ಮಹಾಭಾರತೀಯ' (Mahabharathan character) ಎಂದು ಬಣ್ಣಿಸಿದ್ದರು. ಎಂದರೆ ಮಹಾಭಾರತದ ಭೀಷ್ಮ, ಭೀಮ, ಅರ್ಜುನರಂತಹ ಘನವಾದ, ಎಂದೆಂದಿಗೂ ನಮ್ಮ ಮನಃಪಟಲದಿಂದ ಅಳಿಸಲಾರದ ಒಂದು ವ್ಯಕ್ತಿತ್ವ ಪಟೇಲರದು ಎಂದು ಮುಂತಾಗಿ ವಿವರಿಸಿದರು. ಕುಕ್ಕಿಲ ಕೃಷ್ಣ ಭಟ್ಟರನ್ನು ಕಂಡಾಗ, ನೆನೆದಾಗ ಕರಮರಕರರ ಈ ಮಾತು ನೆನಪಿಗೆ ಬರುತ್ತಿತ್ತು. ಕುಕ್ಕಿಲದವರದು ನಿಜವಾದ ಅರ್ಥದಲ್ಲಿ 'ಮಹಾಭಾರತೀಯ' ವ್ಯಕ್ತಿತ್ವ.
ಸುಮಾರು ೧೯೫೧ ಅಥವಾ ೧೯೫೨ರಲ್ಲಿ ಅವರ ಊರಾದ ಕುಕ್ಕಿಲದ ಸಮೀಪದ ಕೋಡಪದವು ಎಂಬಲ್ಲಿ ಜರಗಿದ ಒಂದು ತಾಳಮದ್ದಳೆಯಲ್ಲಿ ಕುಕ್ಕಿಲ ಕೃಷ್ಣರು ಭಾಗವತರಾಗಿ ಹಾಡಿದ್ದರು. ಇತರ ಅನೇಕ ಭಾಗವತರ ಹಾಡುಗಾರಿಕೆಯಲ್ಲಿ ಕಂಡುಬರದ ಉಚ್ಚಾರಸ್ಪಷ್ಟತೆ ಮತ್ತು ಅದರ ಸಾಹಿತ್ಯದ ಕಡೆಗೆ ವಿಶೇಷ ಗಮನ ಕೊಡುತ್ತಿದ್ದುದು ನನ್ನ ಅರಿವಿಗೆ ಬಂತು. ನನ್ನ ಚಿಕ್ಕಂದಿನಲ್ಲಿ ನಮ್ಮ ನೆರೆಮನೆಯಲ್ಲೇ ಇದ್ದ ಸೇಡಿಯಾಪು ಕೃಷ್ಣ ಭಟ್ಟರಲ್ಲಿಗೆ ಅವರು ಆಗಾಗ ಬರುವುದಿತ್ತು. ಹೀಗೆ ಬಂದಾಗಲೆಲ್ಲ ಅವರು ಶಾಸ್ತ್ರೀಯ ಸಂಗೀತವನ್ನು ಹಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರು ಯಕ್ಷಗಾನದ ಭಾಗವತಿಕೆ ಯನ್ನೂ ಮಾಡುವುದನ್ನು ನೋಡಿ ಅಚ್ಚರಿಯಾಯಿತು. ಆ ಮೇಲೆ ಹಲವು ವರ್ಷಗಳ ಅನಂತರ, ಎಂದರೆ ೧೯೫೮ರ ಅನಂತರ ನನಗೆ ನಿಕಟವಾದ ಪರಿಚಯ ಉಂಟಾದಾಗ ಕ್ರಮೇಣ ಅವರ ವಿದ್ವತ್ತು, ಸಂಗೀತ, ನಾಟ್ಯಶಾಸ್ತ್ರ, ಛಂದಃಶಾಸ್ತ್ರ ಇತ್ಯಾದಿಗಳನ್ನು ಒಳಕೊಂಡುದು ಕಂಡುಬಂತು. ಇಷ್ಟು ವಿಸ್ತಾರವಾದ ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿ ದರೂ ಅವರ ಪಾಂಡಿತ್ಯವೆಂಬುದು ಕೇವಲ 'ಪಲ್ಲವಗ್ರಾಹಿ ಪಾಂಡಿತ್ಯ'ವಾಗಿರದೆ (ಅನೇಕ ವಿಷಯಗಳನ್ನು ಅಧ್ಯಯನ ಮಾಡುವವರಲ್ಲಿ ಕೇವಲ ಮೇಲು ಮೇಲಿನ ಪಾಂಡಿತ್ಯ ಇರುವುದೂ ಇದೆ.) ತಲಸ್ಪರ್ಶಿಯಾದ 'ಪ್ರಾಚೀನ ಪಾಂಡಿತ್ಯ'ವಾಗಿತ್ತು ಎಂಬುದು ಗಮನಿಸಬೇಕಾದ ಅಂಶ.
ಕುಕ್ಕಿಲ ಕೃಷ್ಣ ಭಟ್ಟರಿಗೆ ಶಾಲೆ ಕಾಲೇಜುಗಳ ವಿದ್ಯಾಭ್ಯಾಸವಾಗಲಿ, ಪದವಿಗಳಾಗಲಿ ಇರಲಿಲ್ಲ. ಮಾತ್ರವಲ್ಲ, ಯಾವನೇ ಗುರುವಿನ ಅನುಗ್ರಹದಿಂದ ಗಳಿಸಿದ ಪಾಂಡಿತ್ಯವೂ ಅವರದಲ್ಲ. ಈ ಕಾರಣದಿಂದಲೋ ಏನೋ, ಅವರ ಅಧ್ಯಯನ ಪ್ರಕ್ರಿಯೆಯಲ್ಲಿ