ಈ ಪುಟವನ್ನು ಪ್ರಕಟಿಸಲಾಗಿದೆ
ನಾನು ಕಂಡ ಕುಕ್ಕಿಲ ಕೃಷ್ಣ ಭಟ್ಟರು


ಸಂಪಾದನೆಯ ಕೆಲಸಕ್ಕೆ ಕೈ ಹಚ್ಚಿದರು. ಕೇವಲ ಒಣಚರ್ಚೆಯನ್ನು ಬದಿಗಿರಿಸಿ ಕೆಲಸವನ್ನು ಸಾಧಿಸಿ ತೋರಿಸುವುದು ಮಹತ್ತ್ವದ್ದೆಂದು ಮನಗಂಡು ಆ ಕೆಲಸವನ್ನು ನಿಷ್ಠೆಯಿಂದ ಮಾಡಿದರು. ಯಕ್ಷಗಾನ ಅಧ್ಯಯನವನ್ನು ಹಂತ ಹಂತವಾಗಿ ಶೈಕ್ಷಣಿಕ ದೃಷ್ಟಿಯಿಂದ (ಕಲಾ ಪ್ರದರ್ಶನ-ರಂಗ ಪ್ರಯೋಗ ದೃಷ್ಟಿಯಿಂದಲ್ಲ) ಗುರುತಿಸುವಾಗ 'ಪಾರ್ತಿಸುಬ್ಬನ ಯಕ್ಷಗಾನಗಳು' (೧೯೭೫) ಕೃತಿಯ ಪ್ರಕಾಶನವೂ ಒಂದು ಮುಖ್ಯ ಹಂತವಾಗುತ್ತದೆ. (ಮೊದಲನೆಯ ಹಂತ- ಪಾವಂಜೆ ಗುರುರಾಯರಿಂದ ಯಕ್ಷಗಾನ ಪ್ರಸಂಗಗಳ ಪ್ರಕಾಶನ ಎರಡನೆಯ ಹಂತ- ಮುಳಿಯ ತಿಮ್ಮಪ್ಪಯ್ಯನವರ 'ಪಾರ್ತಿಸುಬ್ಬ' ಪ್ರಕಟನೆ, ಮೂರನೆಯ ಹಂತ ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಪ್ರಕಟನೆ ನಾಲ್ಕನೆಯ ಹಂತ ಕುಕ್ಕಿಲ ಕೃಷ್ಣಭಟ್ಟರ 'ಪಾರ್ತಿಸುಬ್ಬನ ಯಕ್ಷಗಾನಗಳು' ಪ್ರಕಟನೆ ಐದನೆಯ ಹಂತ- ಪೊಳಲಿ ಶಾಸ್ತ್ರಿ ಸಂಸ್ಮರಣ ಗ್ರಂಥ 'ಯಕ್ಷಗಾನ ಮಕರಂದ'ದ ಪ್ರಕಟನೆ, ಆರನೆಯ ಹಂತ- ಎಂ. ಪ್ರಭಾಕರ ಜೋಶಿಯವರ 'ಯಕ್ಷಗಾನ ಪದ ಕೋಶ'ದ ಪ್ರಕಟನೆ. ಯಕ್ಷಗಾನಾಧ್ಯಯನ ಈಗ ಈ ಹಂತದಲ್ಲಿದೆ.)
ಸಂಶೋಧನೆಗೆ ದೇಶೀಯವೂ ಸ್ವತಂತ್ರವೂ ಆದ ಮಾರ್ಗವನ್ನು ನಿರ್ಮಿಸಿಕೊಂಡ ದಕ್ಷಿಣ ಕನ್ನಡದ ಹಿರಿಯ ವಿದ್ವಾಂಸರಲ್ಲಿ ಕುಕ್ಕಿಲ ಕೃಷ್ಣ ಭಟ್ಟರು ಒಬ್ಬರು. ದಿವಂಗತ ಗೋವಿಂದ ಪೈಗಳು, ದಿವಂಗತ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು, ಶ್ರೀ ಸೇಡಿಯಾಪು ಕೃಷ್ಣ ಭಟ್ಟರು- ಇವರೆಲ್ಲರೂ ತಮ್ಮ ಮುಂದೆ ಸಂಶೋಧನೆಯ ವಿಧಾನಗಳ ಮಾದರಿ ಯಾವುದೂ ಇಲ್ಲದಾಗ ಸಂಶೋಧನೆಗೆ ತೊಡಗಿ ಸ್ವತಂತ್ರ ಮಾರ್ಗದಲ್ಲಿ ನಡೆದವರು. ದೇಶೀಯ ಸಂಶೋಧನ ವಿಧಾನ (Indigenous Research Methodology) ವೊಂದನ್ನು ನಿರ್ಮಿಸಿಕೊಳ್ಳುವಲ್ಲಿ ಇವರೆಲ್ಲರ ಪರಿಶ್ರಮವಿದೆ. ಸಂಸ್ಕೃತದ ಹಿನ್ನಲೆ ಮತ್ತು ಪ್ರಾಚೀನ ಸಂಸ್ಕೃತ ಕನ್ನಡ ಕಾವ್ಯಗಳ ಗಂಭೀರ ಅಧ್ಯಯನ, ಶಾಸ್ತ್ರೀಯ ವಿಚಾರಗಳ ಆಳವಾದ ಪರಿಚಯ, ಇತರ ದೇಶಭಾಷೆಗಳ ಪರಿಚಯ, ಸ್ವತಂತ್ರ ಅಧ್ಯಯನದ ಮೂಲಕ ಇಂಗ್ಲಿಷಿನ ಗ್ರಂಥಗಳ ಪರಿಶೀಲನೆ, ವಿಮರ್ಶಾತ್ಮಕ ದೃಷ್ಟಿಕೋನ- ಈ ಮುಖ್ಯ ವಿಷಯಗಳ ಹಿನ್ನಲೆಯಿಂದ ಈ ಸಂಶೋಧನ ಪ್ರಜ್ಞೆಯ ಪಂಚಾಂಗ ರೂಪಿತವಾಗಿದೆ. ಮೇಲೆ ಹೇಳಲಾದ ಎಲ್ಲಾ ವಿದ್ವಾಂಸರು ತಮ್ಮದೇ ವಿಚಾರಮಾರ್ಗದಲ್ಲಿ ನಡೆದವರಾದರೂ ಅವರೆಲ್ಲರಿಗಿದ್ದ ಹಿನ್ನೆಲೆಯನ್ನು ಈ ಮೇಲಿನ ಅಂಶಗಳಲ್ಲಿ ಗುರುತಿಸ ಬಹುದು. ಕುಕ್ಕಿಲ ಕೃಷ್ಣ ಭಟ್ಟರಿಗೂ ಇದೇ ಹಿನ್ನೆಲೆ. ಕನ್ನಡ ವಿದ್ವತ್ತೆಯ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟು ದೊಡ್ಡದು.