ಈ ಪುಟವನ್ನು ಪ್ರಕಟಿಸಲಾಗಿದೆ

೩೮೮ / ಕುಕ್ಕಿಲ ಸಂಪುಟ

ಇತರತ್ರ ದುರ್ಲಭವಾದ ಸಂಶೋಧನ ವೈಖರಿ ಅವರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಛಂದಸ್ತತ್ವಾನ್ವೇಷಣೆ, ಯಕ್ಷಗಾನ ಸತ್ಯಾನ್ವೇಷಣೆ, ಸಂಗೀತ ಸತ್ಯಾನ್ವೇಷಣೆ- ಇವು ಅವರ ಗುರಿಗಳಾಗಿದ್ದುವು. ಪಾಣಿನಿ, ಪತಂಜಲಿ, ಪಿಂಗಳ, ಪಾರ್ತಿಸುಬ್ಬ, ಭರತ, ಮತಂಗ, ಅಭಿನವ ಗುಪ್ತ, ಶಾರ್ಙ್ಗದೇವಾದಿಗಳ ಕೃತಿ ಸಮುಚ್ಚಯವೆಂಬ ಮಹಾಸಾಗರದಲ್ಲಿ ಲೀಲಾಜಾಲವಾಗಿ ಈಜಾಡಿ, ತಳಕ್ಕಿಳಿದು ಅನರ್ಘವಾದ ಸಿದ್ದಾಂತ ರತ್ನಗಳನ್ನು ಶೋಧಿಸಿ ಜಿಜ್ಞಾಸುಗಳ ಮುಂದೆ ಕುಕ್ಕಿಲ ಕೃಷ್ಣ ಭಟ್ಟರು ಇರಿಸಿದ್ದಾರೆ. ಸಮಾಜದಿಂದ ಪಡೆದದ್ದ ಕ್ಕಿಂತ ಹೆಚ್ಚು ಸಮಾಜಕ್ಕೆ ನೀಡಿದ್ದಾರೆ.
ಶಾಸ್ತ್ರನಿಷ್ಠರೂ, ಪ್ರಾಚೀನ ಸಂಪ್ರದಾಯಪ್ರಿಯರೂ ಆಗಿದ್ದ ಕುಕ್ಕಿಲರಲ್ಲಿ ಇದ್ದ ಆಧುನಿಕ ಪುರೋಗಾಮಿ ದೃಷ್ಟಿಯು ಅಚ್ಚರಿಯನ್ನುಂಟುಮಾಡುತ್ತದೆ. ಈ ಕೆಳಗಿನ ಅವರ ಮಾತುಗಳನ್ನು ಗಮನಿಸಿರಿ- “ಸ್ವರಗಳು ಸ್ಥಾನಭ್ರಷ್ಟವಾದಲ್ಲಿ ಶ್ರುತಿವಿಭಾಗವನ್ನು ಸಾಧಿಸು ವುದು ಹೇಗೆಂಬ ವಿಚಾರವು ಅಂದಿನ ಕಾಲಕ್ಕೆ ದೊಡ್ಡ ಸಮಸ್ಯೆಯಾಗಿದ್ದರೂ ಇಂದಿನ ವಿಜ್ಞಾನಕ್ಕೆ ಇದೊಂದು ದುರ್ಗವಲ್ಲ. ವಿದ್ಯುಚ್ಛಾಲಿತ ಧ್ವನಿಮಾಪಕ ಯಂತ್ರಗಳ ಮೂಲಕ ಬೇಕಾದ ನಾದದ ಕಂಪನಗಳನ್ನೂ, ಇಷ್ಟಕಂಪನಗಳ ನಾದವನ್ನೂ ನಿರ್ಣಯವಾಗಿ ಪಡೆಯ ಬಹುದಾಗಿರುವುದರಿಂದ ಧ್ವನಿಭೇದಗಳ ಉಚ್ಚನೀಚ ಪ್ರಮಾಣವೆಂಬುದು ಇಂದು ಗಣಿತ ದಿಂದ ನಿರ್ಧರಿಸಲಿಕ್ಕೆ ಬರುವ ವಿಚಾರವಷ್ಟೆ? ಆ ಪ್ರಕಾರ ಶ್ರುತಿವಿಭಾಗವನ್ನು ಸಾಧಿಸಿ, ಶಾಕ್ತ ಸ್ವರಸ್ಥಾನಗಳನ್ನು ಕಂಡುಕೊಂಡು ಅಳಿದುಹೋದ ಪುರಾತನ ಗಾಂಧರ್ವ ಸಂಪ್ರದಾಯವನ್ನು ಪುನರುಜ್ಜಿವನಗೊಳಿಸುವ ಕಾರ್ಯ ಇಂದು ನಡೆಯಬೇಕು. ಆಧುನಿಕ ವಿಜ್ಞಾನವಂತರು ಈ ಕರ್ತವ್ಯದಲ್ಲಿ ಆಸಕ್ತಿ ವಹಿಸಬೇಕು. ನಮ್ಮ ಸಂಗೀತ ವಿದ್ವಾಂಸರಿಗೆ ಆ ಶುದ್ಧ ಸ್ವರಸ್ಥಾನಗಳನ್ನು ತೋರಿಸಿಕೊಡಬೇಕು. ಅದಕ್ಕೆ ತಕ್ಕುದಾದ ಮಟ್ಟು ಗಳನ್ನಿರಿಸಿದ ತಂತ್ರೀವಾದ್ಯಗಳನ್ನು ತಯಾರಿಸಬೇಕು. ಹೀಗೆ, ನಮ್ಮ ಕಳೆದುಹೋದ ಸ್ವರಸಂಪತ್ತನ್ನು ಉಳಿಸಬೇಕು, ಬಳಸಬೇಕು, ಪ್ರಪಂಚಕ್ಕೆ ತಿಳಿಸಬೇಕು. ಸತ್ಯಮೇವ ಜಯತೇ ನಾನೃತಂ (ಭಾರತೀಯ ಸಂಗೀತಶಾಸ್ತ್ರ - ಪುಟ ೮೭)
ಇದು ಕುಕ್ಕಿಲ ಕೃಷ್ಣ ಭಟ್ಟರ ಸಂದೇಶ. ನಾಡಿನ ಪುಣ್ಯದಿಂದ ಇಂಥವರು ಒಮ್ಮೊಮ್ಮೆ ಜನಿಸುತ್ತಾರೆ.