ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ದೃಶ್ಯ ಪ್ರಯೋಗದ ಶಾಸ್ತ್ರೀಯತೆ / ೩೯

ಮಧ್ಯಮ, ಶುದ್ಧ ಧೈವತ, ಕಾಕಲಿ ನಿಷಾದಗಳುಳ್ಳ ಸಪ್ತ ಸ್ವರಗಳ ಸಂಪೂರ್ಣ ರಾಗವಾಗಿಯೇ ಅದನ್ನು ಹಾಡುವುದಾಗಿದೆ. ವೆಂಕಟಮಖಿಯೂ ಈ ರಾಗದ ಲಕ್ಷಣವನ್ನು ಹೀಗೆಯೇ ಹೇಳಿರುತ್ತಾನೆ. ಅದು ತನ್ನ ಮೇಳಕರ್ತ ರಾಗಗಳಲ್ಲಿ ೨೧ನೆಯ ಕೀರವಾಣಿಗೆ ಸರಿಯಾದುದೆ೦ದಿದ್ದಾನೆ.

೨. ಯಕ್ಷಗಾನದ ರೂಢಿಯಲ್ಲಿ ಆನಂದ ಭೈರವಿ ರಾಗದಲ್ಲಿ ಅಂತರ ಕಾಕಲೀ ಸ್ವರಗಳ ಪ್ರಯೋಗವಿಲ್ಲ.

೩. ಸೌರಾಷ್ಟ್ರ ರಾಗದಲ್ಲಿ ಚತುಃಶ್ರುತಿ ಧೈವತದ ಪ್ರಯೋಗವಿಲ್ಲ.

೪. ಪಂಚಮವರ್ಜವಾದ ತೋಡಿ ರಾಗವೇ ನಮ್ಮ ಯಕ್ಷಗಾನದ ರೂಢಿಯಲ್ಲಿರುವುದು.

೫. ಈಗ ಸಲಿಗೀತದ ರೂಢಿಯಲ್ಲಿಲ್ಲದ 'ಮಾರವಿ' ಎಂಬ ರಾಗವು ಯಕ್ಷಗಾನದಲ್ಲಿ ಪ್ರಸಿದ್ಧವಾಗಿದೆ. ವೀರ ರೌದ್ರರಸಸಂದರ್ಭದ ಪದ್ಯಗಳಿಗೆ ಹೆಚ್ಚಾಗಿ ಈ ರಾಗದ ನಿರ್ದೇಶನವಿದೆ. ಪುಂಡಲೀಕ ವಿಠಲನು ತನ್ನ 'ರಾಗಮಾಲಾ' ಮತ್ತು 'ನರ್ತನ ನಿರ್ಣಯ' ಗ್ರಂಥಗಳಲ್ಲಿ ಅದರ ಲಕ್ಷಣವನ್ನು ಹೀಗೆ ಹೇಳಿರುತ್ತಾನೆ-

ಮಾಲವಗೌಡರಾಗದಜನ್ಯ-

ಸಾಂಶಗ್ರಹಾಂತಾ ರಿಧ ವರ್ಜಿತಾ ಚ ನಿರೂಪ್ಯತೇ ಮಾರವಿಕಾ
ಚ೦ದ್ರಾಸ್ಯಾದೀರ್ಘ ಕೇಶೀ ಆನಿಲಗತಿನಿಗಾ ಸತ್ತಿಕಾ ಸ್ತಾಂದಾ ಭ್ಯಾಂ
ಹೇಮಾಭಾ ದೀರ್ಘರೂಪಾ ಬಹು ವಿಧ ಕುಸುಮೈರ್ಭೂಷಿತಾ ದಕ್ತನೇತ್ರಾ
ಮಾವಾಡಸ್ಯಾಗ್ರ ಜಾತಾ ಮೃಗಶಿಶುನಯನಾ ರಕ್ತವಸ್ತ್ರಂ ದಧಾನಾ
ಜೋಷದ್ಧಾ ಸ್ಯಾಸ್ತುವಂತೀ ಯುಧಿ ನೃಪತಿಗಣಾನ್ ಮಾರವೀ ಸಾ ಸದೈವ ||

ಅದರ ಸ್ವಭಾವ ವರ್ಣನೆಯಲ್ಲಿ- 'ದೀರ್ಘಕೇಶೀ- ರಕ್ತವಸ್ತ್ರಂ ದಧಾನಾ- ಈಷದ್‍ಹಾಸ್ಯಾಸ್ತುವಂತೀ ಯುಧಿ ನೃಪತಿಗಣಾನ್ ಮಾರವೀ ಸಾ ಸದೈವ' ಎಂದ ಅವನ ಲಕ್ಷಣಪ್ರಕಾರವೇ ರಿಧ ವರ್ಜಿತವಾಗಿಯೂ ಅಂತರ ಗಾಂಧಾರ ಶುದ್ಧ ಮಧ್ಯಮ ಕಾಕಲಿ ನಿಷಾದಗಳುಳ್ಳ ಔಡವರಾಗವಾಗಿಯೂ ನಮ್ಮ ಯಕ್ಷಗಾನದಲ್ಲಿ ಅದನ್ನು ಹಾಡುವುದಾಗಿದೆ. ಮಧ್ಯತಾರ ಸ್ಥಾಯಿಗಳಲ್ಲಿಯೆ ಅದರ ಸಂಚಾರ.

೬. ೧೫ನೇ ಮೇಳಕರ್ತರಾಗವಾದ ಮಾಯಾಮಾಳವಗೌಳ ರಾಗಕ್ಕೆ ಪುಂಡರೀಕ ರಾಮಾಮಾತ್ಯರ ಗ್ರಂಥಗಳಲ್ಲಿ ಗೌಳ, ಮಾಳವಗೌಳ ಎಂಬ ಹೆಸರೂ ಅದಕ್ಕಿಂತ ಮೊದಲು ಗೌಳವೆಂದೂ ವಿದ್ಯಾರಣ್ಯರ ಮತಾನುಸಾರ 'ಗುರ್ಜರಿ' ಎಂಬ ಹೆಸರೂ ಇದ್ದುದಾಗಿ ಸಂಗೀತ ಸುಧೆಯಲ್ಲಿ ಗೋವಿಂದ ದೀಕ್ಷಿತನು ಹೇಳಿರುತ್ತಾನೆ. ನಮ್ಮ ಯಕ್ಷಗಾನದಲ್ಲಿಯೂ 'ಗೌಳ' 'ಗುರ್ಜರಿ' ಎಂಬ ಹೆಸರುಗಳೇ ಆ ರಾಗಕ್ಕಿರುವುದಾಗಿದೆ.

೭. ಯಕ್ಷಗಾನದ ನಾಟಿರಾಗದಲ್ಲಿ ಷಟ್‌ ಶ್ರುತಿ ಋಷಭಧೈವತಗಳ ಪ್ರಯೋಗವಿಲ್ಲ. ಪೂರ್ವ ಪ್ರಸಿದ್ಧವಾದ ಗಂಭೀರ ನಾಟಿಯ ಸ್ವರಗಳಲ್ಲಿಯ ಔಡವರಾಗವಾಗಿ ಅದು ಹಾಡಲ್ಪಡುತ್ತದೆ. ಆರಂಭದ ಸ್ತುತಿಪದ್ಯದಲ್ಲಿ ಮಾತ್ರ ಅದನ್ನು ಹಾಡುವುದಾಗಿದೆ. ಸೋಮನಾಥ ಮತದಲ್ಲಿ ನಾಟಿರಾಗವು ರಿಧ ವರ್ಜವೆಂದೂ ಅದು ಗುರ್ಜರೀರಾಗಜನ್ಯವೆಂದೂ, ಭರತಕಲ್ಪಲತಾ ಮಂಜರಿಯಿಂದ ತಿಳಿಯುತ್ತದೆ.