ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೬೭


ಹೀಗೆ ಕುಂಬಳೆಯಲ್ಲಿ ಉದಯಕ್ಕೆ ಬಂದ ನಮ್ಮ ದಶಾವತಾರ ಆಟವು ೧೮೦೦ನ ಇಸವಿಯ .ಸುಮಾರಿಗೆ ಬಂಟವಾಳದ ವರೆಗೆ ವಿಸ್ತರಿಸಿತ್ತೆಂದು ತಿಳಿಯುವುದು. ಶ್ರೀರಂಗಪಟ್ಟಣದ ಯುದ್ಧದ ಸಮಯದಲ್ಲಿ, ಕೊಡಗಿನ ವೀರರಾಜೇಂದ್ರ ಒಡೆಯನು ಟಿಪ್ಪು ಸುಲ್ತಾನನ ಇದಿರಾಳಿಗಳಾದ ಇಂಗ್ಲಿಷರೊಡನೆ ಸೇರಿಕೊಂಡು ತನ್ನ ಕೈಕೆಳಗಿನ ಪುಂಡು ದಳವಾಯಿಗಳನ್ನು ಕನ್ನಡ ಜಿಲ್ಲೆಗೆ ಕಳುಹಿಸಿ ಅಲ್ಲಲ್ಲಿಯ ಸಣ್ಣ ಸಣ್ಣ ಪೇಟೆಗಳನ್ನು ಸುಲಿಗೆ ಮಾಡಿಸಿದ್ದನು. ಅಂತಹವರಲ್ಲಿ ಗೋಪಗೌಡನೆಂಬವನು ಬಂಟವಾಳ ಪೇಟೆಯನ್ನು ಸುಲಿಗೆ ಮಾಡಿ ಅಲ್ಲಿಯ ವೆಂಕಟರಮಣ ದೇವಸ್ಥಾನದ ಪ್ರತಿಮ ಯನ್ನು ಕಿತ್ತುಕೊಂಡು ಹೋಗಿದ್ದನೆಂದೂ ಆಮೇಲೆ ಸ್ವಲ್ಪ ಸಮಯದಲ್ಲಿ ಬಂಟವಾಳ ದಲ್ಲಿದ್ದ ಸಾರಸ್ವತ ಬ್ರಾಹ್ಮಣನಾದ ಮಂಜಯ್ಯ ಭಾಗವತನು ದಶಾವತಾರ ಮೇಳವನ್ನು ಮಡಿಕೇರಿಗೆ ಕೊಂಡುಹೋಗಿ ಅಲ್ಲಿಯ ರಾಜಾಂಗಣದಲ್ಲಿ ಆಡಿತೋರಿಸಿದನೆಂದೂ, ಆ ಆಟವನ್ನು ನೋಡಿ ಬಹಳವಾಗಿ ಮೆಚ್ಚಿಕೊಂಡ ರಾಜನಿಂದ ಆ ಪ್ರತಿಮೆಯನ್ನು ಬಹುಮಾನ ವಾಗಿ ಹಿಂದಕ್ಕೆ ಪಡೆದುಕೊಂಡು ಪುನಃ ದೇವಸ್ಥಾನದಲ್ಲಿ ಪ್ರತಿಷ್ಠಿಸಿದನೆಂದೂ ಹೇಳಿಕೆಯಿದೆ. ದಕ್ಷಿಣ ಕನ್ನಡದ ಚರಿತ್ರೆಯನ್ನು ಬರೆದ ಗಣಪತಿ ರಾವ್ ಐಗಳ ಎಂಬವರು ಈ ವಿಚಾರವನ್ನು ಆ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ.
ಧರ್ಮಸ್ಥಳದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಪ್ರಕಾಶಕ್ಕೆ ತಂದಿರುವಂತೆ, ಕಳೆದ ೧೮೧೨ನೇ ಇಸವಿಯಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರವರು ನೂತನವಾದ ಈ ದಶಾವತಾರ ಪ್ರಯೋಗ ಪ್ರಶಸ್ತಿಯನ್ನು ಕೇಳಿ, ಅಂದಿನ ಕುಮಾರ ಹೆಗ್ಗಡೆಯವರ ಮೂಲಕ ಇಲ್ಲಿಯ ಒಂದು ಯಕ್ಷಗಾನ ಮೇಳವನ್ನು ಕರೆಯಿಸಿಕೊಂಡು ತಮ್ಮ ಆಸ್ಥಾನದಲ್ಲಿ ಖಾಯಂ ನೆಲೆಗೊಳಿಸಿದ್ದರೆಂದೂ, ಆಮೇಲೆ ಸಹ ಈ ಪ್ರಾಂತ್ಯದಿಂದ ಭಾಗವತರನ್ನೂ, ವೇಷಧಾರಿಗಳನ್ನೂ, ಮುಖ್ಯವಾಗಿ ರಾಕ್ಷಸ ವೇಷಧಾರಿಗಳನ್ನೂ ಬೇಕಾದಂತೆ ಕರೆಯಿಸಿಕೊಳ್ಳುತ್ತಾ ಆ ಮೇಳವನ್ನು ಊರ್ಜಿತವಿಟ್ಟುಕೊಂಡಿದ್ದರೆಂದೂ ತಿಳಿಯುವುದು. ಆ ಕುರಿತು ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ನಿರೂಪವೊಂದನ್ನು ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಕೊಟ್ಟಿರುವ ಪ್ರಕಾರ ದಿವಂಗತ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಪಾರ್ತಿಸುಬ್ಬನ ಕುರಿತಾದ ತಮ್ಮ ಗ್ರಂಥದಲ್ಲಿ ಪ್ರಕಾಶಪಡಿಸಿರುತ್ತಾರೆ.
ಪಾರ್ತಿಸುಬ್ಬನ ಕಾಲದಲ್ಲಿಯೇ ಈ ಆಟವು ಮುಂದೆ ಕುಂದಾಪುರ ತಾಲೂಕಿನ ವರೆಗೂ ಅಡಿಯಿಟ್ಟಿತ್ತೆಂದೂ ಊಹಿಸುವುದಕ್ಕೆ ಆಧಾರವಿದೆ. ಅಲ್ಲಿಯ ಕಾರಂತರೊಬ್ಬರು ದಶಾವತಾರ ಮೇಳವನ್ನು ಕಟ್ಟಿಸಿದ್ದರೆಂದೂ, ಆ ಮೇಳದಲ್ಲಿ ಪಾರ್ತಿಸುಬ್ಬನು ಭಾಗವತ ನಾಗಿದ್ದನೆಂದೂ, ಆತನದೆಂದು ಪ್ರತೀತಿಯುಳ್ಳ ಇದೊಂದು ಪದ್ಯದಿಂದ ಊಹಿಸಬಹು ದಾಗಿದೆ. ಅಣೆಯ ಗುಡ್ಡದ ವಿಶ್ಲೇಶ್ವರನನ್ನು ಸ್ತುತಿಸಿದ ಆ ಪದ್ಯ ಹೀಗಿದೆ :

ದಯೆ ಮಾ | ಡೋ ವಿಘ್ನ | ರಾಜ ಸು| ಬೃನ ಮೇಲೆ | ದಯೆಮಾಡೋ |
ದಯೆ ಮಾಡೆ | ನ್ನೊಡೆಯ ಶ್ರೀ | ಗಣನಾಥ | ನಂಬಿದೆ || ದಯಮಾಡೋ ||

ದಯೆಮಾಡೊ ದಣಿದು ಬಂ| ದಾತ | -ರಕ್ತ |
ಕ್ಷಯವಾಗು | ತಿದೆ ಮೈಯೊಳ್ | ವಾತ | -ಕಾಣಿ |
ಕೆಯನೀವೆ | ಗಿರಿಜಾ ಸಂ| ಜಾತ ||
ಭಯವಾಗು | ತಿದೆ ಮುಂದೆ | ಎಡದಾರಿ | ಯೊಳಗೆ ನಿ |
ನ್ನಯ ಸೇವೆ | ಯೊಳಗೆ | ಊ | ರಿಗೆ ಪೋಪ | ತೆರನಂತೆ || ದಯಮಾಡೊ ||