ಈ ಪುಟವನ್ನು ಪ್ರಕಟಿಸಲಾಗಿದೆ

೭೦ / ಕುಕ್ಕಿಲ ಸಂಪುಟ
ಉಪರೂಪಕಗಳ ಪರಂಪರೆಯಲ್ಲಿ ನಡೆದು ಬಂದ ಸಂಪ್ರದಾಯವಿರಬೇಕೆಂದು ಅಭಿಪ್ರಾಯಪಟ್ಟಿರುತ್ತಾರೆ. ನಮ್ಮಲ್ಲಿಯ ಕೆಲಮಂದಿ ವಿದ್ವಾಂಸರು, ಪ್ರಾಯಶಃ ಬಯಲಾಟದ ಅಶಾಸ್ತ್ರೀಯ ಗಾನನರ್ತನ ಸಂಪ್ರದಾಯವನ್ನು ಲಕ್ಷಿಸಿ, ಹಾಗೂ ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು ಬಂದುದಿರಬೇಕೆಂದು ಊಹಿಸಿ, ಇದೊಂದು ಹಳೆಯ ಜಾನಪದ ಸಂಪ್ರದಾಯ ವೆಂದೆಣಿಸಿದ್ದಾರೆ. ಅಲ್ಲದೆ, ಪೂರ್ವದಲ್ಲಿಯೂ ಇದರ ಹಾಡುವಿಕೆಯು ಶಾಸ್ತ್ರೀಯವಾಗಿ ಇದ್ದಿರಲಿಕ್ಕಿಲ್ಲವೆಂಬ ಭಾವನೆಯಿಂದ, ಪೂರ್ವದ ನಮ್ಮ ಕಾವ್ಯಗಳಲ್ಲಿ ಬರುವ ಸಂಗೀತ ನಾಟ್ಯ ವರ್ಣನೆಗಳಲ್ಲಿ ಇದಕ್ಕೆ ಆಧಾರಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಲೇಖನಗಳನ್ನೂ ಬರೆದಿದ್ದಾರೆ.

ಮಂಗಳೂರಿನ ಹಿರಿಯ ವಿದ್ವಾಂಸರಾಗಿದ್ದ ದಿ| ಪಂಡಿತ ಮುಳಿಯ ತಿಮ್ಮಪ್ಪಯ್ಯ ನವರು, ಪಾರ್ತಿಸುಬ್ಬ' ಎಂಬ ತಮ್ಮ ಗ್ರಂಥದಲ್ಲಿ ಅಗ್ಗಳದೇವನೆಂಬ ಕವಿಯ 'ಚಂದ್ರಪ್ರಭಪುರಾಣ'ದ ಒಂದು ವೃತ್ತದಲ್ಲಿ ಕಾಣುವ 'ಎಕ್ಕಲಗಾಣ' ಎಂಬ ಪದವು ಯಕ್ಷಗಾನ ಎಂಬ ಪದದ ಅಪಭ್ರಂಶವೆಂದೂ ಅದೊಂದು ದೇಸೀ ಗಾನ ಪದ್ಧತಿಯೆಂದೂ ಊಹಿಸಿದ್ದಾರೆ. ಡಾ| ಶಿವರಾಮ ಕಾರಂತರೂ ತಮ್ಮ ಯಕ್ಷಗಾನ ಬಯಲಾಟ' ಎಂಬ ಗ್ರಂಥದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಡಾ| ಎಸ್. ವಿ. ಜೋಗಾ ರಾವು ಎಂಬ ಆಂಧ್ರದ ಯಕ್ಷಗಾನ ಸಂಶೋಧಕರು ಅಗ್ಗಳ ದೇವನು ತನ್ನ ಕಾವ್ಯದಲ್ಲಿ "ಎಕ್ಕಲಗಾಣರೆಂಬ ಆದಿವಾಸಿಗಳು ಯಕ್ಷಗಾನವನ್ನು ಹಾಡುತ್ತಿದ್ದರೆಂದು ತಪ್ಪಾಗಿ ಅರ್ಥಮಾಡಿಕೊಂಡುದಲ್ಲದೆ, ಆಂಧ್ರದೇಶದಲ್ಲಿರುವ ಜಕ್ಕುಲರೆಂಬ ಆದಿವಾಸಿಗಳೂ ಅದೇ ಮೂಲದವರೆಂದೆಣಿಸಿ ಅವರ 'ಪಾಟ'ದ ಜಾನಪದ ಶೈಲಿಯೇ ಯಕ್ಷಗಾನವಾಗಿದ್ದಿರ ಬಹುದೆಂದೂ ಊಹಿಸಿದ್ದಾರೆ.* ಅಲ್ಲದೆ ಡಾ| ಕಾರಂತರು ಭರತೇಶ ವೈಭವದಲ್ಲಿ 'ಎಕ್ಕಡಿಗ' ಎಂಬ ಶಬ್ದವನ್ನು ಕಂಡು ಅಲ್ಲಿಯೂ ಯಕ್ಷಗಾನದ ಕುರುಹುಗಳನ್ನು ಕಾಣು ತ್ತಾರೆ. ಅಗ್ಗಳ ದೇವನ ಆ ಪದ್ಯದಲ್ಲಿ ಹೇಳಿದ ಎಕ್ಕಲಗಾಣ ಎಂದರೆ ಯಕ್ಷಗಾನವಲ್ಲ, ಕೈಯಲ್ಲಿ ಜಾಕಟೆಯನ್ನೋ, ತಾಳವನ್ನೂ ಹಿಡಿದು ಹಾಡುವ ಯಕ್ಷಗಾನ ಭಾಗವತನೂ ಅಲ್ಲ. ಹಾಗೂ ಯಕ್ಷಗಾನವು ಜಾನಪದವೆಂಬುದಕ್ಕೆ ಆ ಪದ್ಯದಲ್ಲಿ ಯಾವ ಸಮರ್ಥನೆಯೂ ದೊರೆಯುವುದಿಲ್ಲ ಎಂದು ನಾನು ಅಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ವಸ್ತುತಃ 'ಎಕ್ಕಲಗಾಣ' ಎಂಬ ಶಬ್ದವು ಅದೇ ಪದ್ಯದಲ್ಲಿರುವ ಠಾಯ,

ಆಣತಿ, ಸಾಳಗ, ದೇಸಿ ಇತ್ಯಾದಿ ಶಬ್ದಗಳಂತೆ ಸಂಗೀತಶಾಸ್ತ್ರದ ಒಂದು ಪಾರಿಭಾಷಿಕ ಪದ.


೧. 'ಯಕ್ಷಗಾನ ಮಕರಂದ' ಎಂಬ ಗ್ರಂಥದಲ್ಲಿ ಪ್ರಕಟವಾದ ಡಾ| ವಿ. ರಾಘವನ್ ಅವರ 'ಯಕ್ಷಗಾನ' ಎಂಬ ಲೇಖನದ ಮೊದಲ ಪಾರಾ ನೋಡಿರಿ.
೨. ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯೆನಿಪ್ಪ ಠಾಯೆಯಿಂ ದಾಣತಿ ಮಾಡಿ ಸಾಳಗದ ದೇಸಿಯ ಗೀತವನಂದು ಪಾಡುವಿಂ ಪಾಣನನುರ್ವರಾಧಿಪತಿ ಲೀಲೆಯಿನೆಕ್ಕಲಗಾಣನೊರ್ವನಂ ||

ಕೇಳುತ್ತು ಮಿರ್ದಂ (೭-೯೬)


೩. ಡಾ| ಎಸ್. ವಿ. ಜೋಗಾ ರಾವು ಇವರ 'ಆಂಧ್ರ ಯಕ್ಷಗಾನ ವಾಹ್ಮಯ ಚರಿತ್ರೆ' ಎಂಬ ಬೃಹತ್ಸುಸ್ತಕದಲ್ಲಿ ಈ ಪರಿಪಾಠಗಳನ್ನು ನೋಡಬಹುದು. ಆಂಧ್ರ ವಿಶ್ವಕಲಾ ಪರಿಷತ್ತಿನಿಂದ ೧೯೬೧ರಲ್ಲಿ ಪ್ರಕಾಶಿಸಲ್ಪಟ್ಟಿದೆ.