ಈ ಪುಟವನ್ನು ಪ್ರಕಟಿಸಲಾಗಿದೆ

೭೬ / ಕುಕ್ಕಿಲ ಸಂಪುಟ

ಸೂ. ೨೪೬
ಪಾಡುಗಳಿಂದಂ ತರಿಸಲೆ
ಮಾಡಿದುದಂ ಪಾಡುಗಬ್ಬಮೆಂದು ಬುಧ‌ರ್ ಕೊ೦ |
ಡಾಡುವರದರಿಂ ದಲ್ ಮೇಲ್
ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ |||| ೯೫೪ ||

ಮೇಲೆ ಹೇಳಿದ 'ಪಾಡು'ಗಳು ಒಂದಕ್ಕಿಂತ ಹೆಚ್ಚು ಸೇರಿರುವ ದೊಡ್ಡ ಪ್ರಬಂಧವಾದರೆ ಅದನ್ನು ವಿದ್ವಾಂಸರು 'ಪಾಡುಗಬ್ಬವೆಂದು ಕರೆಯುತ್ತಾರೆ; ಅದುವೇ 'ಮೇಲ್ವಾಡು' ಅಥವಾ ರೂಢಿಯಲ್ಲಿ 'ಬೆದಂಡೆ' ಎಂದು ಕರೆಯಲ್ಪಡುವ ಹಾಡುಗಬ್ಬವಾಗಿದೆ ಎಂದು ಈ ಪದ್ಯದ ತಾತ್ಪರ್ಯ. ಆದುದರಿಂದ 'ಬೆದಂಡೆ' ಎಂಬುದರಲ್ಲಿ, ಎಡೆಎಡೆಯಲ್ಲಿ ಒಂದೊಂದು ವೃತ್ತ ಹಾಗೂ ಕಂದಪದ್ಯಗಳು ಸೇರಿರುವ ಪದಗಳು (ತಾಳಬದ್ಧ ಪದ್ಯಗಳು) ಬಹುಸಂಖ್ಯೆಯಲ್ಲಿರುತ್ತವೆ ಎಂದಾಯಿತು. ಅಂತೆಯೇ ಕಂದವೃತ್ತಗಳ ಸಂಖ್ಯೆಯೂ ಅಧಿಕವಿರುವುದಾಯಿತು. ಹಾಗಾಗಿ 'ಮೇಲ್ವಾಡು' ಎಂದರೆ ಮಹಾಪ್ರಬಂಧ, ಅದುವೇ ಬೆದಂಡೆ ಎಂದೂ ವ್ಯಕ್ತವಾಯಿತು. ಹೀಗೆ ಕಂದವೃತ್ತಗಳು ಅಧಿಕ ಸಂಖ್ಯೆಯಲ್ಲಿರುವ 'ಮಹಾಪ್ರಬಂಧ'ವನ್ನು ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ 'ಸೂಡಸ್ಥ' ಪ್ರಬಂಧವೆಂದೂ ಕರೆಯಲಾಗಿದೆ. ಅನೇಕ ತಾಳಗಳು ಏಕತ್ರ ಸೇರಿರುವುದೇ 'ಸೂಡ'ದ ಲಕ್ಷಣ-

ಬಹೂನಾಂ ತಾಳಾನಾಂ ಏಕತ್ರ ಗುಂಘನಂ ಸೂಡಃ(ಸಂಗೀತ ಸಾರಸಂಗ್ರಹ)

ಆದುದರಿಂದಲೇ ಅನೇಕ ತಾಳದ ಪದಗಳಿರುವ ಪ್ರಬಂಧವು 'ಸೂಡಸ್ಥ'ವೆಂದು ಕರೆಯಲ್ಪಟ್ಟಿರುವುದು. ಇದರ ಹಾಡುವಿಕೆಗೂ 'ಸೂಡಕ್ರಮ'ವೆಂದು ಹೆಸರು. ಚಾಲುಕ್ಯ ಸೋಮೇಶ್ವರನ 'ಮಾನಸೋಲ್ಲಾಸ' ಗ್ರಂಥದ ಸಂಗೀತ ಪ್ರಕರಣದಲ್ಲಿರುವ ಆ ಲಕ್ಷಣಶ್ಲೋಕವನ್ನು ಪರಿಶೀಲಿಸಿರಿ :

ಕಂದ ವೃತ್ತಾಧಿಕಃ ಕಶ್ಚಿತ್‌ ಪ್ರಬಂಧಶ್ಚೇನ್ಮಹಾನ್ ಪುರಃ |
ಅಲ್ಪ: ಪಶ್ಚಾತ್ ಪ್ರಗಾತವ್ಯ: ಏಷ ಸೂಡಕ್ರಮೋ ಮತಃ ||

ಪೂರ್ವದ ಸಂಗೀತಗಾನ ಸಂಪ್ರದಾಯದಲ್ಲಿ ಇಂತಹ ಮಹಾಪ್ರಬಂಧವನ್ನು ಮೊದಲಾಗಿ ಹಾಡುವ ಪದ್ಧತಿ ಇತ್ತೆಂದು ಇದರಿಂದ ವ್ಯಕ್ತವಾಗುವುದು. ಯಕ್ಷಗಾನಗಳನ್ನು ಕವಿಗಳು ಮಹಾಪ್ರಬಂಧವೆಂದೂ ಕರೆದುಕೊಂಡದ್ದಿದೆ. ಇದನ್ನೆಲ್ಲಾ ಪರಿಶೀಲಿಸಿದಲ್ಲಿ, ಇಂದಿನ 'ಯಕ್ಷಗಾನ'ವು ಹಿಂದೆ ಮಹಾಪ್ರಬಂಧ ಹಾಗೂ ಬೆದಂಡೆ ಎಂದೂ ಕರೆಯಲ್ಪಡುತ್ತಿತ್ತು. ಅಲ್ಲದೆ ಅದು ನಾಟ್ಯವಿಲ್ಲದ “ಸಭಾಸಂಗೀತ"ದಲ್ಲಿಯೂ ಹಾಡಲ್ಪಡುತ್ತಿತ್ತೆಂಬುದಾಗಿ ಅನುಮಾನಿಸಬಹುದಾಗಿದೆ.

ತಾಳಬದ್ಧವಾದ ಪದ್ಯಗಳಿಗೆ ಪದ ಎಂಬ ವ್ಯವಹಾರವು ಪುರಾತನ ಸಂಗೀತ (ಗಾಂಧರ್ವ) ಶಾಸ್ತ್ರ ಪರಂಪರೆಯಿಂದಲೇ ರೂಢಿಗೆ ಬಂದಿರುವುದಾಗಿದೆ. ನಾಟ್ಯಶಾಸ್ತ್ರದಲ್ಲಿ ಭರತ ಮುನಿಯು ಕೊಟ್ಟಿರುವ ಗಾಂಧರ್ವ ಲಕ್ಷಣವನ್ನು ಪರಿಭಾವಿಸಿರಿ-

ಗಾಂಧರ್ವ೦ ಯನ್ಮಯಾ ಸೃಷ್ಟಂ (ಪ್ರೋಕ್ತಂ) ಸ್ವರತಾಲ ಪದಾತ್ಮಕಂ|
ಪದಂ ತಸ್ಯ ಭವೇದ್ವಸ್ತು ಸ್ವರತಾಲಾನುಭಾವಕಂ ||(ಅ. ೨೬)