ಈ ಪುಟವನ್ನು ಪರಿಶೀಲಿಸಲಾಗಿದೆ

೯೬

ಕ್ರಾಂತಿ ಕಲ್ಯಾಣ

ತರಿಸಿ ಬ್ರಹೇಂದ್ರ ಶಿವಯೋಗಿಯನ್ನೂ ಅವರ ಅಂತೇವಾಸಿ ಹರೀಶರುದ್ರನನ್ನೂ ರಾಜಗೃಹಕ್ಕೆ ಕಳುಹಿಸಿದರು. ಹೋಗುವಾಗ ಶೈವ ಶರಣಧರ್ಮಗಳಿಗೆ ಸಂಬಂಧಿಸಿದ ಕೆಲವು ಹೊತ್ತಗೆಗಳನ್ನು ಪಾರಿತೋಷಕವಾಗಿ ಕೊಡಲು ಮರೆಯಲಿಲ್ಲ.

ಧರ್ಮೋಪದೇಶಕರು ಬರುವ ವಿಚಾರ ಮೊದಲೇ ತಿಳಿದಿದ್ದ ಮನೆಹೆಗ್ಗಡೆ ಅವರನ್ನು ರಾಜಗೃಹದ ಮಹಾದ್ವಾರದಲ್ಲಿ ಎದುರುಗೊಂಡು, ಗೌರವದಿಂದ ಅರಮನೆಯ ಅತಿಥಿಶಾಲೆಯಲ್ಲಿ ಮೊದಲೇ ಸಿದ್ಧವಾಗಿದ್ದ ಭದ್ರಾಸನದ ಮೇಲೆ ಕುಳ್ಳಿರಿಸಿ ಫಲಪುಷ್ಟ ತಾಂಬೂಲಗಳಿಂದ ಸತ್ಕರಿಸಿದನು.

ಸಂತುಷ್ಟನಾದ ಬೊಮ್ಮರಸನಿಗೆ ಸ್ವಲ್ಪಹೊತ್ತಿಗೆ ಮೊದಲು ದಾರಿಯಲ್ಲಿ ತನ್ನ ಮತ್ತು ಬ್ರಹ್ಮಶಿವನ ನಡುವೆ ನಡೆದ ಮಾತುಕತೆಗಳ ನೆನಪಾಯಿತು.....ಅವರು ಕುಳಿತಿದ್ದ ರಥ ಮರಗಿಡಗಳಿಂದ ನಿಬಿಡವಾದ ಒಂದು ನಿರ್ಜನ ಪ್ರದೇಶಕ್ಕೆ ಬಂದಾಗ ಬೊಮ್ಮರಸನು, “ಸ್ಥಳ ಅನುಕೂಲವಾಗಿದೆ. ನಾವು ರಥದಿಂದಿಳಿದು ಮರಗಿಡಗಳ ನಡುವೆ ತಪ್ಪಿಸಿಕೊಳ್ಳಬಹುದು,” ಎಂದಿದ್ದನು.

ಬ್ರಹ್ಮಶಿವನು ನಕ್ಕು, “ಬಿಜ್ಜಳನ ಭಟರು ರಥವನ್ನು ಹಿಂಬಾಲಿಸುತ್ತಿದ್ದಾರೆ. ಅವರ ಕೈಗೆ ಸಿಕ್ಕಿ, ಕೊರಡೆಯೇಟು ತಿಂದು ಸೆರೆಮನೆಗೆ ಹೋಗುವುದು ನಿಮ್ಮಿಚ್ಛೆಯಾದರೆ ಹಾಗೆ ಮಾಡಬಹುದು,” ಎಂದು ಕುಹಕವಾಡಿದ್ದನು.

“ಹಾಗಾದರೆ ರಾಜಗೃಹಕ್ಕೆ ಹೋಗಿ ನಾವಾಗಿ ಭಟರ ವಶವಾಗುವುದು ನಿನ್ನ ಇಷ್ಟವೆ?” -ಎಂದಿದ್ದನು ಬೊಮ್ಮರಸ.

ಬ್ರಹ್ಮಶಿವನು ಕೂಡಲೆ ಉತ್ತರ ಕೊಡಲಿಲ್ಲ. ಕೊಂಚಹೊತ್ತು ಯೋಚಿಸುತ್ತಿದ್ದು ಬಳಿಕ ಗಂಭೀರವಾಗಿ,

“ಈಗ ನಾವು ಬೊಮ್ಮರಸ, ಬ್ರಹ್ಮಶಿವ ಪಂಡಿತರಲ್ಲ. ನೀವು ಬ್ರಹ್ಮೇಂದ್ರ ಶೀವಯೋಗಿ, ನಾನು ನಿಮ್ಮ ಅಂತೇವಾಸಿ ಹರೀಶರುದ್ರ. ಮಾಚಿದೇವ ಚೆನ್ನಬಸವಣ್ಣನವರಂತಹ ಮಹಿಮಾಪುರುಷರ ಶುಭಾಶಯಗಳನ್ನು ಪಡೆದು, ರಾಜಗೃಹವೆಂಬ ಕತ್ತಲೆಯ ಸಿರಿಮನೆಗೆ ಗುರುಮನೆಯ ದೀಪಗಳಂತೆ ಹೋಗುತ್ತಿದ್ದೇವೆ. ಕರ್ತಾರನು ನಮಗಲ್ಲಿ ಸೆರೆಮನೆಯ ವಾಸ ಕೊಡಲಿ, ಅರಮನೆಯ ಭೋಗಕೊಡಲಿ, ಪರಮಗುರು ಪ್ರಸಾದವೆಂದು ಸ್ವೀಕರಿಸುವುದು ಈಗಿನ ನಮ್ಮ ವೇಷಭೂಷಣಗಳಿಗೆ ತಕ್ಕ ಕಾರ್ಯ. ಹಾಗಲ್ಲದೆ ರಥದಿಂದಿಳಿದು ಓಡಿಹೋದರೆ ಗುರುಮನೆಯ ಗೌರವಕ್ಕೆ ಹಾನಿತಂದು ಬೀದಿಯ ಭಂಡರಂತೆ ಹಗರಣಕ್ಕೀಡಾಗುವೆವು,” ಎಂದಿದ್ದನು.

ಬ್ರಹ್ಮಶಿವನು ಹೇಳಿದಂತೆ ಇದುವರೆಗೆ ಎಲ್ಲವೂ ಗುರುಮನೆಯ ಗೌರವಕ್ಕೆ ತಕ್ಕಂತೆ ನಡೆದಿದೆ. ಆದರೆ ಆ ಗೌರವವನ್ನುಳಿಸಿಕೊಳ್ಳುವ ಶಕ್ತಿ ನಮಗಿದೆಯೆ?