ಈ ಪುಟವನ್ನು ಪರಿಶೀಲಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೯೭

ಎಂದು ಬೊಮ್ಮರಸನು ಯೋಚಿಸುತ್ತಿದ್ದಂತೆ.....

ಪ್ರಭುಗಳ ಧರ್ಮೋಪದೇಶಕರಾಗಿ ಬಂದಿರುವ ಜಂಗಮಗುರುಗಳ ಪಾದಗಳಿಗೆ ವಂದಿಸಿ, ಆಶೀರ್ವಾದ ಪಡೆಯಲು ರಾಜಗೃಹದ ಗಣಿಕಾವಾಸದ ಹೆಗ್ಗಡತಿಯರ ತಂಡ ಅಲ್ಲಿಗೆ ಬಂದಿತು.

ಬೇಟೆಯ ದುರ್ಘಟನೆಯ ಅನಂತರ ಜಗದೇಕಮಲ್ಲನಲ್ಲಿ ಅಂಕುರಿಸಿದ ವಿರಕ್ತಿಗೆ ಹೆಗ್ಗಡತಿಯರಲ್ಲಿ ಮೂವರು ಮಾತ್ರ ಬಲಿಯಾಗಿದ್ದರು. ಪಾನಗೋಷ್ಠಿಯಲ್ಲಿ ಅಸಭ್ಯತೆಯಿಂದ ವರ್ತಿಸುತ್ತಿದ್ದುದು ಅವರ ಪರಿತ್ಯಾಗದ ಮುಖ್ಯ ಕಾರಣವಾಗಿತ್ತು. ಉಳಿದ ಕೆಲವು ಹೆಗ್ಗಡತಿಯರು ಮತ್ತು ಮನೆಹೆಗ್ಗಡೆ ಎಂದಿನಂತೆ ಪ್ರಭುಗಳ ಕೃಪಾಶ್ರಯದ ಸುಖವಾಸದಲ್ಲಿದ್ದರು. ಅವರೊಬ್ಬೊಬ್ಬರೂ ಮೊದಲು ಬೊಮ್ಮರಸನ, ಅನಂತರ ಬ್ರಹ್ಮಶಿವನ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ರೂಪವಾದ ಫಲಪುಷ್ಪಗಳನ್ನು ಪಡೆದುಹೋಗಲು ಸುಮಾರು ಅರ್ಧ ಪ್ರಹರಕಾಲ ಹಿಡಿಯಿತು.

ಆ ದೀರ್ಘಕಾಲದಲ್ಲಿ ಜಂಗಮದೇವರಿಗೆ ಆಯಾಸವಾಗದಿರಲೆಂದು ಆಗಿಂದಾಗ ಬಿಸಿ ಕೇಸರಿಹಾಲನ್ನು ಕುಡಿಯಲು ಕೊಡಲು ಮನೆಹೆಗ್ಗಡೆ ಏರ್ಪಡಿಸಿದ್ದನು. ಅದಕ್ಕಾಗಿ ಇಬ್ಬರು ದಾಸಿಯರು ಬಿಸಿಹಾಲಿನ ಪಾತ್ರೆ ಬಟ್ಟಲುಗಳನ್ನು ಹಿಡಿದು ಸಿದ್ದರಾಗಿ ನಿಂತಿದ್ದರು. ಹೊಟ್ಟೆ ಗಂಟಲುಗಳನ್ನು ಬಿಸಿಯಾಗಿಡುವ ಈ ಪಾನಕಪೂಜೆಯಲ್ಲದೆ ಬೇರೆ ವಿನೋದಗಳೂ ಅಲ್ಲಿ ಅವರಿಗೆ ದೊರಕಿದವು.

ಒಬ್ಬ ಹೆಗ್ಗಡತಿ ಬೊಮ್ಮರಸನ ಪಾದಗಳಿಗೆ ಸಂಪಿಗೆಯ ಎಣ್ಣೆ ಹಚ್ಚಿ ಹರಿದಾಡುವ ಕೇಶಗಳಿಂದ ಒರೆಸಿದಳು. ಇನ್ನೊಬ್ಬಳು ಅರಳಿದ ತಾವರೆಯೊಂದನ್ನು ಬ್ರಹ್ಮಶಿವನ ಕಾಲುಗಳ ಮೇಲಿಟ್ಟು ಅಂಗಾಲನ್ನು ಚಿವುಟಿದಳು. ಮತ್ತೊಬ್ಬಳು ಕುಂಕುಮದ ಕೆನ್ನೀರಿಂದ ಬೊಮ್ಮರಸನ ಪಾದಗಳಿಗೆ ಸಾರಣೆ ಮಾಡಿದಳು. ಮಗದೊಬ್ಬಳು ಬ್ರಹ್ಮಶಿವನ ಕಾಲುಗಳಿಗೆ ಅರಶಿನ ಹಚ್ಚಿದಳು. ವಿಭಿನ್ನ ಅಭಿರುಚಿ ಅಭಿಲಾಷೆಗಳಿಂದ ಪ್ರೇರಿತರಾದ ಆ ತರುಣ ಗಣಿಕೆಯರಿಗೆ ಆ ಇಬ್ಬರು ಜಂಗಮರು ಭಾವಾನುಗುಣವಾಗಿ ಬೇರೆ ಬೇರೆ ರೂಪಗಳಿಂದ ಕಂಡರು. ಕೆಲವರಿಗೆ ಒತ್ತೆ ಕೇಳಲು ಬಂದ ವಿಚಿತ್ರ ವಿಟರಂತೆ, ಇನ್ನುಳಿದವರಿಗೆ ಗಣಿಕಾವಾಸದ ಬೇಸರ ಕಳೆಯಲು ಕರೆಸಿದ ಗಾರುಡಿಗರಂತೆ ಚಿತ್ರ ವಿಚಿತ್ರವಾಗಿತ್ತು, ಅವರ ಸಾನ್ನಿಧ್ಯ.

ಈ ಸಮಾರಂಭ ಮುಗಿದ ಮೇಲೆ ಮನೆಹೆಗ್ಗಡೆ ಅವರನ್ನು ಬಿಡಾರಕ್ಕೆ ಬಿಜಯ ಮಾಡಿಸಿ, “ಜಂಗಮದೇವರು ಇಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರೆ ಪ್ರಭುಗಳು ದರ್ಶನಕ್ಕೆ ಸಿದ್ಧರಾಗಿರುವರೇ ನೋಡಿಬರುತ್ತೇನೆ,” ಎಂದು ಹೊರಗೆ ಹೋದನು.