ಈ ಪುಟವನ್ನು ಪರಿಶೀಲಿಸಲಾಗಿದೆ

೨೨೬

ಕ್ರಾಂತಿ ಕಲ್ಯಾಣ


ಕೆಲವು ದಿನಗಳಿದ್ದು ಹೊರಟುಹೋದರು.”

“ಜಪತಪಗಳನ್ನು ಉತ್ತಮ ವರ್ಣದವರು ಮಾತ್ರವೇ ಆಚರಿಸತಕ್ಕದ್ದೆಂದು ನಿಮಗೆ ತಿಳಿಯದೆ?”

“ತಿಳಿಯದು.”

ಷಡಕ್ಷರ ಮಂತ್ರವನ್ನು ನೀವು ಉಚ್ಛರಿಸಬಾರದೆಂದು ಯಾರೂ ಎಚ್ಚರಿಕೆ ಕೊಡಲಿಲ್ಲವೆ?”

“ನಮ್ಮ ಗುರುಗಳು ಹಾಗೆ ಹೇಳಲಿಲ್ಲ”

“ಕೀಳು ಜಾತಿಯವನಾದ ನೀನು ವೈದಿಕ ಧರ್ಮದ ಸದಾಚಾರಗಳನ್ನು ಆಚರಿಸುವುದು ಅಪರಾಧ.” -

“ಅಪರಾಧವೆಂದು ನನಗೆ ತಿಳಿಯದು.”

“ನೀನು ನಿನ್ನ ವರ್ತನೆಯಿಂದ ವೈದಿಕ ಧರ್ಮವನ್ನು ಅಪಹಾಸ್ಯ ಮಾಡುತ್ತಿರುವೆ. ಮಗನಿಗೆ ಉತ್ತಮ ವರ್ಣದ ಹೆಣ್ಣನ್ನು ತಂದು ಮದುವೆ ಮಾಡಿ ವರ್ಣಸಂಕರ ಮಾಡಿರುವೆ. ನಿನ್ನ ಈ ಎರಡು ಅಪರಾಧಗಳಿಗೆ ಮರಣದಂಡನೆ ವಿಧಿಸಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ.” –ಕ್ರಮಿತನು ಹಠಾತ್ತನೆ ದನಿಯೆತ್ತಿ ದರ್ಪದಿಂದ ನುಡಿದನು.

ಹರಳಯ್ಯ ಹೆದರಲಿಲ್ಲ. ನ್ಯಾಯಪೀಠಕ್ಕೆ ವಂದಿಸಿ ವಿನಯದಿಂದ ಕೂಡಿದ ಗಂಭೀರ ಕಂಠದಿಂದ, “ರಾಜಾಜ್ಞೆಯನ್ನು ನೋಡಿದಾಗಲೆ ಶಿವನ ಕರೆ ಬಂದಿತೆಂದು ತಿಳಿದೆ, ಒಡೆಯರೆ. ಹಣ್ಣಾದ ಎಲೆ ತಾನಾಗಿ ಉದಿರಿದರೇನು ? ಪರರು ಕಿತ್ತರೇನು? ಎರಡೂ ಸಮಾನ,” -ಎಂದು ಹೇಳಿ ಕೈಕಟ್ಟಿ ನಿಂತನು.

ಕ್ರಮಿತನು ಚಡಪಡಿಸಿ ಆಪಾದಿತನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಆಜ್ಞೆ ಮಾಡಿದನು. ಭಟರು ಹೋದಮೇಲೆ ಅವನು ಸಹನ್ಯಾಯಾಧೀಶರ ಕಡೆ ತಿರುಗಿ, “ನಾಳೆ ಶೀಲವಂತ ಲಾವಣ್ಯವತಿಯರ ಸಾಕ್ಷ್ಯ ತೆಗೆದುಕೊಳ್ಳಬೇಕಾಗಿದೆ. ಮಧ್ಯಾಹ್ನಕ್ಕೆ ವಿಚಾರಣೆ ಪ್ರಾರಂಭ ಮಾಡಿದರೆ ಒಳ್ಳೆಯದು,” ಎಂದನು.

“ವರ್ಣಸಂಕರ ನಡೆದಿದೆಯೇ ಇಲ್ಲವೇ ಎಂಬುದು ಈಗ ನ್ಯಾಯಪೀಠದ ಮುಂದಿರುವ ಪ್ರಶ್ನೆ. ಅದಕ್ಕಾಗಿ ಧರ್ಮಶಾಸ್ತ್ರ ತಜ್ಞರ, ಮಠಾಧಿಪತಿಗಳ ಸಾಕ್ಷ್ಯ ತೆಗೆದುಕೊಂಡರೆ ಸಹಾಯಕವಾಗುವುದು,” -ಎಂದು ಮಂಚಣನು ತನ್ನ ಅಭಿಪ್ರಾಯ ತಿಳಿಸಿದನು.

“ವರ್ಣಸಂಕರ ನಡೆದಿದೆಯೆಂಬುದು ನ್ಯಾಯಪೀಠಕ್ಕೆ ನಿರ್ಧಾರವಾಗಿದೆ.