ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೨೭


ಸರ್ವಾಧಿಕಾರಿಗಳು ತಮ್ಮ ಆಜ್ಞಾಪತ್ರದಲ್ಲಿ ಅದನ್ನು ಸ್ಪಷ್ಟಪಡಿಸಿದ್ದಾರೆ. ಈಗ ನಾವು, ನಡೆದಿರುವ ಅಪರಾಧದ ವ್ಯಾಪ್ತಿ ಮತ್ತು ಅದರ ರಹಸ್ಯೋದ್ದೇಶಗಳನ್ನು ಕುರಿತು ವಿಚಾರಣೆ ನಡೆಸಬೇಕಾಗಿದೆ. ಈ ದೃಷ್ಟಿಯಿಂದ ನಾನು ಮಂಚಣ ನಾಯಕರ ಸಲಹೆಯನ್ನು ವಿರೋಧಿಸುತ್ತೇನೆ,”

-ಎಂದು ರುದ್ರಭಟ್ಟನು ಹೇಳಿದಾಗ, ನ್ಯಾಯಪೀಠದಲ್ಲಿ ತಾನು ಒಂಟಿಗನೆಂದು ಮಂಚಣನು ತಿಳಿದನು. ಆದರೂ ಹೋರಾಟವಿಲ್ಲದೆ ಕ್ರಮಿತನಿಗೆ ಮಣಿಯುವುದು ಅವನಿಗೆ ಇಷ್ಟವಿರಲಿಲ್ಲ.

“ಶೀಲವಂತನ ಸಾಕ್ಷ್ಯ ತೆಗೆದುಕೊಳ್ಳಲು ನನ್ನ ಅಡ್ಡಿಯಿಲ್ಲ. ಆದರೆ ಲಾವಣ್ಯವತಿ ಅರಿಯದ ಹೆಣ್ಣು. ಸಾಕ್ಷ್ಯ ತೆಗೆದುಕೊಳ್ಳುವ ನೆವದಿಂದ ಅವಳನ್ನು ನ್ಯಾಯಾಸ್ಥಾನದ ಮುಂದೆ ನಿಲ್ಲಿಸುವುದು ಉಚಿತವೆನಿಸದು,” -ಎಂದು ಅವನು ಪುನಃ ಆಕ್ಷೇಪಿಸಿದನು.

“ಮದುವೆಗೆ ಸಂಬಂಧಿಸಿದ ಕೆಲವು ವಿವರಗಳನ್ನು ತಿಳಿಯಲು ಲಾವಣ್ಯವತಿಯ ಸಾಕ್ಷ್ಯ ಅಗತ್ಯ, ಹೆಂಗಸೆಂಬ ಕಾರಣದಿಂದ ನಾವು ಮಾಡಬೇಕಾದ್ದನ್ನು ಮಾಡದೆ ಹೋದರೆ ಸರ್ವಾಧಿಕಾರಿಗಳ ಕೋಪಕ್ಕೆ ಪಾತ್ರರಾಗುವೆವು. ನ್ಯಾಯಪೀಠದ ಅಧ್ಯಕ್ಷನಾಗಿ ನಾನು ಈ ಎಚ್ಚರಿಕೆ ಕೊಡುತ್ತಿದ್ದೇನೆ.” ತಿರಸ್ಕಾರದ ಬಿರುದನಿಯಿಂದ ಕ್ರಮಿತನು ನುಡಿದನು. ಬೇರೆ ಮಾರ್ಗವಿಲ್ಲದೆ ಮಂಚಣನು ಸಲಹೆಗೆ ಒಪ್ಪಬೇಕಾಯಿತು.

ರಾಜಪುರೋಹಿತ ನಾರಣಕ್ರಮಿತನು ಬಿಜ್ಜಳನ ಧರ್ಮಾಧಿಕರಣದ ಶ್ರೇಷ್ಠ ನ್ಯಾಯಾಧೀಶನಾಗಿದ್ದರೂ ಭೋಗವಿಲಾಸಗಳ ಆಕರ್ಷಣೆಯಿಂದ ದೂರವಾಗಿರಲಿಲ್ಲ. ಲಾವಣ್ಯವತಿಯಂತಹ ಪ್ರಬುದ್ಧ ಸುಂದರ ಯುವತಿಯನ್ನು ನ್ಯಾಯಪೀಠದ ಮುಂದೆ ನಿಲ್ಲಿಸಿ ವಿಚಾರಣೆಯ ನೆವದಿಂದ ಸಂಬದ್ಧವೋ ಅಸಂಬದ್ಧವೋ ಆದ ಅಸಭ್ಯ ಅಶ್ಲೀಲ ಪ್ರಶ್ನೆಗಳನ್ನು ಕೇಳುವುದು ಅವನ ಉದ್ದೇಶವಾಗಿತ್ತು. ಭೋಗಕ್ಕೆ ಬಾರದ ವಸ್ತುವನ್ನು ನೋಡಿಯಾದರೂ ಆನಂದಿಸುವೆನೆಂದು ಅವನು ಭಾವಿಸಿದನು.

ಆದರೆ ಮರುದಿನ ಮಧ್ಯಾಹ್ನ ಸಾಕ್ಷ್ಯ ಕೊಡಲು ಬಂದ ಲಾವಣ್ಯವತಿ ನ್ಯಾಯಪೀಠದ ಮುಂದೆ ನಿಂತಾಗ ಕ್ರಮಿತನಿಗೆ ತೀವ್ರ ನಿರಾಶೆಯಾಯಿತು. ಸಾಮಾನ್ಯ ಸ್ತ್ರೀಯಂತೆ ಯಾವ ಅಲಂಕಾರವೂ ಇಲ್ಲದೆ ತಲೆ ತುಂಬ ಸೆರಗು ಹೊದೆದು ಅವಳು ನ್ಯಾಯಾಸ್ಥಾನಕ್ಕೆ ಬಂದಿದ್ದಳು. ಏಕಕಾಲದಲ್ಲಿ ತಂದೆ ಮತ್ತು ಮಾವ, ಇವರಿಬ್ಬರ ಬಂಧನದಿಂದ ಅವಳ ಹೃದಯದಲ್ಲಿ ದುಗುಡ ತುಂಬಿದ್ದಂತೆ ಕಂಡಿತು. ಅತ್ತು ಅತ್ತು ಕಣ್ಣುಗಳು ಕೆಂಪಾಗಿದ್ದವು. ಹಣೆಯ ವಿಭೂತಿ ವಿರಕ್ತಿಯನ್ನು ಮೆರೆಸಿತ್ತು.

ಕರಣಿಕನ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರ ಕೊಟ್ಟು, ನ್ಯಾಯಪೀಠಕ್ಕೆ ವಂದಿಸಿ ಅವಳು ತಲೆಬಾಗಿ ನಿಂತಳು.