ಈ ಪುಟವನ್ನು ಪರಿಶೀಲಿಸಲಾಗಿದೆ

೨೨೮

ಕ್ರಾಂತಿ ಕಲ್ಯಾಣ


“ಸಾಕ್ಷಿ ಕುಳಿತುಕೊಂಡು ಉತ್ತರ ಕೊಡಬಹುದು,” –ಕ್ರಮಿತನು ಗೌರವದಿಂದ ಹೇಳಿದನು.

“ನಿಂತುಕೊಂಡೇ ಉತ್ತರ ಕೊಡಲು ನ್ಯಾಯಪೀಠದ ಅನುಮತಿ ಕೇಳುತ್ತೇನೆ,” -ಲಾವಣ್ಯವತಿ ವಿನಯದಿಂದ ಬಿನ್ನವಿಸಿಕೊಂಡಳು.

“ಶೀಲವಂತನೊಡನೆ ನಿಮ್ಮ ಮದುವೆ ನಿಮ್ಮ ಒಪ್ಪಿಗೆಯಿಂದ ನಡೆಯಿತೆ ?” -ಕೆಲವು ಕ್ಷಣಗಳು ಯೋಚಿಸುತ್ತಿದ್ದು ಕ್ರಮಿತನು ಪ್ರಶ್ನಿಸಿದನು.

“ಹೌದು, ಒಪ್ಪಿಗೆಯಿಂದಲೆ ನಡೆಯಿತು.”
“ಮದುವೆಯಾಗುವ ಮೊದಲು ನೀವು ಶೀಲವಂತನನ್ನು ನೋಡಿದ್ದಿರಾ?” :“ನೋಡಿದ್ದೆ.”
“ಯಾವಾಗ? ಎಲ್ಲಿ ನೋಡಿದ್ದಿರಿ ?”
“ಮಹಮನೆಯ ಆರೋಗ್ಯಧಾಮದಲ್ಲಿ ಅವರ ಚಿಕಿತ್ಸೆ ನಡೆಯುತ್ತಿದ್ದಾಗ.” :“ನೋಡಲು ಕಾರಣ?”

“ಆಗ ಹರಳಯ್ಯನವರು ಕಲ್ಯಾಣದಲ್ಲಿರಲಿಲ್ಲ. ರೋಗಿಗೆ ಬೇಕಾದ ಫಲೋಪಹಾರಗಳನ್ನು ನಾನು ತೆಗೆದುಕೊಂಡುಹೋಗಿ ಕೊಡುತ್ತಿದ್ದೆ.”

“ಆಗ ನೀವು ಶೀಲವಂತಯ್ಯನೊಡನೆ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದಿರಾ ?”

“ಉಪಚಾರಕ್ಕೆ ಎಷ್ಟು ಅಗತ್ಯವೋ ಅಷ್ಟು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದೆ.”
“ಆಗ ನಿಮ್ಮಲ್ಲಿ ಪರಸ್ಪರ ಪ್ರೇಮ ಹುಟ್ಟಿತಲ್ಲವೆ?”
“ಅದೆಲ್ಲ ನನಗೆ ತಿಳಿಯದು,” -ಲಾವಣ್ಯವತಿ ಸಿಡುಕಿನಿಂದ ಉತ್ತರ ಕೊಟ್ಟಳು.
“ತಿಳಿಯದಿದ್ದರೆ ಹೋಗಲಿ. ಶೀಲವಂತನಿಗೆ ಗುಣಮುಖವಾದ ಮೇಲೆ ಒಂದು ದಿನ ಅಪರಾಹ್ನ ನೀವಿಬ್ಬರೂ ಗಾಡಿಯಲ್ಲಿ ಎಲ್ಲಿಗೆ ಹೋಗಿದ್ದಿರಿ ?” - ಕುಹಕದ ನಗೆ ಬೀರಿ ಕ್ರಮಿತನು ಪ್ರಶ್ನಿಸಿದನು.

“ಮೋಳಿಗೆ ಮಾರಯ್ಯನವರನ್ನು ನೋಡಿಬರಲು, ನಗರದ ಹೊರಗಿರುವ ಬಾಂಧವರ ಓಣಿಗೆ.”

ಹಠಾತ್ತನೆ ಕ್ರಮಿತನು ದನಿಯನ್ನು ಗಡುಸಾಗಿ ಮಾಡಿಕೊಂಡು, “ನಿಜ ಹೇಳಿರಿ, ನೀವು ಹೋಗಿದ್ದದ್ದು ಮಾರಯ್ಯನವರನ್ನು ನೋಡುವುದಕ್ಕಲ್ಲ. ಭೋಗ ವಿಹಾರಕ್ಕಾಗಿ ನಗರದ ಹೊರಗಿನ ಯಾವುದೋ ರಹಸ್ಯ ಸ್ಥಳಕ್ಕೆ. ಆಗಲೇ ನೀವು ಪ್ರಣಯಿಗಳಾಗಿ ಒಬ್ಬರನ್ನೊಬ್ಬರು ಬಯಸುತ್ತಿದ್ದಿರಿ, ಅಲ್ಲವೆ ?” ಎಂದು ಗಜರಿ ಕೇಳಿದನು.