ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೬೧


ಎಂದು ಅಗ್ಗಳ ಎಚ್ಚರಿಸಿದನು.

“ಅದಕ್ಕೊಂದು ಉಪಾಯವಿದೆ?” -ಬ್ರಹ್ಮಶಿವ ಭರವಸೆಯಿಂದ ಹೇಳಿದನು. :“ನಿಮ್ಮ ಉಪಾಯವೇನು?”

ಶುಚಿರ್ಭೂತವಾಗಿ ಮಡಿಯುಟ್ಟು ಪತ್ರೆ ತರುತ್ತಿರುವೆನೆಂಬುದನ್ನು ಡಂಗುರ ಹೊಯ್ದು ಹೇಳುವಂತೆ ದೊಣ್ಣೆಗಳಿಗೆ ಕಾವಿ ಅರಿವೆಯ ಪತಾಕೆಗಳನ್ನು ಕಟ್ಟಿಬಿಡುತ್ತೇನೆ. ಆಗ ಒಬ್ಬರೂ ಹತ್ತಿರ ಬರುವುದಿಲ್ಲ. ಅಲ್ಲದೆ ಮಹಾದ್ವಾರದಲ್ಲಿ ಈ ದಿನ ಕಾವಲಿರುವ ಭಟರ ನಾಯಕ ಗುರುಗಳ ಖಾಸಾಶಿಷ್ಯ.”

ಕೊಂಚ ಹೊತ್ತಿನ ಮೇಲೆ ಬ್ರಹ್ಮಶಿವ ಪಂಡಿತ, ಸಮವಸ್ತ್ರಗಳ ಗಂಟನ್ನು ಜೋಳಿಗೆಯಲ್ಲಿಟ್ಟು ಮೇಲೆ ಬಿಲ್ವಪತ್ರೆಗಳನ್ನು ಮುಚ್ಚೆ ಕಾವಿಯ ಪತಾಕೆಗಳನ್ನು ಕಟ್ಟಿದ ಜಮದಂಡಿಗಳನ್ನು ಕೈಯಲ್ಲಿ ಹಿಡಿದು ರಾಜಗೃಹಕ್ಕೆ ಹಿಂದಿರುಗಿದನು.

ಆ ದಿನ ಅಪರಾಹ್ನ ರಾಜಗೃಹದ ಮನೆಹೆಗ್ಗಡೆ, ಚಾವಡಿಯಲ್ಲಿ ಕುಳಿತು ಆ ರಾತ್ರಿ ಕರ್ಣದೇವರಸರ ಸಂಗಡ ಧರ್ಮಾಧಿಕರಣದ ಸಮುಖ ಚಾವಡಿಗೆ ಹೋಗುವ ಭಟರು, ಪಸಾಯಿತರು, ಬೋಯಿಗಳೂ ಮತ್ತು ದೀವಟಿಗೆಯವರ ಪಟ್ಟಿ ಮಾಡುತ್ತ ಕುಳಿತಿದ್ದಾಗ, ಭಟನೊಬ್ಬನು ಓಡಿ ಬಂದು "ಪ್ರಭುಗಳು ಅಸ್ವಸ್ಥರಾಗಿದ್ದಾರೆ,” ಎಂದು ಹೇಳಿದನು.

ಹೆಗ್ಗಡೆ ಓಡಿಹೋಗಿ ನೋಡಿದಾಗ ಜಗದೇಕಮಲ್ಲನು ಪ್ರಜ್ಞಾಶೂನ್ಯನಾಗಿ ಪರ್ಯಂಕದ ಮೇಲೆ ಬಿದ್ದಿದ್ದನು. ಬಾಯಿಂದ ಜೊಲ್ಲು ಸುರಿದು ನೊರೆ ಕಟ್ಟಿತ್ತು. ಹೆಗ್ಗಡೆ ಅಲ್ಲಿಯೇ ಇದ್ದ ಔಷಧಿ ಕುಡಿಸಿ, ಮೈಮೇಲೆ ಶಾಲುಹೊದಿಸಿ, ಪ್ರಭುಗಳಿಗೆ ಎಚ್ಚರವಾದ ಕೂಡಲೇ ತಿಳಿಸುವಂತೆ ಭಟನಿಗೆ ಹೇಳಿ ಪುನಃ ಚಾವಡಿಗೆ ಹೋದನು.

ಪ್ರಹರಾನಂತರ ಭಟನು ಬಂದು, ಪ್ರಭುಗಳಿಗೆ ಎಚ್ಚರವಾದುದನ್ನು ತಿಳಿಸಿದಾಗ ಹೆಗ್ಗಡೆ ಕೆಲಸಗಳನ್ನು ಮುಗಿಸಿ ಕುಳಿತಿದ್ದನು.

ಹೆಗ್ಗಡೆಯನ್ನು ಕಂಡ ಕೂಡಲೆ ಜಗದೇಕಮಲ್ಲನು ಬಳಲಿದ ದನಿಯಿಂದ, “ಗುರುದೇವರಿಗೆ ಹೇಳಿ ಕಳುಹಿಸು,” ಎಂದನು.

ಬೊಮ್ಮರಸನು ಬಂದಾಗ ಹೆಗ್ಗಡೆಯ ಶುಶ್ರೂಷೆಯಿಂದ ಚೇತರಿಸಿಕೊಂಡಿದ್ದ ಜಗದೇಕಮಲ್ಲನು ಮೆಲ್ಲನೆದ್ದು ಗುರುದೇವರ ಪಾದಗಳಿಗೆ ನಮಸ್ಕರಿಸಿದನು.

ಬೊಮ್ಮರಸನು ಆಶೀರ್ವದಿಸಿ, ಗಂಭೀರ ಕಂಠದಿಂದ, “ಪರಿಶಿವನ ಕೃಪೆಯಿಂದ ಪ್ರಭುಗಳ ಸಂಕಷ್ಟಗಳೆಲ್ಲ ಪರಿಹಾರವಾಗುವುವು. ಇನ್ನು ನೀವು ವಿಶ್ರಮಿಸಿಕೊಳ್ಳಿ. ಮುಂಜಾವಿನವರೆಗೆ ಆಹಾರ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಈ ರೋಗಕ್ಕೆ ಲಂಘನಂ ಪರಮಮೌಷಧಂ,” ಎಂದನು.