ಈ ಪುಟವನ್ನು ಪರಿಶೀಲಿಸಲಾಗಿದೆ

೩೬೨

ಕ್ರಾಂತಿ ಕಲ್ಯಾಣ


ಜಗದೇಕಮಲ್ಲನು ಪುನಃ ಪರ್ಯಂಕದ ಮೇಲೆ ಮಲಗಿ ಹೆಗ್ಗಡೆಯನ್ನು ಹತ್ತಿರ ಕರೆದು, “ಆಯಾಸವಾಗುತ್ತಿದೆ. ಮಲಗಿ ನಿದ್ದೆ ಮಾಡುತ್ತೇನೆ. ಗುರುದೇವರು ಹೇಳಿದಂತೆ ಮಂಜಾವಿನವರೆಗೆ ನನಗೆ ಆಹಾರ ಬೇಕಿಲ್ಲ. ಪುನಃ ಪುನಃ ಒಳಗೆ ಬಂದು ತೊಂದರೆ ಮಾಡದಂತೆ ಸಮುಖದ ಭಟರಿಗೆ ಹೇಳಿರಿ,” ಎಂದನು.

“ಪ್ರಭುಚಿತ್ತ,” ಎಂದು ಹೆಗ್ಗಡೆ ಮುಂಜಾವಿನವರೆಗೆ ಭಟರಾರೂ ಅರಮನೆಯ ಆ ಭಾಗದಲ್ಲಿ ಸುಳಿಯಲಾಗದೆಂದು ಕಟ್ಟಪ್ಪಣೆ ಮಾಡಿದನು.

ತುಸು ಹೊತ್ತಿನ ಮೇಲೆ ಹೆಗ್ಗಡೆಯೂ, ಬ್ರಹ್ಮೇಂದ್ರ ಶಿವಯೋಗಿಯೂ ಅಲ್ಲಿಂದ ಹೊರಗೆ ಹೋದರು.

ಕೈಯಲ್ಲಿದ್ದ ಜಮದಂಡಿಯನ್ನು ಶಿವಯೋಗಿ ಅಲ್ಲಿಯೇ ಮರೆತನು. ದೀವಟಿಗೆ ಯವನ ಸಮವಸ್ತ್ರದ ಗಂಟು, ಬ್ರಹ್ಮಶಿವನ ಚತುರತೆಯಿಂದ ಆಗಲೇ ಅಲ್ಲಿ ಭದ್ರಗೊಳಿಸಲ್ಪಟ್ಟಿತ್ತು.

ಆ ದಿನ ರಾತ್ರಿ ಮೊದಲ ಜಾಮದಲ್ಲಿ ಕರ್ಣದೇವನು ಮೇನೆ ಹತ್ತಿ ಸಮುಖದ ಚಾವಡಿಗೆ ಹೋದಾಗ ಸಂಗಡಿದ್ದ ದೀವಟಿಗೆಯವರಲ್ಲಿ ಇಬ್ಬರು ವೇಷಧಾರಿ ಸಂಚುಗಾರರೆಂಬುದು ಯಾರಿಗೂ ತಿಳಿಯದು.

***

ಬಿಜ್ಜಳನು ಕರೆದಿದ್ದ ಸಾಮಂತ ಪ್ರತಿನಿಧಿಗಳ ರಹಸ್ಯ ಸಭೆ ಆ ರಾತ್ರಿ ಧರ್ಮಾಧಿಕರಣದ ಸಮುಖದ ಚಾವಡಿಯಲ್ಲಿ ನಡೆಯಬೇಕಾಗಿತ್ತು. ಆದರೆ ಆಹ್ವಾನಗಳು ಸಕಾಲದಲ್ಲಿ, ತಲುಪದೆ, ಪ್ರವಾಸಕ್ಕೆ ಸಾಕಾದಷ್ಟು ಅವಕಾಶವಿಲ್ಲದೆ, ಅಂತರಂಗದಲ್ಲಿ ಬಿಜ್ಜಳನ ಬಗೆಗೆ ವಿರೋಧದಿಂದ, ಬಹು ಮಂದಿ ಪ್ರತಿನಿಧಿಗಳು ಸಭೆಗೆ ಬರಲಿಲ್ಲ. ಬಿಜ್ಜಳನು ಉದ್ದೇಶಿಸಿದ್ದಂತೆ ರಾಜ್ಯಮಟ್ಟದಲ್ಲಿ ನಡೆಯಬೇಕಾಗಿದ್ದ ಸಭೆ, ಆಗ ಕಲ್ಯಾಣದಲ್ಲಿದ್ದ ಮಂತ್ರಿ ಸಾಮಂತ ಸೈನ್ಯಾಧಿಕಾರಿಗಳ ಸಮಾಲೋಚನಾ ಸಭೆಯಾಗಿ ಪರಿಣಮಿಸಿತು. ಕರ್ಣದೇವ ನಾರಣಕ್ರಮಿತ ಮಾಧವ ನಾಯಕರು ಚರ್ಚೆ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಾರಂಭದಲ್ಲಿ ಬಿಜ್ಜಳನು ಸಭೆಯ ಉದ್ದೇಶವನ್ನು ಸಂಗ್ರಹವಾಗಿ ವಿವರಿಸಿ,

“ಈಗ ಶರಣರು ನಡೆಸುತ್ತಿರುವ ಧರ್ಮಕ್ರಾಂತಿಯ ಚಳುವಳಿ ರಾಜ್ಯವನ್ನು ಇಬ್ಭಾಗವಾಗಿ ಮಾಡಿದೆ. ಪರಂಪರಾಗತವಾದ ವರ್ಣಾಶ್ರಮ ಧರ್ಮವನ್ನು ಅನುಮೋದಿಸುವ ಪ್ರಜೆಗಳು ಮತ್ತು ಸಾಮಂತರು ಒಂದು ಕಡೆ, ವರ್ಣಾಶ್ರಮ ಜಾತಿ ಪಂಥಗಳನ್ನು ವಿರೋಧಿಸುವ ಶರಣಧರ್ಮ ಇನ್ನೊಂದು ಕಡೆ. ವಿಶೇಷವೆಂದರೆ ರಾಜ್ಯದ ಶೈವಮಠಗಳು ಸಮಾಜದಲ್ಲಿ ತಮ್ಮ ಹೊಣೆಯನ್ನು ಮರೆತು ಶರಣಧರ್ಮಕ್ಕೆ