ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೭೩ “ನನ್ನ ಆರಾಧ್ಯ ದೇವತೆ ಶನೈಶ್ಚರನು ನನ್ನನ್ನು ಅನುಗ್ರಹಿಸಲು, ಗಗನದ - ತನ್ನ ಉನ್ನತಾಸನವನ್ನು ಬಿಟ್ಟು ಭೂಮಿಗಿಳಿದು ಬಂದನೆ ?” ಎಂದು ಅವನ ಹೃದಯ ತವಕಿಸಿತು. ಬಿಜ್ಜಳನು ಸುಖಾಸನದಿಂದೆದ್ದು ಮಂತ್ರಮುಗ್ಧನಂತೆ ತೆರೆಯ ಬಳಿಗೆ ಹೋಗಿ ನಿಂತನು. ಆ ದೇಹಹೀನ ರುಂಡ ಮಂದಹಾಸದಿಂದ ತನ್ನನ್ನು ಸ್ವಾಗತಿಸುತ್ತಿರುವಂತೆ ಅವನು ಭಾವಿಸಿದನು. ಅದರ ತುಟಿಗಳು ತೆರೆದವು. ಕಣ್ಣಗಳು ಚಲಿಸಿದವು. ಹಣೆ ಸುರಗಿತು. ಕಂದು ಬಣ್ಣದ ತಲೆಗೂದಲು ನಿಮಿರಿ ನಿಂತಿತು. ಬಿಜ್ಜಳನು ಬೆಬ್ಬೆರಗಾಗಿ ನೋಡುತ್ತಿದ್ದಂತೆ ಹರಿತವಾದ ಯಾವುದೋ ಒಂದು ವಸ್ತು ತಟ್ಟನೆ ಹೊಟ್ಟೆಯನ್ನು ಇರಿದಂತಾಗಿ ಬೆಚ್ಚಿ ಚೀರಿಡಲು ಬಾಯ್ದೆರೆದನು. ಬಾಯಿಂದ ಶಬ್ದ ಹೊರಗೆ ಬರುವಷ್ಟರಲ್ಲಿ, ಚಾವಡಿಯ ಇನ್ನೊಂದು ಕಡೆಯ ತರೆ ಸರಿಸಿಕೊಂಡು ಹಿಂದಿನಿಂದ ಬಿಜ್ಜಳನ ಬಳಿ ಬಂದ ಎರಡನೆಯ ದೀವಟಿಗನು, ಕೈಯಲ್ಲಿ ಹಿಡಿದಿದ್ದ ಜಮದಂಡಿಯನ್ನು ಬಲವಾಗಿ ಬೀಸಿದನು. ಬಿಜ್ಜಳನ ರುಂಡ, ಮುಂಡದಿಂದ ಬೇರೆಯಾಗಿ ನೆಲಕ್ಕುರುಳಿತು. ಬಳಿಕ ಆ ಇಬ್ಬರು ದೀವಟಿಗೆಯ ಭಟರು ಚಾವಡಿಯ ಹೊರಗಿನ ಮೊಗಶಾಲೆಗೆ ಹೋಗಿ ನಿಂತು, “ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ವೀರ ಕುಮಾರರು ನಾವು, ಜಗದೇಕಮಲ್ಲ ಬೊಮ್ಮರಸರು !” ಎಂದು ಬೊಬ್ಬಿಟ್ಟರು. ಅವರು ಧರಿಸಿದ್ದ ಸಮವಸ್ತ್ರಗಳನ್ನು ನೋಡಿ ಮೊಗಶಾಲೆಯಲ್ಲಿದ್ದ ಭಟರು ತಮ್ಮ ಕಡೆಯ ದೀವಟಿಗೆಯವರೆಂದು ಮೊದಲು ಉಪೇಕ್ಷಿಸಿದರು. ಅವರು ಕೈಯಲ್ಲಿ ಹಿಡಿದಿದ್ದ ರಕ್ತಮಯ ಜಮದಂಡಿಗಳನ್ನು ಕಂಡಾಗ, ಅವರು ಬೊಬ್ಬಿಟ್ಟ ನುಡಿಗಳ ಅರ್ಥ ಸಿಡಿಲೆರಗಿದಂತೆ ಸ್ಪುಟವಾದಾಗ, ಭಟರು ಬೆಚ್ಚಿ ಎಚ್ಚೆತ್ತು ಅವರನ್ನು ಹಿಡಿಯಲು ಮುನ್ನುಗ್ಗಿದ್ದರು. ಅಷ್ಟರಲ್ಲಿ ಆ ಕೊಲೆಗಡುಕ ದೀವಟಿಗರು ಜಮದಂಡಿಗಳನ್ನು ತಿರುಗಿಸುತ್ತ ಅರಮನೆಯ ಮಹಾದ್ವಾರದ ಕಡೆಗೆ ಓಡಿದರು. ಮಾಧವ ನಾಯಕನು ಬಿಜ್ಜಳನ ನಿರೂಪವನ್ನು ಆತುರದಿಂದ ಎದುರು ನೋಡುತ್ತಿದ್ದರು. ಆರಿಸಿದ ಸೈನ್ಯ ದಳಗಳು ಸಜ್ಜಾಗಿ ನಿಂತಿದ್ದವು. ಅಂದು ಮಧ್ಯರಾತ್ರಿ ಎರಡನೆಯ ಪ್ರಹರ ಮುಗಿದ ಘಂಟೆ ಹೊಡೆಯುತ್ತಲೆ, ಕಲ್ಯಾಣದ ಶೈವಮಠಗಳನ್ನು