ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೪ ಕ್ರಾಂತಿ ಕಲ್ಯಾಣ ನಾಶಮಾಡುವ ಅವಸರದ ಕಾರ್ಯಾಚರಣೆ ಪ್ರಾರಂಭವಾಗಬೇಕಾಗಿತ್ತು. ತನ್ನ ಹನ್ನೆರಡು ವರ್ಷಗಳ ಕನಸು ಇಂದು ನಿಜವಾಗುವುದೆಂದು ಮಾಧವ ನಾಯಕನ ಉತ್ಸಾಹ ತುತ್ತ ತುದಿಯನ್ನು ಮುಟ್ಟಿತ್ತು. ನಿರೂಪ ಸಿದ್ಧವಾದ ಕೂಡಲೇ ತನಗೆ ತಂದುಕೊಡಲು ಅವಸರದ ಭಟನೊಬ್ಬನನ್ನು ಅವನು ಕಲಚೂರ್ಯ ಅರಮನೆಗೆ ಕಳುಹಿಸಿದ್ದನು. ಇನ್ನೂ ಅವನೇಕೆ ಬರಲಿಲ್ಲ ಎಂದು ಅವನು ತವಕಿಸುತ್ತ ನಿಮಿಷಗಳನ್ನೆಣಿಸಲು ಪ್ರಾರಂಭಿಸಿದನು. ತುಸುಹೊತ್ತಿನ ಮೇಲೆ ಅವಸರದ ಭಟನು ಅಲ್ಲಿಗೆ ಬಂದನು. ಆದರೆ ಅವನು ತಂದದ್ದು ನಿರೂಪವನ್ನಲ್ಲ. ಬಿಜ್ಜಳನು ಮಡಿದ ಸುದ್ದಿಯನ್ನು. “ಅರಮನೆಯಲ್ಲಿ ಭಾರೀಗೊಂದಲ. ಬಿಜ್ಜಳರಾಯರು ಮಡಿದರೆಂದು ಸುದ್ದಿ ಹರಡಿದೆ,” ಎಂದು ಅವನು ಹೇಳಿದನು. ಕೂಡಲೆ ಮಾಧವ ನಾಯಕನು ಸಜ್ಜಾಗಿದ್ದ ಸೈನ್ಯದಳಗಳೊಡನೆ ಕಲಚೂರ್ಯ ಅರಮನೆಗೆ ಹೊರಟನು. ಅರಮನೆಯ ಹೆಗ್ಗಡೆ ಮಹಾದ್ವಾರದಲ್ಲಿ ಮಾಧವ ನಾಯಕನಿಗೆ ಎದುರಾಗಿ, “ನಡೆಯಬಾರದ್ದು ನಡೆದು ಹೋಯಿತು, ದಂಡನಾಯಕರ ?” ಎಂದು ವಿಷಾದದಿಂದ ಹೇಳಿದನು. “ಹಾಗಾದರೆ ಪ್ರಭುಗಳು ಮುಡುಪಿದರೆಂದು ಜನ ಹೇಳುತ್ತಿರುವುದು ನಿಜವೆ?” "ಪ್ರಭುಗಳು ಕೊಲೆಯಾದರು.” ಹೆಗ್ಗಡೆ ಉತ್ತರ ಕೊಟ್ಟನು, ಗದ್ಗದ ಕಂಠದಿಂದ. “ಕೊಲೆ !” “ಅಹುದು ಕೊಲೆ. ದೀವಟಿಗರ ವೇಷಧರಿಸಿ ಅಪರಿಚಿತರಿಬ್ಬರು ಅರಮನೆಗೆ ಬಂದು ಪ್ರಭುಗಳನ್ನು ಕೊಲೆ ಮಾಡಿದರು.” “ಕೊಲೆಗಡುಕರನ್ನು ಹಿಡಿದಿರಾ?” “ಅವರು ಮಹಾದ್ವಾರದ ಬಳಿ ಬಂದಾಗ ಭಟರು ಸುತ್ತುಗಟ್ಟಿದ್ದರು. ಅವರಲ್ಲೊಬ್ಬನು ತಪ್ಪಿಸಿಕೊಂಡನು. ಇನ್ನೊಬ್ಬನು ಸತ್ತನು. ಭಟರಿಬ್ಬರು ಮಡಿದರು. ನಾಲ್ಕು ಮಂದಿಗೆ ಗಾಯಗಳಾಗಿವೆ,” -ಎಂದು ಹೆಗ್ಗಡೆ ಮಹಾದ್ವಾರದ ಒಳಾಂಗಣದ ಬಯಲಲ್ಲಿ ಬಿದ್ದಿದ್ದ ದೇಹಗಳನ್ನು ತೋರಿಸಿದನು. ಸಮೀಪದಲ್ಲಿ ಭಟರಿಬ್ಬರು ಕಾವಲಿದ್ದರು. “ಈಗ ಪ್ರಭುಗಳ ಮೃತದೇಹವೆಲ್ಲಿದೆ? ನಾನದನ್ನು ನೋಡಬಹುದೆ?”ಮಾಧವ ನಾಯಕನು ಹೆಗ್ಗಡೆಯನ್ನು ಕೇಳಿದನು.