ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಕ್ರಾಂತಿ ಕಲ್ಯಾಣ

ಯೋಗಿಗೆ ಸಹಜವಾದ ಸಂಯಮದ ಒಂದು ಬಗೆ. ಅಗ್ಗಳನ್ನು ಹೇಳುವುದು ಅಸಂಭಾವ್ಯವಲ್ಲ' -ಎಂದು.

ಮೂವರೂ ಕುಳಿತುಕೊಂಡ ಮೇಲೆ ಜಗದೇಕಮಲ್ಲನು ಹೇಳಿದನು: "ಎರಡು ವಾರಗಳ ಹಿಂದೆ ಬಿಜ್ಜಳರಾಯರ ವಿಶೇಷ ದೂತನು ನನ್ನಲ್ಲಿಗೆ ಬಂದು ಪ್ರೇಮಾರ್ಣವನೆಂಬ ಬಾಲಕನ ವಿಚಾರ ಪ್ರಸ್ತಾಪಮಾಡಿದನು. ಅವನು ಚಾಲುಕ್ಯರಾಣಿ ಕಾಮೇಶ್ವರಿಯ ಕ್ಷೇತ್ರಜಪುತ್ರನೆಂದೂ, ಅವನನ್ನು ನಾನು ದತ್ತಸ್ವೀಕಾರ ಮಾಡಿ ಯುವರಾಜನಾಗಿ ಒಪ್ಪಿಕೊಂಡು ಪಟ್ಟಾಭಿಷೇಕ ಮಾಡಲು ಅನುಮತಿ ಕೊಡಬೇಕೆಂದೂ ಹೇಳಿದನು. ಆಗ ನಾನು ಸಲಹೆಯನ್ನು ನಿರಾಕರಿಸಿದೆ. ಕಾರಣ ಪ್ರೇಮಾರ್ಣವನ ವಿಚಾರ ನನಗೇನೂ ತಿಳಿದಿರಲಿಲ್ಲ."

ಕ್ರಮಿತನು ನಡುವೆ ಹೇಳಿದನು: "ಪ್ರೇಮಾರ್ಣವನ ವಿಚಾರ ನಿಮಗೆ ತಿಳಿಸಿ, ಪಟ್ಟಾಭಿಷೇಕಕ್ಕೆ ನಿಮ್ಮ ಅನುಮತಿ ಪಡೆಯುವುದಕ್ಕಾಗಿಯೇ, ಕಾವ್ಯೋಪದೇಶಕನ ನೆವದಿಂದ ಬಿಜ್ಜಳರಾಯರು ಅಗ್ಗಳದೇವನನ್ನು ಇಲ್ಲಿಗೆ ಕಳುಹಿಸಿದರು. ಕರ್ಣದೇವರಸರ ದುಡಿಕಿನ ವರ್ತನೆಯ ಫಲವಾಗಿ ನಿಮ್ಮನ್ನು ಏಕಾಂತದಲ್ಲಿ ನೋಡುವ ಅವಕಾಶವೂ ಇದುವರೆಗೆ ಅಗ್ಗಳನಿಗೆ ದೊರಕಲಿಲ್ಲ."

"ಈಗ ಅದರ ಅಗತ್ಯವೂ ಇಲ್ಲ," ಜಗದೇಕಮಲ್ಲನು ತಟ್ಟನೆ ಉತ್ತರ ಕೊಟ್ಟನು. "ಪ್ರೇಮಾರ್ಣವನ ತಂದೆ ಯಾರೆಂಬುದು ನನಗೆ ತಿಳಿದಿದೆ."

"ಯಾವಾಗ ತಿಳಿದಿರಿ?" ಅಚ್ಚರಿಯಿಂದ ಕ್ರಮಿತನೆಂದನು.
"ಈ ದಿನ ಬೇಟೆಗೆ ಹೋಗಿ ಕುದುರೆಯಿಂದ ಬಿದ್ದಾಗ."
"ಯಾರು ಹೇಳಿದವರು?"
"ಸ್ವಯಂ ಕಾಮೇಶ್ವರಿ, ಚಾಲುಕ್ಯರಾಣಿ."
"ನೀವು ಬೇಟೆಗೆ ಹೋಗಿದ್ದಾಗ ರಾಣಿಯನ್ನು ನೋಡಿದಿರಾ?"

"ನಾನು ಕುದುರೆಯಿಂದ ಬಿದ್ದು ಎಚ್ಚರತಪ್ಪಿ ಮಲಗಿದ್ದಾಗ ಒಂದು ದೀರ್ಘ ಕನಸನ್ನು ಕಂಡೆ, ಕ್ರಮಿತರೆ. ಕಾಮೇಶ್ವರಿ ಕನಸಲ್ಲಿ ಕಾಣಿಸಿಕೊಂಡು ಎಲ್ಲವನ್ನೂ ಹೇಳಿದಳು.*

ಕ್ರಮಿತನ ಸಂದೇಹ ಮತ್ತೆ ಎಚ್ಚೆತ್ತಿತು. ಇದು ಹುಚ್ಚನ ಅರ್ಥವಿಲ್ಲದ ಮಾತುಗಳೆ? ಅಥವಾ ವಂಚಕನ ಚತುರ ಅಭಿನಯವೇ?

"ನಾವು ಕನಸಿನಲ್ಲಿ ಅನೇಕ ವಿಚಿತ್ರಗಳನ್ನು ಕಾಣುವೆವು. ವಿಲಕ್ಷಣ ಘಟನೆಗಳ ಅನುಭವವಾಗುವುದು. ವಾಸ್ತವಜಗತ್ತಿನಲ್ಲಿ ಅವು ನಿಜವಲ್ಲ. ಪ್ರಭುಗಳು ಈ ಕನಸಿನ ಮಾತು ಮರೆತರೆ ಒಳ್ಳೆಯದು" –ಕ್ರಮಿತನು ಹೇಳಿದನು.