ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೫೩

"ಆದರೆ ಇಂದು ನನಗಾದನುಭವ ಎಲ್ಲ ಕನಸುಗಳಂತಲ್ಲ, ನಾರಣಕ್ರಮಿತರೆ. ವಾಸ್ತವಜಗತ್ತಿನ ಘಟನೆಗಳಿಗಿಂತ ಈ ದಿನ ನನ್ನ ಕನಸಿನಲ್ಲಾದ ಅನುಭವ ಹೆಚ್ಚು ಸತ್ಯವೆಂದು ನಾನು ನಂಬಿದ್ದೇನೆ."

"ನಿಮ್ಮ ನಂಬಿಕೆಯ ಕಾರಣ?"

"ಅದರಿಂದ ನನಗಾದ ಶಾಂತಿ ಸಮಾಧಾನಗಳು. ಹಿಂದೆ ಕೆಲವು ಸಾರಿ ನಾನು ಇದೇ ರೀತಿ ಎಚ್ಚರತಪ್ಪಿ ವಿಚಿತ್ರ ಕನಸುಗಳನ್ನು ಕಂಡಿದ್ದೇನೆ. ಅದರಿಂದ ನನಗೆ ಮನಃಶಾಂತಿ ದೊರಕಿದೆ."

"ನಿಮ್ಮ ಆ ಹಿಂದಿನ ಕನಸುಗಳಲ್ಲಿಯೂ ರಾಣಿ ಕಾಣಿಸಿಕೊಂಡಿದ್ದಳೆ?"
"ಕಾಮೇಶ್ವರಿ ಕನಸಲ್ಲಿ ಬಂದದ್ದು ಇಂದೇ ಮೊದಲ ಸಾರಿ."

ಜಗದೇಕಮಲ್ಲನ ಉತ್ತರಗಳು ಹುಚ್ಚನ ಉತ್ತರಗಳಂತಿಲ್ಲವೆಂಬುದನ್ನು ಕ್ರಮಿತನು ತಿಳಿದನು. ಹಾಗಾದರೆ ಈ ಎಲ್ಲ ಕನಸಿನ ವಾಸ್ತವತೆಯೇನು? ಯೋಗಿಯ ಅಲೌಕಿಕ ದರ್ಶನವೇ? ಅಥವಾ ಕಲ್ಪಕತೆಯ ಚಾತುರ್ಯವೆ?

ಔದಾರ್ಯದ ಡಂಗಿನಿಂದ ಕ್ರಮಿತನು, "ಕನಸಿನಲ್ಲಿ ಕಾಮೇಶ್ವರಿ ಏನು ಹೇಳಿದಳು"? ಎಂದನು.

"ಅದೊಂದು ರಮ್ಯ ಕಥೆ, ಕೇಳುವ ಸಹನೆ ಇದೆಯೇ ನಿಮಗೆ?"

"ಕೇಳುವುದಕ್ಕಾಗಿಯೇ ಕುಳಿತಿದ್ದೇನೆ. ಪ್ರಭುಗಳು ಸಂಕೋಚವಿಲ್ಲದೆ ಹೇಳಬಹುದು."

ಜಗದೇಕಮಲ್ಲನು ಅನ್ಯಮನಸ್ಕನಂತೆ ಕೆಲವು ಕ್ಷಣಗಳು ಮೌನವಾಗಿದ್ದು ಬಳಿಕ ನುರಿತ ಕತೆಗಾರನಂತೆ ಗಂಭೀರವಾಗಿ ಹೇಳಿದನು:

"ಆರು ವರ್ಷಗಳ ಹಿಂದಿನ ಮಾತು. ಅಣ್ಣ ತೈಲಪದೇವನು ಸ್ವರ್ಗಸ್ಥನಾಗಿ ಒಂದು ವರ್ಷವಾಗಿತ್ತು. ನವರಾತ್ರಿ ಸಮಾರಂಭದಲ್ಲಿ ನಾನು ಸಿಂಹಾಸನದಲ್ಲಿ ಕುಳಿತು ಸಭೆ ನಡೆಸಿದ್ದು ಆಗಲೆ. ಆಮೇಲೆ ಎರಡು ತಿಂಗಳ ಅವಧಿಯಲ್ಲಿ ನಾನು ಹೇಳುವ ಘಟನೆ ನಡೆದದ್ದು. ಆಗ ನಾನು ಕಲ್ಯಾಣದಿಂದ ಎರಡು ಗಾವುದ ದೂರದಲ್ಲಿರುವ ಒಂದು ದೊಡ್ಡ ಅರಣ್ಯಕ್ಕೆ ಬೇಟೆಗೆ ಹೋಗಿದ್ದೆ. ವಿಪುಳ ಪರಿವಾರದೊಡನೆ ಎರಡು ವಾರಗಳು ನಾವು ಅರಣ್ಯದ ನಡುವೆ ಶಿಬಿರ ಹಾಕಿಕೊಂಡಿದ್ದೆವು. ಆಗ ಮಾರನಾಯಕನೆಂಬ ಚತುರ ಸಾಮಂತ ನಮ್ಮ ಮನೆಹೆಗ್ಗಡೆ. ಪ್ರತಿದಿನ ಅವನು ನನ್ನ ಸೇವೆಗಾಗಿ ಸಮೀಪದ ಗ್ರಾಮಗಳಿಂದ ಹರೆಯದ ಹೆಣ್ಣೂಬ್ಬಳನ್ನು ಕರೆಸುತ್ತಿದ್ದ.

"ಈ ರೀತಿ ಒಂದು ವಾರ ಕಳೆದಮೇಲೆ ನಾನು ಹೆಗ್ಗಡೆಗೆ ಹೇಳಿದೆ, ಈ