ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಕ್ರಾಂತಿ ಕಲ್ಯಾಣ

ಬಿಚ್ಚೋಲೆ ಗುಂಜಾಹಾರದ ಬೇಡತಿಯರಿಂದ ನನಗೆ ಬೇಸರವಾಗಿದೆಯೆಂದು. ಅದಕ್ಕೆ ಅವನು, ಸಮೀಪ ಗ್ರಾಮದಲ್ಲಿ ಒಬ್ಬ ಸಾಮಂತ ಬಿಡಾರಮಾಡಿದ್ದಾನೆ. ಅವನ ಪರಿವಾರದಲ್ಲಿ ಗೋಮಂತಕದ ಒಬ್ಬ ನರ್ತಕಿ ಇದ್ದಾಳೆ. ಈ ದಿನ ಅವಳನ್ನು ಕರೆಸುತ್ತೇನೆ ಎಂದು ಹೇಳಿದ, ನಾನು ಒಪ್ಪಿದೆ.

"ಅದರಂತೆ ಆ ರಾತ್ರಿ ಆ ನಟುವರ ಹೆಣ್ಣು ಶಿಬಿರಕ್ಕೆ ಬಂದಳು. ಅವಳ ಆಕರ್ಷಕ ಉಡಿಗೆ ತೊಡಿಗೆ ವಿಭ್ರಮವಿಲಾಸಗಳು ನನ್ನನ್ನು ಮರುಳುಗೊಳಿಸಿದವು. ದೇವಲೋಕದ ಅಪ್ಸರೆ ನನಗಾಗಿ ಭೂಮಿಗಿಳಿದು ಬಂದಳೆಂದು ಭಾವಿಸಿ ರಾತ್ರಿಯನ್ನು ಕಳೆದೆ. ಅದೇ ನನ್ನೂಡನೆ ಅವಳ ಮೊದಲ ಮತ್ತು ಕೊನೆಯ ಸಮಾಗಮ. ಆ ಮೇಲೆ ಎಷ್ಟು ಹುಡುಕಿಸಿದರೂ ಅವಳು ಸಿಕ್ಕಲಿಲ್ಲ. ಆರು ವರ್ಷಗಳಿಂದ ಅವಳಿಗಾಗಿ ಹಂಬಲಿಸಿದೆ, ಹಾರೈಸಿದೆ, ಪರಿತಪಿಸಿದೆ. ಈ ದಿನ ಅರಣ್ಯದಲ್ಲಿ ಕುದುರೆಯಿಂದ ಬಿದ್ದು ಎಚ್ಚರತಪ್ಪಿದ್ದಾಗ ಕನಸಿನಲ್ಲಿ ಪುನಃ ಅವಳನ್ನು ಕಂಡೆ. ಹಿಂದೆ ಪರಿಚಯ ಹೇಳಲು ನಿರಾಕರಿಸಿದ್ದ ಅವಳು ಇಂದು ತಾನಾಗಿ ಪರಿಚಯ ಹೇಳಿದಳು."

-ಮುಗಿಸುತ್ತಿದ್ದಂತೆ ಜಗದೇಕನ ಕಂಠ ಮೃದುವಾಯಿತು. ಪರವಶನಂತೆ ಕಣ್ಣುಗಳನ್ನು ಅರೆಮುಚ್ಚಿ ನಿಶ್ಚಲನಾಗಿ ಕುಳಿತನು.

ಆಸಕ್ತಿಯಿಂದ ಕೇಳುತ್ತ ಬೆರಗುವಡೆದು ಪಾರ್ಶ್ವದ ಪೀಠದಲ್ಲಿ ಕುಳಿತಿದ್ದ ಅಗ್ಗಳನ ಕಡೆ ತಿರುಗಿ ಕ್ರಮಿತನು ಮೆಲ್ಲನಿಯಲ್ಲಿ "ಇದು ಯೋಗಿಯ ದಿವ್ಯ ದರ್ಶನವೋ ಅಥವಾ ಕಾಮುಕನ ಹಗಲುಗನಸೋ ನೀವೇ ನಿರ್ಧರಿಸಬೇಕು, ಪಂಡಿತ ಕವಿಗಳೆ," ಎಂದನು.

ಅಗ್ಗಳನ್ನು ಉತ್ತರಿಸಿದನು: "ಯೋಗಿಯ ಅಮೃತಾನುಭವ, ಕಾಮುಕನ ಹಗಲು ಕನಸು, ಇವೆರಡೂ ಒಂದೇ ಸಾಧನೆಯ ಎರಡು ಮುಖಗಳು. ತನ್ನ ಇಷ್ಟದೈವದ ಸಾಧನೆಯಲ್ಲಿ ಕುಳಿತು ಯೋಗಿಯು ಸಮಾಧಿಸ್ಥನಾದಾಗ ಆ ಇಷ್ಟದೈವ ರೂಪತಳೆದು ಎದುರಿಗೆ ನಿಲ್ಲುತ್ತದೆ, ಮಾತಾಡುತ್ತದೆ. ಕಾಮುಕನು ತನ್ನ ಪ್ರೇಯಸಿಯನ್ನು ಕುರಿತು ಚಿಂತಿಸುತ್ತಾನೆ. ಹಗಲಿರುಳುಗಳನ್ನು ಅವಳ ಧ್ಯಾನದಲ್ಲಿ ಕಳೆಯುತ್ತಾನೆ. ಕೊನೆಗೊಂದು ದಿನ ಅವನ ಅರಿವಿಲ್ಲದಂತೆಯೇ ಅವನ ಸಾಧನೆ ಫಲಿಸುತ್ತದೆ. ಅವನ ಒಳಗಣ್ಣುಗಳ ಮುಂದೆ ಪ್ರೇಯಸಿಯ ಕಲ್ಪನಾಮೂರ್ತಿಯನ್ನು ತಂದು ನಿಲ್ಲಿಸುತ್ತದೆ. ಆ ಕಲ್ಪನಾಮೂರ್ತಿಯ ಸಂಗಡ ಅವನು ಮಾತಾಡುತ್ತಾನೆ. ಈ ಎರಡು ನಿದರ್ಶನಗಳಲ್ಲಿ ಸಾಧನೆಯ ಮಾರ್ಗ ಒಂದೇ ಆದರೂ ಫಲಗಳು ಬೇರೆ. ಯೋಗಿಗೆ ದೊರಕುವ ಫಲ, ಜೀವನ ಪಥದಲ್ಲಿ ಅವನನ್ನು ಮೇಲಿಂದ ಮೇಲಕ್ಕೆ ಎತ್ತುತ್ತದೆ. ಕಾಮುಕನಿಗೆ ದೊರಕುವ ಫಲ ಅವನನ್ನು ವಿಷಯಾಸಕ್ತಿಯ ಮಡುವಿನಲ್ಲಿ ಮುಳುಗಿಸುತ್ತದೆ."