ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೬೩

ಸದ್ದಾಗದಂತೆ ಗಾಡಿ ಹತ್ತಿದೆವು. ಅಡಗಿ ಕುಳಿತು ನಿದ್ದೆ ಮಾಡುತ್ತಿದ್ದ ಕೋಳಿಗೆ ಎಚ್ಚರವಾಗಲಿಲ್ಲ. ಪಂಜಿನ ಬೆಳಕು, ಭಟರ ಕೂಗಾಟ, ಅದನ್ನು ಎಚ್ಚರಿಸಿತು. ಭಟನು ಗಾಡಿ ಹತ್ತಿದಾಗ ಅದು ಬೆದರಿ ಹೊರಗೆ ಹಾರಿಬಂತು. ಈ ಸಹಜ ಘಟನೆಗೆ ದೈವಲೀಲೆ ಎಂಬ ದೊಡ್ಡ ಹೆಸರೇಕೆ?" -ಪಿಸುದನಿಯಲ್ಲಿ ಬ್ರಹ್ಮಶಿವನೆಂದನು, ವಾಚಾಲಿಯ ಆವೇಶದಿಂದ.

ಬೊಮ್ಮರಸನಿಗೆ ಅಸಮಾಧಾನವಾಯಿತು. ಅವನು ಹೇಳಿದನು: "ಕೊಂಚ ಹೊತ್ತಿನ ಮೊದಲು ಭಟನ ಕತ್ತಿ ನಮ್ಮನ್ನು ಇರಿಯಲು ಸಿದ್ಧವಾಗಿತ್ತು. ಅದರಿಂದ ನಾವು ಉಳಿದುಕೊಂಡದ್ದು ಹೇಗೆಂಬುದನ್ನು ಯೋಚಿಸಿದೆಯಾ, ಬ್ರಹ್ಮಶಿವ? ಅದು ನಮ್ಮ ಚತುರತೆಯಿಂದಲ್ಲ, ಸಾಹಸದಿಂದಲ್ಲ. ಹುಲ್ಲಲ್ಲಿ ಅಡಗಿದ್ದ ಕೋಳಿ ಮನುಷ್ಯರ ಸುಳಿವು ತಿಳಿದಾಗ ಹೊರಗೆ ಹಾರಿ ಬರುವುದು ಸಹಜ ಘಟನೆ. ನಾವು ಹುಲ್ಲುರಾಶಿಯ ಮೇಲೇರಿದಾಗ ಅದು ಹೊರಗೆ ಬಂದಿದ್ದರೆ ನಮ್ಮ ವಿನಾಶದ ಕಾರಣವಾಗುತ್ತಿತ್ತು. ಆದರೆ ಆ ಸಹಜ ಘಟನೆ ಆಗ ನಡೆಯಲಿಲ್ಲ. ನಾಯಕನು ಕತ್ತಿಯಿಂದ ಹುಲ್ಲಿನ ರಾಶಿಯನ್ನು ಇರಿದಾಗಲೂ ಅದು ನಡೆಯಲಿಲ್ಲ. ಭಟನು ರಾಶಿಯನ್ನೇರಿ, ಇನ್ನೇನು ಸಿಕ್ಕಿ ಬಿದ್ದೆವು ಎಂದು ನಾವು ಕಂಪಿಸುತ್ತಿದ್ದಂತೆ ಆ ಸಹಜ ಘಟನೆ ನಡೆದು ನಮ್ಮನ್ನು ರಕ್ಷಿಸಿತು. ಇದು ದೈವಲೀಲೆಯಲ್ಲದೆ ಮತ್ತೇನು? ಕಣ್ಣಿದ್ದೂ ಕುರುಡರು ನೀವು. ಎದುರಿಗೆ ನಡೆಯುವುದನ್ನು ಸರಿಯಾಗಿ ತಿಳಿಯಲಾರದೆ ಬುದ್ಧಿ ಚತುರತೆಯಿಂದ ಏನೇನೋ ಕಲ್ಪಿಸಿಕೊಳ್ಳುತ್ತೀರಿ. ನಿಮ್ಮ ಬುದ್ಧಿಶಕ್ತಿ ನಿಮ್ಮನ್ನು ನಾಶದ ಕಡೆಗೊಯ್ಯುತ್ತಿದೆ."

ಬಹಳ ಹೊತ್ತು ಇಬ್ಬರೂ ಮೌನವಾಗಿ ಮಲಗಿದ್ದರು. ಮಧ್ಯರಾತ್ರಿಯ ಪ್ರಗಾಢ ಶಾಂತಿ ಎಲ್ಲೆಡೆ ಹರಡಿತ್ತು. ದೂರದಲ್ಲಿ ಗೂಬೆಯೊಂದು ಕೂಗಿದ ಸದ್ದು. ಸಮೀಪದ ಮನೆಯ ಮಾಳಿಗೆಯ ಮೇಲೆ ಎರಡು ಬೆಕ್ಕುಗಳ ಪ್ರಣಯ ಕಲಹ ಆಗ ತಾನೆ ಪ್ರಾರಂಭವಾಗಿತ್ತು. ಬ್ರಹ್ಮಶಿವನು ಪುನಃ ಮಾತಿಗೆ ಪ್ರಾರಂಭಿಸಿದನು.

"ಬೊಮ್ಮರಸರೆ!"
"ಏನು?"

"ಸದ್ಯಕ್ಕೆ ನಾವು ಉಳಿದುಕೊಂಡೆವು. ಬೆಳಕು ಹರಿದ ಮೇಲೆ ಏನು ಮಾಡುವುದು? ಎಲ್ಲಿಗೆ ಹೋಗುವುದು? ಏನಾದರೂ ಯೋಚಿಸಿದಿರಾ?

"ನಮ್ಮನ್ನು ಸದಾಚಾರಿ ಮಠದ ಬಾಗಿಲಿಗೆ ಕರೆತಂದ ದೈವ ಅದನ್ನು ಮೊದಲೇ ನಿರ್ಧರಿಸಿದೆ."

"ದೈವ ನಿರ್ಧರಿಸಿದಂತೆಯೇ ಎಲ್ಲವೂ ನಡೆಯುವುದು. ಆದರೆ ದೈವದ