ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಕ್ರಾಂತಿಕಲ್ಯಾಣ

ಮೇಲೆ ಭಾರಹಾಕಿ ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದು ಪುರುಷ ಲಕ್ಷಣವಲ್ಲ."

"ನಾನು ಹಿಂದೊಂದು ಸಾರಿ ಬುದ್ದಿಚತುರತೆಗಳನ್ನು ನಂಬಿ ನಡೆದು ಬಿಜ್ಜಳನ ಬಂಧಿಯಾದೆ. ಈ ಸಾರಿ ಶಿವನು ತೋರಿದ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದೇನೆ."

"ನಾವು ಬುದ್ದಿ ಕುಶಲತೆಯಿಂದ ನಡೆದರೆ ದೈವಸಹಾಯ ತಾನಾಗಿ ದೊರಕುವುದು. ನಾನು ಯೋಚಿಸಿರುವುದನ್ನು ಹೇಳಲೆ?"

"ಹೇಳು, ಬ್ರಹ್ಮಶಿವ, ನನ್ನ ನಿರ್ಧಾರಕ್ಕೆ ಅನುಕೂಲವಾಗಿದ್ದರೆ ಹಾಗೆಯೇ ಮಾಡಬಹುದು."

ತುಸುಹೊತ್ತು ಯೋಚಿಸುತ್ತಿದ್ದು ಆಮೇಲೆ ಬ್ರಹ್ಮಶಿವನು ಹೇಳಿದನು: "ಬೆಳಕು ಹರಿಯುವ ಮೊದಲೇ ಮಠದ ಸ್ವಾಮಿಗಳು ಬಾಗಿಲು ತೆಗೆಸಲು ಇಲ್ಲಿಗೆ ಬರುತ್ತಾರೆ. ಅವರ ಪಾದಗಳ ಮೇಲೆ ಬಿದ್ದು ರಕ್ಷಣೆ ಬೇಡುವುದು."

"ಅದು ನನ್ನ ನಿರ್ಧಾರಕ್ಕೆ ಸರಿಯಾದ ಮಾರ್ಗ. ಆದರೆ ನೀನು?"

"ನಾನೂ ಹಾಗೆಯೇ ಮಾಡುತ್ತೇನೆ. ಪ್ರಾಣ ಉಳಿಸಿಕೊಳ್ಳಲು ಕಂಡ ಕಂಡವರ ಕಾಲುಕಟ್ಟುತ್ತೇವೆ. ಸದಾಚಾರಿಮಠದ ಸ್ವಾಮಿಗಳಂತಹ ಸಾಧು ಸಜ್ಜನರ ಕಾಲು ಹಿಡಿಯಬಾರದೇಕೆ? ಆದರೊಂದು ಸಂದೇಹ."

"ಸಂದೇಹದ ಕಾರಣ?"
"ಅವರು ನಮ್ಮ ವಿಚಾರ ಕೇಳಿದರೆ ಏನಾದರೂ ಸುಳ್ಳು ಹೇಳಬೇಕಾಗುವುದು."

ಸುಳ್ಳು ಹೇಳಲು ಇದೇ ಮೊದಲಸಾರಿ ಬ್ರಹ್ಮಶಿವನು ಹಿಂದೆಗೆಯುತ್ತಿರುವುದನ್ನು ಕಂಡು ಬೊಮ್ಮರಸನಿಗೆ ಆಶ್ಚರ್ಯವಾಯಿತು. "ಸುಳ್ಳು ಹೇಳುವ ಅಗತ್ಯವೇನಿದೆ? ನಿಜ ಹೇಳುವುದರಿಂದ ನಮಗೇನೂ ನಷ್ಟವಿಲ್ಲ." ಎಂದನು.

"ನಮಗೆ ನಷ್ಟವಿಲ್ಲ. ಆದರೆ ಅದರಿಂದ ಚಾಲುಕ್ಯರಾಣಿ ಕಾಮೇಶ್ವರೀದೇವಿಯವರಿಗೆ ದ್ರೋಹ ಮಾಡಿದಂತಾಗುವುದು. ಅವರು ನಡೆಸುತ್ತಿರುವ ರಾಜ್ಯಕ್ರಾಂತಿಯ ಸಂಚನ್ನು ಹೊರಪಡಿಸಲು ನಮಗೆ ಅಧಿಕಾರವಿಲ್ಲ."

"ನೀನು ಹೇಳುವುದು ನಿಜ. ನಮ್ಮ ವಿಚಾರ ಏನಾದರೂ ಕಥೆ ಕಟ್ಟಿ ಹೇಳುವುದಾದರೆ ಅದನ್ನು ನೀನೇ ಮಾಡಬೇಕು. ನಾನು ಮೌನವಾಗಿರುತ್ತೇನೆ."

ಮೃತ್ಯು ಎದುರಿಗೆ ನಿಂತಾಗ ಮಾನವನಲ್ಲಿ ಹುಟ್ಟುವ ಧರ್ಮಶ್ರದ್ದೆ ಕ್ಷಣಿಕವೆಂದು ಬ್ರಹ್ಮಶಿವನು ಅರಿತಿದ್ದನು. ಬೊಮ್ಮರಸನಂತಹ ಹಠವಾದಿ ಧರ್ಮಾಂಧನಲ್ಲಿಯೂ ಅದು ನಿಜವಾದದ್ದು ಅವನಿಗೆ ಆಶ್ಚರ್ಯವೆನಿಸಿತು. ಮುಂದಿನ ಕಾರ್ಯವಿಧಾನದ